ಮುಳವಾಡ ನೀರಾವರಿ: 5ಎ, 5ಬಿ ಕಾಮಗಾರಿಗೆ ಶೀಘ್ರ ಟೆಂಡರ್‌: ಎಂಬಿಪಾ

KannadaprabhaNewsNetwork | Published : Jan 28, 2024 1:17 AM

ಸಾರಾಂಶ

ಕಾತ್ರಾಳ, ಜಾಲಗೇರಿ ಕೆರೆಗಳಿಗೆ ಬೇರೆ ತುಂಬಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ಎಂಬಿಪಾ ಅವರು ಮನುಕ ಕಲರ್‌ ಶಾರ್ಟಿಂಗ್ ಮಷಿನ್ ಉದ್ಘಾಟಿಸಿ ಮಾತನಾಡಿದರು

ಕನ್ನಡಪ್ರಭ ವಾರ್ತೆ ವಿಜಯಪುರ

ಮುಳವಾಡ ಏತನೀರಾವರಿ ಯೋಜನೆ 3ನೇ ಹಂತದ 15ನೇ ವಿತರಣೆ ಕಾಲುವೆ, 5ಎ ಮತ್ತು 5ಬಿ ಹೆಡ್ ವರ್ಕ್ ಕಾಮಗಾರಿಗಳಿಗೆ ಕೆಬಿಜೆಎನ್ಎಲ್ ಬೋರ್ಡ್ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಬಬಲೇಶ್ವರ ತಾಲೂಕಿನ ಅರ್ಜುಣಗಿಯಲ್ಲಿ ಶುಕ್ರವಾರ ಮೌನೇಶ್ವರ ಮನುಕ ಕಲರ್‌ ಶಾರ್ಟಿಂಗ್ ಮಷಿನ್ ಉದ್ಘಾಟಿಸಿ ಅವರು ಮಾತನಾಡಿದರು. ಜಲಸಂಪನ್ಮೂಲ ಸಚಿವನಾಗಿದ್ದಾಗ ನೀರಾವರಿ ಯೋಜನೆಗಳಿಗಾಗಿ ಒಂಬತ್ತು ಸ್ಥಾವರ ಮತ್ತು 1000 ಕಿಮೀ ಮುಖ್ಯ ಕಾಲುವೆ ನಿರ್ಮಾಣ ಮಾಡಿದ್ದೇನೆ. ₹ 14000 ಕೋಟಿ ಖರ್ಚು ಮಾಡಿ ಕಾಲುವೆಗಳ ಮೂಲಕ ರೈತರ ಹೊಲಗಳಿಗೆ, ಕೆರೆಗಳಿಗೆ ಹಾಗೂ ಹಳ್ಳಗಳಿಗೆ ನೀರು ಹರಿಸಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಕೂಡ ಗಣನೀಯವಾಗಿ ಹೆಚ್ಚಿದೆ. ಇದರ ಪರಿಣಾಮ ಈ ಬಾರಿ ಜಿಲ್ಲೆಯಲ್ಲಿ ತೀವ್ರ ಬರವಿದ್ದರೂ ಅದು ಅಷ್ಟೊಂದು ಪರಿಣಾಮ ಬೀರಿಲ್ಲ. ಮಹಿಳೆಯರು ಮತ್ತು ಮಕ್ಕಳು ಕುಡಿಯುವ ನೀರಿಗಾಗಿ ಅಲೆದಾಡುವುದು ತಪ್ಪಿದೆ ಎಂದು ಹೇಳಿದರು.

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದ ನಂತರ ನೀರು ಬಿಡುಗಡೆಗೆ ಬೇಕಾಗಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಈಗ ಬಾಕಿ ಇರುವ 14000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಮುಳವಾಡ ಏತ ನೀರಾವರಿ ಯೋಜನೆ 3ನೇ ಹಂತದ ಕಾಮಗಾರಿಗಳಿಗೆ ಬೋರ್ಡ್ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಟೆಂಡರ್ ಕರೆದು ಭೂಸ್ವಾಧೀನ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡು ರೈತರ ಜಮೀನುಗಳಿಗೆ ಶಾಶ್ವತವಾಗಿ ನೀರು ಒದಗಿಸಲಾಗುವುದು. ಇದೇ ವೇಳೆ ಕಾತ್ರಾಳ ಮತ್ತು ಜಾಲಗೇರಿ ಕೆರೆಗಳಿಗೆ ಬೇರೆ ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಚಿಕ್ಕಪಡಸಲಗಿ ಬಬಲಾದಿ ಮಠಾಧೀಶ ಶಿವರುದ್ರಯ್ಯ ಮಹಾಸ್ವಾಮಿಗಳು, ಚಿಕ್ಕಪಡಸಲಗಿ ಅಕ್ಕಮಹಾದೇವಿ ಆಶ್ರಮದ ಮಾತೆ ಅಕ್ಕಮಹಾದೇವಿ, ಮನುಕ ಗ್ರೇಡಿಂಗ್ ಘಟಕದ ಮಾಲೀಕ ಮತ್ತು ಪ್ರಗತಿಪರ ರೈತ ಗುರಪ್ಪ ಬಡಿಗೇರ, ಮುಖಂಡರಾದ ಬಸವರಾಜ ದೇಸಾಯಿ, ಚನ್ನಪ್ಪ ಕೊಪ್ಪದ, ಮಲ್ಲಪ್ಪ ಕೆಂಪವಾಡ, ವೈ.ಎನ್.ಪಾಟೀಲ, ರಫೀಕ ಸೋನಾರ, ನಿರ್ಮಲ ರುಣವಾಲ, ಅಶೋಕ ಕಾಖಂಡಕಿ ಮುಂತಾದವರು ಇದ್ದರು.

Share this article