ಶಿವಪುರಕೆರೆ ಅಭಿವೃದ್ಧಿಗೆ ಮುನಿರಾಜು ಸೂಚನೆ

KannadaprabhaNewsNetwork |  
Published : Jun 14, 2024, 01:05 AM IST
ಶಾಸಕ ಎಸ್‌.ಮುನಿರಾಜು ಅವರು ಶಿವಪುರಕೆರೆಗೆ ಭೇಟಿ ನೀಡಿ ಕಾಮಗಾರಿಗೆ ಚುರುಕು ನೀಡುವಂತೆ ಬಿಬಿಎಂಪಿ ಅದಿಕಾರಿಗಳಿಗೆ ಸೂಚನೆ ನೀಡಿದರು. | Kannada Prabha

ಸಾರಾಂಶ

ಶಿವಪುರಕೆರೆ ಸೇರಿದಂತೆ ಲಕ್ಷ್ಮಿಪುರ, ಅಬ್ಬಿಗೆರೆ, ನೆಲಗದರನಹಳ್ಳಿ ಕೆರೆಗಳಿಗೆ ಶಾಸಕ ಎಸ್.ಮುನಿರಾಜು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕೆರೆಗಳ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಶಿವಪುರಕೆರೆ ಸೇರಿದಂತೆ ಲಕ್ಷ್ಮಿಪುರ, ಅಬ್ಬಿಗೆರೆ, ನೆಲಗದರನಹಳ್ಳಿ ಕೆರೆಗಳಿಗೆ ಶಾಸಕ ಎಸ್.ಮುನಿರಾಜು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕೆರೆಗಳ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿ ಶೀಘ್ರ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ನಗರ ಬೆಳೆದಂತೆ ಸ್ಥಳೀಯರು ಹಳೆಯ ಕಟ್ಟಡದ ಅವಶೇಷ ಸುರಿದು, ಕೈಗಾರಿಕೆಗಳ ತ್ಯಾಜ್ಯ ಮತ್ತು ಒಳಚರಂಡಿ ನೀರು ಹರಿದು ಶಿವಪುರಕೆರೆ ಕಲುಷಿತಗೊಂಡಿತ್ತು. ವಿಷಕಾರಿಯಾಗಿದ್ದ ನೀರು ಕುಡಿದರೆ ದನಕರುಗಳು ಬದುಕುಳಿಯುವ ಸಾಧ್ಯತೆ ಇರಲಿಲ್ಲ. ಕೆರೆ ಒಡಲಾಳದಲ್ಲಿದ್ದ ಜಲಚರಗಳ ಅಸ್ತಿತ್ವಕ್ಕೂ ಧಕ್ಕೆ ಉಂಟಾಗಿತ್ತು. ಇದನ್ನೆಲ್ಲಾ ಅರಿತಿದ್ದ ಸ್ಥಳೀಯರು ಹಲವು ವರ್ಷಗಳಿಂದ ಕೆರೆಯ ಅಭಿವೃದ್ಧಿ ಬಗ್ಗೆ ಒತ್ತಾಯ ಮಾಡುತ್ತಲೇ ಇದ್ದರು.

ಒಂದುವರೆ ವರ್ಷದ ಹಿಂದೆ ಅಮೃತ ನಗರೋತ್ಥಾನ ಅನುದಾನದಲ್ಲಿ ಶಿವಪುರ ಕೆರೆ ಪುನರುಜ್ಜೀವನಕ್ಕೆ ಬಿಬಿಎಂಪಿ ₹2 ಕೋಟಿ, ಲಕ್ಷ್ಮಿಪುರ ಕೆರೆಗೆ ₹4 ಕೋಟಿ, ಅಬ್ಬಿಗೆರೆ ಕೆರೆಗೆ ₹4.50 ಕೋಟಿ, ನೆಲಗದರನಹಳ್ಳಿ ಕೆರೆಗೆ ₹4 ಕೋಟಿ ಅನುದಾನ ನೀಡಲಾಯಿತು. ಅಂದು ಕಾಮಗಾರಿ ಪ್ರಾರಂಭವಾಗಿ ಇಂದಿನವರೆಗೂ ಕಾಮಗಾರಿ ಮುಗಿದಿಲ್ಲ.

ಕಾಮಗಾರಿ ಕೆಲಸ ಸರಿಯಾಗಿ ಮಾಡಿಲ್ಲವೆಂದು ಸ್ಥಳೀಯರು ದೂರುತ್ತಿದ್ದರು. ಇದನ್ನು ಜೂನ್ 9ರಂದು ‘ಕನ್ನಡಪ್ರಭ’ ಶಿವಪುರ ಕೆರೆ ಅಭಿವೃದ್ಧಿ ಕಾಮಗಾರಿಗೆ ಗ್ರಹಣ ಶೀರ್ಷಿಕೆಯಡಿ ವರದಿ ಮಾಡಲಾಗಿತ್ತು. ಇದರ ಪರಿಣಾಮ ಶಾಸಕ ಎಸ್.ಮುನಿರಾಜು ಅವರು ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ಸ್ಥಳಕ್ಕೆ ತೆರಳಿ ಭೇಟಿ ನೀಡಿ ಪರಿಶೀಲಿಸಿದರು.

ಶಾಸಕ ಎಸ್ ಮುನಿರಾಜು ಮಾತನಾಡಿ, ಕನ್ನಡಪ್ರಭ ಪ್ರಕಟವಾಗಿದ್ದ ಸುದ್ದಿಯನ್ನು ನೋಡಿ ಕೆರೆಗಳಿಗೆ ಭೇಟಿ ನೀಡಿದ್ದೇನೆ. ಅಭಿವೃದ್ಧಿಯ ಬಗ್ಗೆ ಗಮನ ಹರಿಸಿರುವೆ. ಕೆರೆಗಳ ಒತ್ತುವರಿ ಜಾಗವನ್ನು ತೆರವುಗೊಳಿಸಲು ಸೂಚಿಸಿದ್ದೇನೆ. ಕೆರೆಯ ಹೂಳೆತ್ತುವ ಕಾರ್ಯ ಮುಗಿದಿದೆ. ಸುತ್ತಲೂ ನಡಿಗೆ ಪಥ ಕೆಲಸ ನಡೆಯುತ್ತಿದೆ. ಕೈಗಾರಿಕೆಗಳ ತ್ಯಾಜ್ಯ ಮತ್ತು ಒಳಚರಂಡಿ ನೀರು ಕೆರೆಗೆ ಸೇರದಂತೆ ಪೈಪ್ಲೈನ್ ಮಾಡಲಾಗಿದೆ. ಪಿಚ್ಚಿಂಗ್ ಕೆಲಸವಾಗಿದೆ. ಕೋಡಿ ಕಟ್ಟಲಾಗಿದೆ. ತಂತಿ ಬೇಲಿ ಮತ್ತು ಗೇಟ್, ಶೌಚಾಲಯ ಬಾಕಿ ಇದ್ದು ಕೆಲಸ ನಡೆಯುತ್ತಿದೆ. ಆಗಸ್ಟ್ 15ರೊಳಗೆ ಎಲ್ಲಾ ಕೆರೆಗಳ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು, ಅಮೃತ ನಗರೊತ್ಥಾನ ಯೋಜನೆಯ ಅಧಿಕಾರಿಗಳು, ಕೆರೆ ಅಭಿವೃದ್ಧಿಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಇದ್ದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ