ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಒಂದೊಮ್ಮೆ ನಿರ್ಲಕ್ಷ್ಯದ ಫಲವಾಗಿದ್ದ ಹಲಸಿಗೆ ಈಗ ಮಹತ್ವ ಬಂದಿದೆ. ಮೇಳಗಳನ್ನು ಆಯೋಜಿಸುವ ಮೂಲಕ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಪ್ರಶಂಸನೀಯ ಎಂದು ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಹೇಳಿದರು.ಸಹಜ ಸಮೃದ್ಧ ಸಂಸ್ಥೆಯು ಇಲ್ಲಿನ ಮೂಜಗಂ ಸಭಾಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ಸಾವಯವ ಮತ್ತು ಹಲಸಿನ ಹಬ್ಬಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ದೇಸಿ ತಳಿಗಳೇ ದೇಶದ ನಿಜವಾದ ಸಂಪತ್ತು. ಪ್ರಕೃತಿಯ ಅಪರೂಪದ ಕೊಡುಗೆಯಾದ ದೇಸಿ ತಳಿಗಳ ಧಾನ್ಯ ಮತ್ತು ಫಲಗಳನ್ನು ಉದಾಸೀನದಿಂದ ಕಳೆದುಕೊಳ್ಳಲಾಗಿದೆ. ಉಳಿದಿರುವ ವಿಶಿಷ್ಟ ತಳಿಗಳನ್ನು ಈಗಲಾದರೂ ಸಂರಕ್ಷಣೆ ಮಾಡಬೇಕಿದೆ. ಸಾಂಪ್ರದಾಯಿಕ ಬೆಳೆ ಮತ್ತು ದೇಸಿ ಹಣ್ಣುಗಳನ್ನು ಉಳಿಸಿ ಬೆಳೆಸುವ ರೈತರ ಬಹು ದೊಡ್ಡ ಗುಂಪುಗಳು ಅಲ್ಲಲ್ಲಿ ಆಂದೋಲನದ ರೂಪದಲ್ಲಿ ಕೆಲಸ ಮಾಡುತ್ತಿವೆ. ಇಂತಹ ರೈತರಿಗೆ ಸರ್ಕಾರ ಪ್ರೋತ್ಸಾಹ ಕೊಡಬೇಕು ಎಂದು ಸಲಹೆ ನೀಡಿದರು.ಅತಿಥಿಗಳಾಗಿ ಆಗಮಿಸಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿ ಯೋಗೀಶ್ ಮಾತನಾಡಿ, ಕಡಿಮೆ ನಿರ್ವಹಣೆ ಹಾಗೂ ಅಲ್ಪ ಖರ್ಚಿನ ಬೆಳೆಯಾದ ಹಲಸು ರೈತರಿಗೆ ಬಹುತೇಕ ಖಚಿತವಾದ ಆದಾಯ ಕೊಡುತ್ತದೆ. ನಾಟಿ ಮಾಡಿದ ಐದಾರು ವರ್ಷಗಳಲ್ಲಿ ಇಳುವರಿ ಕೊಡುವ ಹಲಸು, ರೈತರ ಸೂಕ್ತ ಆದಾಯ ಭದ್ರತೆ ಕೊಡಬಲ್ಲದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಜಿ. ಕೃಷ್ಣಪ್ರಸಾದ್, ಹಣ್ಣು ಮತ್ತು ಬೀಜದಲ್ಲಿರುವ ಅಪಾರವಾದ ವಿಟಮಿನ್, ಪೋಷಕ ನಾರು, ಪೈಟೋ ಕೆಮಿಕಲ್ಸ್, ಪ್ರೋಟೀನ್, ಖನಿಜಗಳು ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹವಾಮಾನ ಬದಲಾವಣೆ ಬಿಕ್ಕಟ್ಟಿನ ಸಮಯದಲ್ಲಿ ಹಲಸು ರೈತರಿಗೆ ಖಚಿತ ಆದಾಯ ಕೊಡುವ ಬೆಳೆಯಾಗಿದ್ದು, ಈ ಬಗ್ಗೆ ಕೃಷಿಕರು ಗಮನ ಹರಿಸಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಶಿಗ್ಗಾಂವಿ ತಾಲೂಕಿನ ಕಲಕಟ್ಟಿ ಗ್ರಾಮದ ಹಲಸು ತಳಿ ಸಂರಕ್ಷಕ ಪುಟ್ಟಪ್ಪ ಕುಂದಗೋಳ ಅವರನ್ನು ಸನ್ಮಾನಿಸಲಾಯಿತು. ''''''''ಶಂಕರ'''''''' ಕೆಂಪು ಹಲಸಿನ ತಳಿ ಸಂರಕ್ಷಣೆ ಕುರಿತು ಕೆಂಪರಾಜು ಸಿ.ಎಸ್. ಅನುಭವ ಹಂಚಿಕೊಂಡರು. ರೈತ ಮಹಿಳೆಯರಾದ ಮಳಲಿ ಗ್ರಾಮದ ಕಮಲಮ್ಮ ಕಾನಣ್ಣವರ ಹಾಗೂ ರಾಮಾಪುರದ ಸಾವಿತ್ರಿ ಕೊಡ್ಲಿ ಉಪಸ್ಥಿತರಿದ್ದರು.
ಶ್ರೀದೇವಿ ಭೂತಪಲ್ಲಿ ಸ್ವಾಗತಿಸಿದರು. ಆನಂದತೀರ್ಥ ಪ್ಯಾಟಿ ಪ್ರಾಸ್ತಾವಿಕ ಮಾತನಾಡಿದರು. ಶಾಂತಕುಮಾರ್ ಸಿ. ನಿರೂಪಿಸಿದರು. ಅಶ್ವಿನಿ ವಂದಿಸಿದರು.ಮೇಳದ ವೈಶಿಷ್ಟ್ಯಹಲಸಿನಿಂದ ತಯಾರಿಸುವ ಖಾದ್ಯಗಳಾದ ಚಿಪ್ಸ್, ಪಾಯಸ, ಹಲಸಿನ ಹಲ್ವ, ಹಲಸಿನ ಹಪ್ಪಳ, ಹಣ್ಣಿನ ದೋಸೆ, ಇಡ್ಲಿ, ಪಲಾವ್, ಹಲಸಿನ ಬೀಜಗಳ ವಡೆ, ಬಿರಿಯಾನಿ, ಹಲಸಿನ ಬೋಂಡ, ಹಲಸಿನ ಕೇಕ್, ಪಕೋಡ, ಹಲಸು ಐಸ್ ಕ್ರೀಂ ಇತ್ಯಾದಿ ವಿಶೇಷ ಖಾದ್ಯಗಳು ಜನರಿಗೆ ಮೇಳದಲ್ಲಿ ದೊರೆಯಲಿವೆ.
ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ಹಲಸಿನ ವಿವಿಧ ಖಾದ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಇದ್ದು, ಬೈರಚಂದ್ರ, ಸಿದ್ದು, ವಿಯಟ್ನಾಮ್ ಅರ್ಲಿ, ಆಂಧ್ರ ರೆಡ್ ಸಸಿಗಳ ಮಾರಾಟ ಇದೆ. ಸಾವಯವ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳ ಮಾರಾಟ ನಡೆಯಲಿದೆ. ಹಲಸಿನ ಚಿಪ್ಸ್, ಚಾಕೊಲೇಟ್, ಹಪ್ಪಳ, ಹಲ್ವ, ಹಲಸಿನ ಬೀಜದ ಪುಡಿ, ಹಣ್ಣಿನ ಪುಡಿ ಮಾರಾಟಕ್ಕಿರಿಸಲಾಗಿದೆ.