ಸಹಕಾರಿ ಸಂಘಗಳು, ಆಟೋ ಚಾಲಕರ ಸಂಘದ ಬೆಂಬಲ
ಕನ್ನಡಪ್ರಭ ವಾರ್ತೆ ಶಿರಸಿಇಲ್ಲಿನ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗ್ರಹಿಸಿ ಶಿರಸಿ ತಹಸೀಲ್ದಾರ್ ಕಚೇರಿ ಎದುರು ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಮೂರು ದಿನ ಪೂರೈಸಿದ್ದು, ಸತ್ಯಾಗ್ರಹ ಸ್ಥಳಕ್ಕೆ ಶಿರಸಿಯ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಆಟೋ ರಿಕ್ಷಾ ಚಾಲಕರ ಸಂಘ ಅಧ್ಯಕ್ಷರು ಭೇಟಿ ನೀಡಿ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶಿರಸಿಯ ದೊಡ್ನಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಎನ್. ಹೆಗಡೆ ಭೇಟಿ ನೀಡಿ ತಮ್ಮ ವೈಯಕ್ತಿಕ ಹಾಗೂ ಸಹಕಾರಿ ಸಂಘದ ಬೆಂಬಲ ನೀಡಿದರು.ಅವರು ಕೂಡಾ ಡಿ.4 ರಂದು ಸುವರ್ಣಸೌಧಕ್ಕೆ ಆಗಮಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳವುದಾಗಿ ತಿಳಿಸಿದರು. ನಂತರ ಯಲ್ಲಾಪುರ ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷ ಸಂತೋಷ ನಾಯ್ಕ ಆಗಮಿಸಿ ಧರಣಿ ಸತ್ಯಾಗ್ರಹ ಹೋರಾಟಕ್ಕೆ ಆಟೋ ಚಾಲಕರ ಸಂಘದ ಸಂಪೂರ್ಣ ಬೆಂಬಲ ನೀಡುವುದಾಗಿ ಹಾಗೂ ನಮ್ಮ ಸಂಘದ ಸದಸ್ಯರು ಬೆಳಗಾವಿಗೆ ಆಗಮಿಸುವುದಾಗಿ ಹೇಳಿ ಅನಂತಮೂರ್ತಿ ಅವರ ಹೋರಾಟ ಜನರ ಹೋರಾಟ, ಜನತೆ ಇದಕ್ಕೆ ಬೆಂಬಲಿಸಬೇಕು, ಅವರು ಜನರ ಅನುಕೂಲಕ್ಕಾಗಿ ಹೋರಾಟಕ್ಕೆ ಇಳಿದಿದ್ದಾರೆ ಎಂದು ಹೇಳಿ ತಮ್ಮ ಬೆಂಬಲ ಘೋಷಿಸಿದರು.ಈ ವೇಳೆ ಮಾತನಾಡಿದ ಅನಂತಮೂರ್ತಿ ಹೆಗಡೆ, ನಮ್ಮ ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಿರಂತರ,ಇದಕ್ಕೆ ನಾವು ಯಾವುದೇ ರೀತಿಯಲ್ಲೂ ಹೆದರುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ಕೂಡ ಒಗ್ಗಟ್ಟಾಗಿದ್ದೇವೆ. ಇಂದು ನೂರಾರು ಜನ ಬಂದು ತಮ್ಮ ಸಹಿ ಹಾಕಿ ಬೆಂಬಲ ನೀಡಿದ್ದಾರೆ, ಇಷ್ಟು ದಿನ ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇಲ್ಲ ಆದ್ದರಿಂದ ಆಸ್ಪತ್ರೆ ಆಗೋದಿಲ್ಲ ಎಂದು ಜನರು ತಿಳಿದಿದ್ದರು, ಆದರೆ ಈಗ ಅವರಲ್ಲಿ ಒಂದು ಆಶಾಭಾವನೆ ಮೂಡುತ್ತಿದೆ. ಜನರೇ ನಮ್ಮನ್ನು ಈ ಹೋರಾಟದಲ್ಲಿ ಸೇರಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಜನರ ಉತ್ಸಾಹ ಇಮ್ಮಡಿಯಾಗುತ್ತಿದೆ. ಆಕ್ರೋಶ ಉಂಟಾಗುತ್ತಿದೆ, ಎಲ್ಲರಲ್ಲೂ ಹೋರಾಟದ ಮನೋಭಾವ ಬಂದಿದೆ ಎಂದರು.
ಹಿರಿಯ ಪತ್ರಕರ್ತ ಪರಮಾನಂದ ಹೆಗಡೆ, ಕರ್ನಾಟಕ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ ಹರಿಕಾಂತ, ಸಾಮಾಜಿಕ ಕಾರ್ಯಕರ್ತ ಕೇಮು ವಂದಿಗೆ ಸೇರಿದಂತೆ ಇನ್ನಿತರರು ಧರಣಿಯಲ್ಲಿ ಉಪಸ್ಥಿತರಿದ್ದರು.