ಹಾಸನದಲ್ಲಿ ಮೂರೇ ನಿಮಿಷದಲ್ಲಿ ಬಜೆಟ್‌ ಓದಿದ ನಗರಸಭೆ ಆಯುಕ್ತ

KannadaprabhaNewsNetwork | Published : Mar 17, 2024 1:46 AM

ಸಾರಾಂಶ

ಹಾಸನ ನಗರಸಭೆ ಕುವೆಂಪು ಸಭಾಂಗಣದಲ್ಲಿ ಶನಿವಾರ ಮದ್ಯಾಹ್ನ ೨.೪೦ಕ್ಕೆ ಪ್ರಾರಂಭವಾದ ೨೦೨೪-೨೫ನೇ ವರ್ಷದ ಆಯವ್ಯಯ ಮಂಡನೆಯನ್ನು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅಧ್ಯಕ್ಷತೆಯಲ್ಲಿ ನಗರಸಭೆ ಆಯುಕ್ತರಾದ ಸಿ. ಯೋಗಾನಂದ್ ಅವರು ಕೇವಲ ಮೂರು ನಿಮಿಷದಲ್ಲಿ ಬಜೆಟ್ ಓದಿ ಮುಗಿಸಿದರು.

ಆಯವ್ಯಯ ಸಭೆ ಅಧ್ಯಕ್ಷತೆ ವಹಿಸಿದ್ದ ಡಿಸಿ ಸತ್ಯಭಾಮ । ೨.೭೯ ಕೋಟಿ ರು. ಬಜೆಟ್‌ । ನಗರಸಭೆ ಸಮಸ್ಯೆ ಬಗ್ಗೆ ಸದಸ್ಯರ ಆಕ್ರೋಶಕನ್ನಡಪ್ರಭ ವಾರ್ತೆ ಹಾಸನ

ನಗರಸಭೆ ಕುವೆಂಪು ಸಭಾಂಗಣದಲ್ಲಿ ಶನಿವಾರ ಮದ್ಯಾಹ್ನ ೨.೪೦ಕ್ಕೆ ಪ್ರಾರಂಭವಾದ ೨೦೨೪-೨೫ನೇ ವರ್ಷದ ಆಯವ್ಯಯ ಮಂಡನೆಯನ್ನು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅಧ್ಯಕ್ಷತೆಯಲ್ಲಿ ನಗರಸಭೆ ಆಯುಕ್ತರಾದ ಸಿ. ಯೋಗಾನಂದ್ ಅವರು ಕೇವಲ ಮೂರು ನಿಮಿಷದಲ್ಲಿ ಬಜೆಟ್ ಓದಿ ಮುಗಿಸಿದರು.

ಇದನ್ನು ಸರ್ವಾನುಮತದಿಂದ ಅಂಗೀಕರಿಸಿ ಮುಕ್ತಾಯಗೊಳಿಸಿ ನಂತರ ೩೫ ವಾರ್ಡ್‌ಗಳ ಜತೆ ಪ್ರಾರಂಭವಾದ ಸಭೆಯಲ್ಲಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸದಸ್ಯರು ಪಟ್ಟುಹಿಡಿದರೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಅರ್ಧಕ್ಕೆ ಸಭೆ ಮೊಟಕುಗೊಳಿಸಿ ಹೊರ ನಡೆದರು. ಇದರಿಂದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸಭೆಯಲ್ಲಿ, ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯ ಸಮಯ ೩ ಗಂಟೆಗೆ ಆಗುತ್ತದೆ. ಆ ಸಮಯದಿಂದಲೇ ನೀತಿ ಸಂಹಿತೆ ಇರುವುದರಿಂದ ಬಜೆಟ್ ಮಂಡನೆಯ ಮೊದಲ ಪುಟ ಮತ್ತು ಕೊನೆಯ ಪುಟದ ಕೆಲ ಸಾಲುಗಳನ್ನು ತರಾತುರಿಯಲ್ಲಿ ಓದಿ ಮುಗಿಸಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

೨೦೨೪-೨೫ ನೇ ಸಾಲಿನ ಪರಿಷ್ಕೃತ ಆಯವ್ಯಯ ಬಜೆಟ್ ೨.೭೯ ಕೋಟಿ ರು. ಉಳಿತಾಯ ಬಜೆಟ್‌ ಮಂಡಿಸಿದರು. ಒಟ್ಟು ಬಜೆಟ್ ಗಾತ್ರ ೧೯೪.೮೮ ಕೋಟಿ ರು. ಈ ಬಾರಿ ನಗರಸಭೆಗೆ ೧೬೩ ಕೋಟಿ ರು. ಆದಾಯವನ್ನು ನಿರೀಕ್ಷಿಸಲಾಗಿದೆ. ನಗರ ನಿರ್ವಹಣೆಗೆ ಸೇರಿ ೧೦ ಕೋಟಿ ರು. ಮೀಸಲಿರಿಸಲಾಗಿದೆ. ಅಲ್ಲದೆ ಒಳ ಚರಂಡಿ ವ್ಯವಸ್ಥೆ, ಕಟ್ಟಡದ ಕಾಮಗಾರಿ ಮತ್ತು ಪ್ರಮುಖ ವೃತ್ತಗಳ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳನ್ನು ಹಾಗೂ ರಸ್ತೆ, ಪಾದಚಾರಿಗಳ ರಸ್ತೆ ಕಾಮಗಾರಿಗೆ ೧೧ ಕೋಟಿ ರು. ಕೈಗೆತ್ತುಕೊಳ್ಳಲಾಯಿತು. ರಾಜಸ್ವ ಖಾತೆಯಿಂದ ೧೫೨.೬೩ ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆಯಿಂದ ೧೭.೫೦ ಕೋಟಿ ರು., ಕಟ್ಟಡ ಪರವಾನಗಿ ಬಾಬ್ತು ೨.೭೫ ಕೋಟಿ ರು., ವಾಣಿಜ್ಯ ಮಳಿಗೆ ಬಾಡಿಗೆ ೧.೩೨ ಕೋಟಿ ರು., ಅಭಿವೃದ್ಧಿ ಶುಲ್ಕ ೪ ಕೋಟಿ ರು., ಉದ್ದಿಮೆ ಪರವಾನಗಿ ಶುಲ್ಕ ೧.೬೦ ಕೋಟಿ ರು., ಈಜು ಕೊಳದ ಅರ್ಜಿ ಶುಲ್ಕ ೧.೨೫ ಲಕ್ಷ ರು., ಘನತ್ಯಾಜ್ಯ ವಸ್ತು ನಿರ್ವಹಣೆಯಿಂದ ೧.೫೦ ಕೋಟಿ ರು., ಸಂತೆ, ವಾಹನ ನಿಲುಗಡೆ ಹಾಗೂ ಇತರೆ ಮೂಲಗಳಿಂದ ೩೫ ಲಕ್ಷ ರು., ಈಜುಕೊಳ ಪ್ರವೇಶ ಶುಲ್ಕ ೬ ಲಕ್ಷ ರು., ನೀರು ಸರಬರಾಜು ಶುಲ್ಕ ೭ ಕೋಟಿ ರು., ನೀರು ಸರಬರಾಜು ಸಂಪರ್ಕ ಶುಲ್ಕ ೭೦ ಲಕ್ಷ ರು., ಒಳಚರಂಡಿ ಶುಲ್ಕ ೧ ಕೋಟಿ ರು. ಸೇರಿದಂತೆ ಇತರೆ ಅಂದಾಜು ಆದಾಯ ಬಗ್ಗೆ ತಿಳಿಸಿದರು.

ನಂತರ ಕೆಲವೇ ಸಮಯ ನೀಡಿ ಸದಸ್ಯರು ಚರ್ಚೆ ಮಾಡಬಹುದು ಎಂದು ಡಿಸಿ ಸೂಚಿಸಿದರು. ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಕೆಲವು ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇದು ಕೇವಲ ಮಂಡನೆ ಆಗುತ್ತದೆ. ನಾವೆಲ್ಲರೂ ಕೂಡ ಸರ್ವಾನುಮತದಿಂದ ಅನುಮೋದಿಸುತ್ತೇವೆ. ಆದರೆ ಸರಿಯಾಗಿ ಜಾರಿಯಾಗುವುದಿಲ್ಲ ಎಂದು ಸದಸ್ಯರಿಂದ ದೂರುಗಳು ಕೇಳಿ ಬಂದವು.

ನಗರ ಸಭೆ ಸದಸ್ಯ ಎಚ್.ಸಿ. ಮಂಜುನಾಥ್ ಮಾತನಾಡಿ, ನಗರಸಭೆಗೆ ಆದಾಯ ಕಡಿಮೆಯಾಗುತ್ತಿದೆ ಇದಕ್ಕೆ ಕಾರಣ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ. ಅಲ್ಲದೆ ನರ್ಸಿಂಗ್‌ ಹೋಮ್‌ಗಳು ಮತ್ತು ಬಾರುಗಳಿಗೆ ವಾಣಿಜ್ಯ ಪರವಾನಿಗೆಯನ್ನು ತೆಗೆದುಕೊಳ್ಳದೆ ಕಟ್ಟಡ ಕಟ್ಟುತ್ತಿದ್ದಾರೆ. ಇದರಿಂದ ನಗರಸಭೆಗೆ ಆದಾಯ ಕಡಿಮೆಯಾಗುತ್ತಿದೆ. ಇದರ ಬಗ್ಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಹಾಸನ ವಾರ್ಡ್‌ಗಳ ಸಮಸ್ಯೆ ಕುರಿತು ಚರ್ಚಿಸದ ಬಗ್ಗೆ ಸದಸ್ಯರು ೨೦೨೪-೨೫ನೇ ವರ್ಷದ ಆಯವ್ಯಯ ಮಂಡನೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

Share this article