ಬಹುಮಾಧ್ಯಮ ಹೊಸ ಸಂಶೋಧನೆ ಅತ್ಯವಶ್ಯಕ

KannadaprabhaNewsNetwork |  
Published : Dec 14, 2024, 12:51 AM IST
ಪೋಟೋ: 13ಎಸ್ಎಂಜಿಕೆಪಿ01ಶಿವಮೊಗ್ಗ ನಗರದ ಜೆ.ಎನ್‌.ಎನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಲ್ಟಿಮಿಡಿಯಾ ಪ್ರೊಸೆಸಿಂಗ್‌, ಕಮ್ಯುನಿಕೇಷನ್‌ ಮತ್ತು ಇನ್ಫಾರ್ಮೇಷನ್‌ ಟೆಕ್ನಾಲಜಿ ಕುರಿತ ನಾಲ್ಕನೇ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ವಿಚಾರಸಂಕಿರಣದ ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಬಹುಮಾಧ್ಯಮ (ಮಲ್ಟಿಮಿಡಿಯಾ ಪ್ರೊಸೆಸಿಂಗ್) ನಿರ್ವಹಣೆಯಲ್ಲಿ ಹೊಸ ಸಾಧ್ಯತೆಗಳ ಕುರಿತಾಗಿ ಮತ್ತಷ್ಟು ಸಂಶೋಧನೆಗಳ ಅವಶ್ಯಕತೆಯಿದ್ದು, ಈ ಹಿನ್ನಲೆಯಲ್ಲಿ ವಿದ್ಯಾಸಂಸ್ಥೆಗಳಲ್ಲಿ ಸಂಶೋಧನಾ ಕೇಂದ್ರಗಳು ಪ್ರಾರಂಭವಾಗಲಿ ಎಂದು ಬೆಂಗಳೂರು ಐಐಎಸ್ಸಿ ಪ್ರಾಧ್ಯಾಪಕ ಟಿ. ಶ್ರೀನಿವಾಸ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಹುಮಾಧ್ಯಮ (ಮಲ್ಟಿಮಿಡಿಯಾ ಪ್ರೊಸೆಸಿಂಗ್) ನಿರ್ವಹಣೆಯಲ್ಲಿ ಹೊಸ ಸಾಧ್ಯತೆಗಳ ಕುರಿತಾಗಿ ಮತ್ತಷ್ಟು ಸಂಶೋಧನೆಗಳ ಅವಶ್ಯಕತೆಯಿದ್ದು, ಈ ಹಿನ್ನಲೆಯಲ್ಲಿ ವಿದ್ಯಾಸಂಸ್ಥೆಗಳಲ್ಲಿ ಸಂಶೋಧನಾ ಕೇಂದ್ರಗಳು ಪ್ರಾರಂಭವಾಗಲಿ ಎಂದು ಬೆಂಗಳೂರು ಐಐಎಸ್ಸಿ ಪ್ರಾಧ್ಯಾಪಕ ಟಿ. ಶ್ರೀನಿವಾಸ ಅಭಿಪ್ರಾಯಪಟ್ಟರು.

ನಗರದ ಜೆ.ಎನ್‌.ಎನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ವಿಭಾಗದ ವತಿಯಿಂದ ಐಇಇಇ ಬೆಂಗಳೂರು ಮತ್ತು ಮಂಗಳೂರು ವಿಭಾಗ, ಐಇಟಿಇ ಶಿವಮೊಗ್ಗ ಕೇಂದ್ರ, ಐಇಇಇ ಕಾಮ್‌ಸಾಕ್‌ ಬೆಂಗಳೂರು ವಿಭಾಗದ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಲ್ಟಿಮಿಡಿಯಾ ಪ್ರೊಸೆಸಿಂಗ್‌, ಕಮ್ಯುನಿಕೇಷನ್‌ ಮತ್ತು ಇನ್ಫಾರ್ಮೇಷನ್‌ ಟೆಕ್ನಾಲಜಿ ಕುರಿತ ನಾಲ್ಕನೇ ಅಂತರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಜಗತ್ತಿನಲ್ಲಿ ನಡೆಯುತ್ತಿರುವ ವಿಷಯಗಳ ವಾಸ್ತವತೆಯನ್ನು ವಿಮರ್ಶೆ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕಿದೆ. ಸಂಶೋಧನೆಗಳು ಸ್ವಯಂ ಆಸಕ್ತಿಯುಳ್ಳ ಪ್ರಕ್ರಿಯೆ ಆಗಬೇಕು. ಸಂಶೋಧನೆಗಾಗಿ ಜಗತ್ತಿನಲ್ಲಿ ನಡೆಯುತ್ತಿರುವ ಆವಿಷ್ಕಾರಗಳ ಪ್ರೇರಣೆ ಪಡೆಯಿರಿ. ಹೊಸ ಸಂಶೋಧನಾ ಲೇಖನಗಳ ಅಧ್ಯಯನಶೀಲತೆ ಮತ್ತು ವಿಮರ್ಶಾತ್ಮಕ ಕೌಶಲ್ಯತೆ ನಿಮ್ಮದಾಗಲಿ ಎಂದು ಹಾರೈಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್‌ ಮಾತನಾಡಿ, ಬದಲಾವಣೆ ಜಗದ ನಿಯಮ. ಇಂಜಿನಿಯರಿಂಗ್ ವಿದ್ಯಾಭ್ಯಾಸ ಈ ಮೊದಲಿನಂತಿಲ್ಲ. ಕೇವಲ ಪಠ್ಯದ ಅಧ್ಯಯನಕ್ಕೆ ಮಾತ್ರ ಸೀಮಿತವಾಗದೆ, ವಾಸ್ತವತೆಯ ಜ್ಞಾನವು ಬೇಕಿದೆ. ಭವಿಷ್ಯದ ತಾಂತ್ರಿಕ ಆವಿಷ್ಕಾರಗಳ ಅವಶ್ಯಕತೆಯ ಕುರಿತಾಗಿ ಚಿಂತನೆಗಳಿಗೆ ಇಂತಹ ಕಾರ್ಯಾಗಾರ ಪ್ರೇರಣೆಯಾಗಲಿ. ಆಧುನಿಕತೆಯ ಒಳಗೆ ಮಲ್ಟಿಮೀಡಿಯಾ ಬಹುದೊಡ್ಡ ಶಕ್ತಿಯಾಗಿದ್ದು, ಮಾಧ್ಯಮಗಳಲ್ಲಿ ಕಾಣುವ ನೇರ ಪ್ರಸಾರ, ಸುದ್ದಿ ಪ್ರಸರಣ ಎಲ್ಲವೂ ಸೇರಿದೆ. ಅಂತಹ ಪ್ರಸರಣಕ್ಕೆ ಮತ್ತಷ್ಟು ವೇಗ ಮತ್ತು ನಿಖರತೆಯ ಕುರಿತಾಗಿ ಮತ್ತಷ್ಟು ಸಂಶೋಧನೆಗಳ ಬಗ್ಗೆ ಈ ವಿಚಾರಸಂಕಿರಣದಲ್ಲಿ ಚರ್ಚೆ ನಡೆಯಲಿ ಎಂದು ಹೇಳಿದರು.

ಆಸ್ಟ್ರೇಲಿಯಾ ಡಿಕಿನ್‌ ವಿಶ್ವವಿದ್ಯಾಲಯದ ಡಾ. ಗ್ಯಾಂಗ್‌ ಲಿ ಮಾತನಾಡಿ, ಕೃತಕ ಬುದ್ದಿಮತ್ತೆ ಎಂಬುದು ಸಾಮಾನ್ಯ ಜನರ ಜೀವನಕ್ಕೆ ಬಹಳ ಹತ್ತಿರವಾಗಿದೆ. ಮಲ್ಟಿಮಿಡಿಯಾ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನವು ಅದ್ಭುತ ನಿಖರತೆಯನ್ನು ನೀಡುತ್ತಿದೆ. ಈ ನಡುವೆ ತಂತ್ರಜ್ಞಾನ ಬೆಳೆದಂತೆಲ್ಲ, ಮನುಷ್ಯನಲ್ಲಿರುವ ನೈತಿಕತೆ ಮತ್ತು ವೃತ್ತಿಪರತೆ ಎಂಬುದು ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.

ಎನ್‌ಇಎಸ್‌ ಕಾರ್ಯದರ್ಶಿ ಎಸ್.‌ಎನ್. ನಾಗರಾಜ ಮಾತನಾಡಿ, ಎಮೊಷನಲ್‌ ಎಐ ಮೂಲಕ ತಂತ್ರಜ್ಞಾನ ದೈನಂದಿನ ಕೆಲಸ ಕಾರ್ಯಗಳ ಜೊತೆಯಲ್ಲಿ ಭಾವನಾತ್ಮಕವಾಗಿಯು ಸ್ಪಂದಿಸಲು ಪ್ರಾರಂಭಿಸುತ್ತಿದೆ. ಅನೇಕ ಸೃಜನಶೀಲ ಚಿಂತನೆಗಳನ್ನು ತಂತ್ರಜ್ಞಾನವೇ ಶಿಫಾರಸ್ಸು ಮಾಡುವ ಕಾಲ ಸನಿಹವಾಗಿದೆ. ಇದರಿಂದ ಜನರ ಸಮೂಹದಿಂದಲೇ ದೂರಾಗಿ ಯಾಂತ್ರಿಕರಣದ ಗುಲಾಮರಾಗುವ ಆತಂಕ ಎದುರಾಗುತ್ತಿದೆ ಎಂದು ಹೇಳಿದರು.

ಐಇಇಇ ಮಂಗಳೂರು ಉಪವಿಭಾಗದ ಮುಖ್ಯಸ್ಥ ಡಾ. ವಾಸುದೇವ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ. ವಿಜಯಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಸಂಶೋಧನಾ ಡೀನ್‌ ಡಾ. ಎಸ್.ವಿ. ಸತ್ಯನಾರಾಯಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್‌ಇಎಸ್‌ ನಿರ್ದೇಶಕರಾದ ಟಿ.ಆರ್‌. ಅಶ್ವಥನಾರಾಯಣ ಶ್ರೇಷ್ಟಿ, ಎಚ್.ಸಿ. ಶಿವಕುಮಾರ್‌, ಆಜೀವ ಸದಸ್ಯರಾದ ಕಿಶೋರ್‌ ಶೀರನಾಳಿ, ಗುರುಪ್ರಸಾದ್‌, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್. ರಾಮಚಂದ್ರ, ಶೈಕ್ಷಣಿಕ ಡೀನ್‌ ಡಾ.ಪಿ. ಮಂಜುನಾಥ, ಕಾರ್ಯಕ್ರಮ ಸಂಯೋಜಕರಾದ ಡಾ. ಶೀಲಾ, ಡಾ. ಪ್ರಮೋದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ವಿಚಾರಸಂಕಿರಣದ ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ