ನಾಗರಿಕರಿಗೆ ಕಂಟಕವಾಗುತ್ತಿರುವ ಪುರಸಭೆ ಅಧಿಕಾರಿ ವರ್ಗ

KannadaprabhaNewsNetwork | Published : Aug 17, 2024 12:52 AM

ಸಾರಾಂಶ

ಲಿಂಗಸುಗೂರು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶಾಸಕ ಮಾನಪ್ಪ ವಜ್ಜಲ್ ಪುರಸಭೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.

ತುರ್ತು ಸಭೆಯಲ್ಲಿ ಶಾಸಕ ಮಾನಪ್ಪ ವಜ್ಜಲ್ ಆಕ್ರೋಶ

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಬೀದಿ ಬದಿಯ ವ್ಯಾಪಾರಿಗಳಿಂದ ಹಣ ವಸೂಲಿ, ನಾಲೆ ಒತ್ತುವರಿ, ಚರಂಡಿ ನೀರು ರಸ್ತೆಗೆ, ಕುಡಿಯವ ನೀರು ಪೂರೈಕೆಯಲ್ಲಿ ವ್ಯತ್ಯಯ ಸೇರಿದಂತೆ ಅಸಮರ್ಪಕ ನಿರ್ವಹಣೆಯಿಂದ ಪಟ್ಟಣದ ನಾಗರೀಕರಿಗೆ ಪುರಸಭೆ ಅಧಿಕಾರಿ ವರ್ಗವೇ ಕಂಟಕವಾಗಿ ಕಾಡುತ್ತಿದೆ ಹೀಗಾದರೆ ಜನರು ಹೇಗೆ ಬದುಕಬೇಕು ಎಂದು ಪುರಸಭೆ ಮುಖ್ಯಾಧಿಕಾರಿಯನ್ನು ಶಾಸಕ ಮಾನಪ್ಪ ವಜ್ಜಲ್ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.

ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧಿಕಾರಿಗಳೊಂದಿಗೆ ಶುಕ್ರವಾರ ತುರ್ತು ಸಭೆ ನಡೆಸಿ ಶಾಸಕ ಮಾನಪ್ಪ ವಜ್ಜಲ್ ಪಟ್ಟಣದ ಸಮಸ್ಯೆಗಳು ಹಾಗೂ ಪುರಸಭೆ ಆಡಳಿತ ಎಡವಿದ್ದೆಲ್ಲಿ ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟದರು.

ನಾನಾ ಮೂಲಗಳಿಂದ ಪ್ರತಿ ತಿಂಗಳು ಪುರಸಭೆಗೆ ಕೋಟಿಗೂ ಅಧಿಕ ಆದಾಯ ಬರುತ್ತದೆ. ಹಣ ಖರ್ಚು ಮಾಡುತ್ತಿಲ್ಲ ಹಣ ಖರ್ಚು ಮಾಡದೇ ಪೂಜೆ ಮಾಡುತ್ತೀರಾ? ಪಟ್ಟಣದಲ್ಲಿ ಮೂಲಸೌಕರ್ಯಗಳು ಎಕ್ಕುಟ್ಟಿ ಹೋಗಿವೆ ಜನರಿಗೆ ತೀವ್ರ ತೊಂದರೆ ಆಗುತ್ತದೆ. ಜನರ ಸಮಸ್ಯೆಗಳು ಹೋಗಲಾಡಿಸಲು ಏನು ಯೋಜನೆ ರೂಪಿಸಿದ್ದೀರಿ? ಕುಡಿಯುವ ನೀರು ಎರಡು ದಿನಕ್ಕೊಮ್ಮೆ ಸರಬರಾಜು ಮಾಡಲು ಯಾವ ಯೋಜನೆ ರೂಪಿಸಬೇಕು, ಇಷ್ಟೇಲ್ಲ ಹಣ ಬಂದರೂ ಏನು ಮಾಡ್ತಾ ಇದ್ದೀರಿ ನಿಮಗೇ ಏನಾಗಿದೆ ಎಂದು ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡರನ್ನು ಪರಿಪರಿಯಾಗಿ ಪ್ರಶ್ನಿಸಿದರು.

ಪಟ್ಟಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಯದ್ವಾತದ್ವಾ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ, ನಿರ್ಮಾಣದಲ್ಲಿ ತೀವ್ರವಾದ ರಾಜಕೀಯ ಮದ್ಯೆ ಪ್ರವೇಶದಿಂದ ರಸ್ತೆ ಕಾಮಗಾರಿ ಸಮರ್ಪಕ ಹಾಗೂ ಜನರಿಗೆ ಅನುಕೂಲವಾಗುವಲ್ಲಿ ಸಾಧ್ಯವಾಗುತ್ತಿಲ್ಲ. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಅಳವಡಿಸಲು ಪುರಸಭೆ ಅನುದಾನ ಬಳಕೆ ಮಾಡಿ ಕೂಡಲೇ ಆದ್ಯತೆ ನೀಡಬೇಕು. ಸಂಚಾರ ನಿಯಂತ್ರಣಕ್ಕೆ ಸಿಗ್ನಲ್ ಬಳಿಯಲ್ಲಿ ಪೊಲೀಸರ ನೇಮಕ ಮಾಡಬೇಕು ಎಂದು ಸಿಪಿಐ ಪುಂಡಲೀಕ ಪತಾಟತರ್ಗೆ ತಾಕೀತು ಮಾಡಿದರು.

ಸಭೆಯಲ್ಲಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ತಹಸೀಲ್ದಾರ ಎನ್.ಶಂಶಾಲಂ, ಜೆಸ್ಕಾಂ ಎಇಇ ಬನ್ನೆಪ್ಪ ಕರಿಬಂಟನಾಳ, ಪಿಡಬ್ಲೂನ ಇಂಜಿನಿಯರ್ ಲಕ್ಷ್ಮೀಕಾಂತ ಗುಂಟಿ, ಸಾರಿಗೆ ವ್ಯವಸ್ಥಾಪಕ ರಾಹುಲ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಇಂಜಿನಿಯರ್ಗಳು ಸೇರಿದಂತೆ ಇದ್ದರು.

ಬಡ ವ್ಯಾಪಾರಿಗಳ ಬಳಿ ಹಣ ವಸೂಲಿ ಮಾಡಬೇಡಿ

ವಿದ್ಯುತ್ ಕಂಬಗಳ ತೆರವು ಮತ್ತು ಜೋಡಿಸಲು ಹಾಗೂ ಪಟ್ಟಣದಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ಮುತುವರ್ಜಿ ವಹಿಸಿ ಮಳೆಗಾಲವಿದೆ. ಕರೆಂಟ್ ಸರಿಯಾಗಿ ಇರಲಿ. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಂದ ಪುರಸಭೆಯವರು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಬಡ ವ್ಯಾಪಾರಿಗಳ ಬಳಿ ಹಣ ವಸೂಲಿ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಶಾಸಕ ವಜ್ಜಲ್ ಪುರಸಭೆ ವಿರುದ್ದ ಗುಡುಗಿದರು.

Share this article