ಕನ್ನಡಪ್ರಭ ವಾರ್ತೆ ಮಂಗಳೂರು
ಮುಕ್ತ ಹಾಗೂ ಪಾರದರ್ಶಕ ಚುನಾವಣೆಗೆ ಮಾದರಿ ನೀತಿ ಸಂಹಿತೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಹಾಗೂ ಪ್ರತಿಯೊಂದು ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿ ಅಭ್ಯರ್ಥಿಗಳ ವೆಚ್ಚದ ಬಗ್ಗೆ ನಿಗಾವಹಿಸಬೇಕು ಎಂದು ರಾಜ್ಯಕ್ಕೆ ನಿಯೋಜನೆಗೊಂಡ ವಿಶೇಷ ವೆಚ್ಚ ವೀಕ್ಷಕ ಬಿ. ಮುರಳೀ ಕುಮಾರ್ ನಿರ್ದೇಶನ ನೀಡಿದರು. ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ 17- ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಬಗ್ಗೆ ವಿಶೇಷ ನಿಗಾವಹಿಸುವಂತೆ ಹಾಗೂ ಅವರ ಶ್ಯಾಡೋ ರಿಜಿಸ್ಟರ್‌ನ್ನು ಸೂಕ್ತವಾಗಿ ನಿರ್ವಹಿಸುವಂತೆ ಹಾಗೂ ಅದನ್ನು ಕಾಲಕಾಲಕ್ಕೆ ಪರಿಶೀಲಿಸುವಂತೆ ಚುನಾವಣಾ ವೆಚ್ಚ ವೀಕ್ಷಕರು, ಜಿಲ್ಲಾ ಚುನಾವಣಾ ಖರ್ಚುವೆಚ್ಚಗಳ ನಿರ್ವಹಣಾ ನೋಡಲ್ ಅಧಿಕಾರಿಗೆ ಅವರು ಸೂಚಿಸಿದರು. ಚುನಾವಣಾ ಅವಧಿಯಲ್ಲಿ ಅನುಮಾನಾಸ್ಪದ ವ್ಯವಹಾರಗಳ ಬಗ್ಗೆ ಎಚ್ಚರ ವಹಿಸಬೇಕು, ಪ್ರತಿ ನಿತ್ಯ ಕ್ರಮಬದ್ದ ವ್ಯವಹಾರಗಳ ಬಗ್ಗೆ ಬ್ಯಾಂಕ್‌ಗಳಿಂದ ಖಾತರಿ ಪಡಿಸಿಕೊಳ್ಳಬೇಕು ಎಂದರು. ವಿಮಾನ ನಿಲ್ದಾಣ ಹಾಗೂ ಬಂದರು ತಪಾಸಣೆಯಲ್ಲಿ ಹದ್ದಿನ ಕಣ್ಣಿಡಬೇಕು, ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಬೇಕು, ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚ 95 ಲಕ್ಷ ರು. ನಿಗದಿಪಡಿಸಲಾಗಿದೆ. ಅವರು ಮಾಡುವ ಖರ್ಚು ವೆಚ್ಚಗಳ ಬಗ್ಗೆ ಎಚ್ಚರ ವಹಿಸಬೇಕು. ಮಾದರಿ ನೀತಿ ಸಂಹಿತೆ ಅನುಸಾರ ಕ್ರಮವಹಿಸಿ ಚುನಾವಣಾ ಕಾರ್ಯಗಳನ್ನು ಯಶಸ್ವಿಗೊಳಿಸುವಂತೆ ಅವರು ತಿಳಿಸಿದರು. ಗಡಿಪಾರು ಮಾಡಿರುವ ರೌಡಿಶೀಟರ್‌ಗಳ ಮೇಲೆ ನಿಗಾವಹಿಸುವಂತೆ ಅವರು ಸೂಚಿಸಿದರು. ಚುನಾವಣಾ ವೆಚ್ಚವೀಕ್ಷಕ ಮೆರುಗು ಸುರೇಶ್, ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್, ಚುನಾವಣಾ ಖರ್ಚು ವೆಚ್ಚಗಳ ನಿರ್ವಹಣೆಯ ನೋಡಲ್ ಅಧಿಕಾರಿ ಮೀರಾ ಪಂಡಿತ್ ಇದ್ದರು.----------------