ಪುರಸಭೆ ಕಂದಾಯ ನಿರೀಕ್ಷಕ ವಿನಾಯಕ ಲೋಕಾಯುಕ್ತ ಬಲೆಗೆ

KannadaprabhaNewsNetwork |  
Published : Mar 07, 2024, 01:49 AM IST
ಫೋಟೊ:೦೬ಕೆಪಿಸೊರಬ-೦೫ : ಸೊರಬ ಪಟ್ಟಣದ ಪುರಸಭೆಯಲ್ಲಿ ಲಂಚ ಸ್ವೀಕರಿಸುವ ವೇಳೆ ಸಿಕ್ಕಬಿದ್ದ ಕಂದಾಯ ನಿರೀಕ್ಷಕ ವಿನಾಯಕ | Kannada Prabha

ಸಾರಾಂಶ

ಹೊನ್ನಾವರದ ಪ್ರತಿಭಾ ಎಂ. ನಾಯ್ಕ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ವಿನಾಯಕ ಅವರು ಲಂಚ ಸ್ವೀಕರಿಸುವ ವೇಳೆ ಸಿಕ್ಕಿ ಬಿದ್ದಿದ್ದಾರೆ.

ಲಂಚ ಸ್ವೀಕರಿಸುವ ವೇಳೆ ದಾಳಿ, ಬಂಧನ । ಲೋಕಾಯುಕ್ತ ಎಸ್‌ಪಿ ಎನ್. ವಾಸುದೇವರಾಮ ನೇತೃತ್ವ

ಕನ್ನಡಪ್ರಭ ವಾರ್ತೆ ಸೊರಬ

ಪಟ್ಟಣದ ಪುರಸಭೆಯಲ್ಲಿ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಿನಾಯಕ ಬುಧವಾರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಹೊನ್ನಾವರದ ಪ್ರತಿಭಾ ಎಂ. ನಾಯ್ಕ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ವಿನಾಯಕ ಅವರು ಲಂಚ ಸ್ವೀಕರಿಸುವ ವೇಳೆ ಸಿಕ್ಕಿ ಬಿದ್ದಿದ್ದಾರೆ.

ಪ್ರತಿಭಾ ಎಂ. ನಾಯ್ಕ ಅವರು ಪುರಸಭೆ ವ್ಯಾಪ್ತಿಯ ಹಳೇಸೊರಬ ಗ್ರಾಮದಲ್ಲಿರುವ ಖಾಲಿ ನಿವೇಶನದ ಇ-ಸ್ವತ್ತು ಮಾಡಿಸಲು ಕಂದಾಯ ನಿರೀಕ್ಷಕ ವಿನಾಯಕರನ್ನು ಭೇಟಿ ಮಾಡಿ ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ೫೭೫.೫೩೬೬ ಚಮೀ ನಿವೇಶನಕ್ಕೆ ಇ-ಸ್ವತ್ತು ನೀಡಲಾಗಿತ್ತು. ಆದರೆ, ಈ ಹಿಂದೆ ಹಳೇಸೊರಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಮಾಡಿಸಿದಾಗ ಈ ಜಾಗವು ಒಟ್ಟು ೬೯೫೦ ಚಮೀ ವಿಸ್ತೀರ್ಣ ಇದ್ದಿದ್ದರಿಂದ ಜಾಗಕ್ಕನುಗುಣವಾಗಿ ಇ-ಸ್ವತ್ತು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿಕೊಡಲು ಕಂದಾಯ ನಿರೀಕ್ಷಕ ವಿನಾಯಕ ಅವರು ೪೦ ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪ್ರತಿಭಾ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರನ್ನು ಆಧರಿಸಿ ಪೊಲೀಸ್ ನಿರೀಕ್ಷಕ ಪ್ರಕಾಶ್ ರ ತಂಡವು ವಿನಾಯಕ ಅವರು ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯಿಂದ ೪೦ ಸಾವಿರ ರು.ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲೋಕಾಯುಕ್ತ ಎಸ್‌ಪಿ ಎನ್. ವಾಸುದೇವರಾಮರ ಮಾರ್ಗದರ್ಶನದಲ್ಲಿ, ಉಪಾಧೀಕ್ಷಕ ಉಮೇಶ್ ಈಶ್ವರ ನಾಯ್ಕ್ ರ ನೇತೃತ್ವದಲ್ಲಿ ಅಧಿಕಾರಿಗಳಾದ ಎಚ್.ಎಸ್. ಸುರೇಶ್, ಸಿಬ್ಬಂದಿ ಮಹಾಂತೇಶ್, ಸುರೇಂದ್ರ, ಯೋಗೀಶ್, ಬಿ.ಟಿ. ಚನ್ನೇಶ್, ಪ್ರಶಾಂತ್ ಕುಮಾರ್, ಅರುಣ್ ಕುಮಾರ್, ದೇವರಾಜ, ರಘುನಾಯ್ಕ, ಜಯಂತ, ಗೋಪಿ, ಪ್ರದೀಪ್ ಕುಮಾರ್, ಬಿ.ಕೆ. ಗಂಗಾಧರ ತಂಡ ಕಾರ್ಯಾಚರಣೆಯಲ್ಲಿತ್ತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...