ಜಿ.ಎಸ್.ರಜಪೂತ
ಕನ್ನಡಪ್ರಭ ವಾರ್ತೆ ಘಟಪ್ರಭಾಸ್ಥಳೀಯ ಪಟ್ಟಣ ಪಂಚಾಯತಿ ಈಗ್ ಪುರಸಭೆಯಾಗಿ ಮೇಲ್ದರ್ಜೆಗೆರಿ ಎಲ್ಲ ಕರಗಳು ಸಾಕಷ್ಟು ಹೆಚ್ಚಾದರೂ ಸಹ ಪಟ್ಟಣದ ಜನರ ಸಮಸ್ಯೆಗಳು ಮಾತ್ರ ಬಗೆ ಹರಿಯುವ ಕಾಲ ಕೂಡಿ ಬಂದಂತಿಲ್ಲ.
ಕೆಲವೂಂದು ಓಣಿಗಳಲ್ಲಿ ಫೇವರ್ಸ್ ಅಳವಡಿಸಲಾಗಿದ್ದು, ಕೆಳಗಿನ ಭರ್ತಿ ಸರಿಯಾಗಿ ಇಲ್ಲದ ಕಾರಣ ಆ ಗಲ್ಲಿಯಲ್ಲಿ ದ್ವಿಚಕ್ರ ವಾಹನ, ನಡೆದುಕೊಂಡು ಹೋದರೇ ಫೇವರ್ಸ್ ಕೆಳಗಿನ ರಾಡಿ ನೀರು ಮೈಯಲ್ಲ ಸಿಡಿಯುತ್ತಿರುವುದು ಗ್ಯಾರಂಟಿ. ಕೆಲವೊಂದು ರಸ್ತೆಗಳಿಗೆ ಹಾಕಿದ ಫೇವರ್ಸ್‌ಗಳ ಅಂಚಿಗೆ ಸರಿಯಾಗಿ ಸಿಮೆಂಟ್ ಹಾಕದೇ ಇರುವುದಕ್ಕೆ ಇದ್ದ ಫೇವರ್ಸ್ ಕಿತ್ತು ತಗ್ಗು ಬಿದ್ದಿವೆ. ಕೆಲವೂಂದು ಕಡೆ ಅವೈಜ್ಞಾನಿಕ ಫೇವರ್ಸ್ ಕಾಮಗಾರಿಯಿಂದ ಅನೇಕ ಮನೆಗಳ ಮುಂದೆ ನೀರು ನಿಂತು ಹೊರಗೆ ಬರದಂತಾಗಿದೆ.ಘಟಪ್ರಭಾದಲ್ಲಿನ ಮುಖ್ಯ ರಸ್ತೆ ಇಲ್ಲಿಯ ಜನರಿಗೆ ಸಂಚರಿಸಲು ಒಂದೇ ರಸ್ತೆ ಇದ್ದು, ಅದರ ಅಕ್ಕ-ಪಕ್ಕದಲ್ಲಿ ನೂರಾರು ಅಂಗಡಿಕಾರರು ತಮ್ಮ ಉದ್ಯೋಗಗಳನ್ನು ನಡೆಸುತ್ತಿದ್ದಾರೆ. ಇದರಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಈ ಹಿಂದೆ ಟ್ರಾಫಿಕ್ ಸಮಸ್ಯೆಯಿಂದ ಮುಕ್ತವಾಗಲು ಇಲ್ಲಿನ ಕಾಯಿಪಲ್ಲೆ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲಾಯಿತು. ಆದರೆ, ಖಾಲಿಯಾದ ರಸ್ತೆಯನ್ನು ಅಕ್ಕ-ಪಕ್ಕದ ಅಂಗಡಿಕಾರರು ತಮ್ಮ ಮನಸ್ಸಿಗೆ ಬಂದಷ್ಟು ಅತೀಕ್ರಮಿಸಿ ತಮ್ಮ ಅಂಗಡಿಗಳನ್ನು ಮುಂದಕ್ಕೆ ತಂದು ವ್ಯಾಪಾರ ನಡೆಸುತ್ತಿರುವ ಕಾರಣ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.
ಇಲ್ಲಿಯ ಮುಖ್ಯ ರಸ್ತೆ ಬೇವಾರಸಾ ಆಗಿದ್ದು, ಇಲ್ಲಿ ಅತಿಕ್ರಮಣಕಾರರಿಗೆ ಯಾರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ. ರಸ್ತೆಯನ್ನು ಅತಿಕ್ರಮಿಸಿ ಅನೇಕ ವಡಾಪಾವ, ಗೋಬಿ ಮಂಚೂರಿ, ಹಣ್ಣಿನ ಅಂಗಡಿಗಳು ಪ್ರಾರಂಭಿಸಲಾಗಿದೆ. ಇದರಿಂದ ಸಂಜೆ ಹಾಗೂ ಬೆಳಗ್ಗೆ ಸಾಕಷ್ಟು ಟ್ರಾಫಿಕ್ ಉಂಟಾಗಿ ವಾಹನ ಸವಾರರು ಪರದಾಡುಂತಾಗಿದೆ.ವೃತ್ತದ ಅಗಲೀಕರಣ:
ಪಕ್ಕದ ಹುಕ್ಕೇರಿ, ರಕ್ಷಿ, ಶಿರಢಾಣ, ಸಂಕೇಶ್ವರ, ಗೋಕಾಕ ನಗರಗಳಲ್ಲಿ ವೃತ್ತಗಳು ಹಾಗೂ ರಸ್ತೆಗಳು ಅಗಲೀಕರಣಗೊಂಡು ಸುಂದರವಾಗಿ ಕಾಣುವ ಜೊತೆಗೆ ಜನರ ಸಂಚಾರಕ್ಕೆ ಅನುಕೂಲವಾಗಿದೆ. ಈ ಭಾಗ್ಯ ನಮ್ಮ ಪಟ್ಟಣಕ್ಕೆ ಯಾವಾಗ ಬರುತ್ತದೆ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಪಟ್ಟಣದ ಮೃತ್ಯುಂಜಯ ವೃತ್ತದಲ್ಲಿಯೂ ಹಣ್ಣು ಮಾರುವವರು, ಹೂವು ಮಾರುವವರು, ಸಣ್ಣ ಸಣ್ಣ ಡಬ್ಬಾಗಳು ತಮಗೆ ಬೇಕಾದ ಹಾಗೆ ವ್ಯಾಪಾರ ಮಾಡುತ್ತಿದ್ದಾರೆ. ಇವರನ್ನು ಪ್ರಶ್ನಿಸುವವರೇ ಇಲ್ಲವಾಗಿದ್ದು, ಈ ಸಣ್ಣಪುಟ್ಟ ಅಂಗಡಿಕಾರರಿಂದ ವೃತ್ತದಲ್ಲಿ ದಿನನಿತ್ಯ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ.ಸ್ವಚ್ಛವಾಗದ ಚರಂಡಿಗಳು:
ಚರಂಡಿಗಳ ಅಕ್ಕಪಕ್ಕದಲ್ಲಿ ಸಾಕಷ್ಟು ಗಿಡ ಗಂಟಿ ಬೆಳೆದಿದ್ದು, ಚರಂಡಿಗಳು ತುಂಬಿ ತುಳುಕುತ್ತಿವೆ. ಸ್ಚಚ್ಛಗೊಳಿಸಿದ ಚರಂಡಿಗಳ ತ್ಯಾಜ್ಯವನ್ನು ಕೂಡಲೇ ವಿಲೆವಾರಿ ಮಾಡದೇ ಇರುವ ಕಾರಣ ಜನರಿಗೆ ಸಾಕಷ್ಟು ತೂಂದರೆಯಾಗುತ್ತಿದೆ. ಈ ಕುರಿತು ಪುರಸಭೆ ಸಿಬ್ಬಂದಿಗೆ ಅನೇಕ ಬಾರಿ ಹೇಳಿದರೂ ಸಿಬ್ಬಂದಿ ಜನರಿಗೆ ಸ್ಪಂದಿಸುತ್ತಿಲ್ಲ.ಪುರಸಭೆಗೆ ಕಟ್ಟಡ ಇಲ್ಲ:
ಪುರಸಭೆಯಾಗಿ ಪರಿವರ್ತನೆಗೊಂಡ ಪಟ್ಟಣಕ್ಕೆ ಪುರಸಭೆಗೆ ತಕ್ಕಂತೆ ಅಗತ್ಯ ಕಟ್ಟಡ ವ್ಯವಸ್ಥೆ ಇಲ್ಲ. ಹೊಸ ಕಟ್ಟಡಕ್ಕೆ ಹಣ ತೆಗೆದಿಟ್ಟಿದ್ದರೂ ಸಹ ಕಟ್ಟಡಕ್ಕೆ ಸೂಕ್ತ ಜಾಗ ಇಲ್ಲ. ಮೂಲ ಕಚೇರಿ ಹಳೆ ಕಟ್ಟಡದಲ್ಲಿ ನಡೆದರೆ ಧೂಪದಾಳ ಭಾಗದ ಕಚೇರಿಯನ್ನು ಧೂಪದಾಳ ಹಳೆ ಕಚೇರಿಯಲ್ಲಿ ನಡೆಸಲಾಗುತ್ತಿದೆ.ಕಸದಲ್ಲಿ ಬಿದ್ದ ಕಸದ ಡಬ್ಬಿಗಳು:
ಮನೆ ಮನೆಗೆ ಹಂಚಲು ಎಂದು ಪಟ್ಟಣ ಪಂಚಾಯತಿ ಸಮಯದಲ್ಲಿ ಸುಮಾರು 600ಕ್ಕೂ ಹೆಚ್ಚು ಕಸದ ಡಬ್ಬಿಗಳನ್ನು ಖರೀದಿ ಮಾಡಿದ್ದು, ಈ ಸದರಿ ಡಬ್ಬಿಗಳನ್ನು ಇಲ್ಲಿಯ ವರೆಗೆ ಹಂಚದೆ ಕಚೇರಿಯ ಗೋಡಾಂವದಲ್ಲಿ ಎಸೆದಿದ್ದಾರೆ. ಈ ಡಬ್ಬಿಗಳನ್ನು ಈ ರೀತಿ ಗೋಡಾಂವದಲ್ಲಿ ಎಸೆಯುದಾದರೇ ಅಷ್ಟೊಂದು ಹಣ ಖರ್ಚು ಮಾಡುವ ಅವಶ್ಯಕತೆ ಏನಿತ್ತು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.---------------
4 ವರ್ಷ ಕಳೆದರೂ ನಡೆಯದ ಚುನಾವಣೆಪಟ್ಟಣ ಪಂಚಾಯತಿಯ ಅವದಿ ಮುಗಿದು 4 ವರ್ಷ ಕಳೆದರೂ ಚುನಾವಣೆ ಆಗುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು ಕುಂಟ ನೆಪ ಹೇಳುತ್ತ ಕಾಲಕಳೆಯುತ್ತಿದ್ದಾರೆ. ವಾರ್ಡ್‌ಗಳ ವಿಂಗಡನೆಯಾಗಿದ್ದು, ಮತದಾರರ ಯಾದಿ ಮತ್ತು ಕೆಟೆಗರಿ ಪೂರ್ಣಗೊಂಡಿಲ್ಲ ಆದರೂ ಇತ್ತಕಡೆಗೆ ಯಾವುದೇ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.
ಪುರಸಭೆಗೆ ಆಡಳಿತ ಮಂಡಳಿ ಇಲ್ಲದೇ ತಮ್ಮ ಕೆಲಸ ಕಾರ್ಯುಗಳಿಗಾಗಿ ಜನರು ಪರದಾಡುವಂತಾಗಿದೆ. ಪುರಸಭೆಯ ಪರಿಸ್ಥಿತಿ ಈ ರೀತಿ ಇದ್ದರೂ ಪುರಸಭೆ ಹಿಂದಿನ ಮುಖ್ಯಾಧಿಕಾರಿ ಹಾಗೂ ಈಗಿನ ಮುಖ್ಯಾಧಿಕಾರಿ ಮತ್ತು ಸ್ಥಳೀಯ ಶಾಸಕರು ಕಣ್ಣು ಮುಚ್ಚಿ ಕುಳಿತ್ತಿದ್ದು ಏಕೆ ಎಂಬ ಪ್ರಶ್ನೆಗೆ ಸಾರ್ವಜನಿಕರಿಗೆ ಉತ್ತರ ದೊರೆಯಬೇಕಿದೆ.