ಎಲ್ಲ ಆಯಾಮಗಳಲ್ಲಿ ನೇಹಾ ಹತ್ಯೆ ತನಿಖೆ

KannadaprabhaNewsNetwork | Published : Apr 23, 2024 12:46 AM

ಸಾರಾಂಶ

ಚುನಾವಣೆಯಲ್ಲಿ ಗೆಲ್ಲಲು ಲವ್‌ ಜಿಹಾದ್‌, ಕೋಮುಭಾವನೆ ಸೃಷ್ಟಿಸುವುದನ್ನು ಬಿಜೆಪಿಯವರು ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ. ಹತ್ಯೆ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು.

ನವನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನಿನ ಪ್ರಕಾರ ಎಲ್ಲ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ತಪ್ಪು ಯಾರೇ ಮಾಡಲಿ ಅವರಿಗೆ ತಕ್ಕ ಶಿಕ್ಷೆಯಾಗಲಿ. ಚುನಾವಣೆಯಲ್ಲಿ ಗೆಲ್ಲಲು ಲವ್‌ ಜಿಹಾದ್‌, ಕೋಮುಭಾವನೆ ಸೃಷ್ಟಿಸುವುದನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ಇಂತಹ ರಾಜಕಾರಣ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಸಣ್ಣತನ ಮಾತುಗಳನ್ನಾಡುವುದು ಬಿಡಬೇಕು. ದೇಶದ ಜನರಿಗೆ ಉದ್ಯೋಗ ನೀಡಲಿಲ್ಲ. ಕೇಂದ್ರ ಸರ್ಕಾರ ದೇಶದ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಏನು ಗಲಾಟೆ ಆದರೂ ಕಾಂಗ್ರೆಸ್‌ಗೆ ತಂದು ಹಚ್ಚುವುದನ್ನು ಬಿಡಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ ಜನರಿಗೆ ತಲುಪಿದೆ. ಗ್ಯಾರಂಟಿ ಬಗ್ಗೆ ಟೀಕೆ ಮಾಡುವ ಬಿಜೆಪಿಯವರು ಈಗ ಗ್ಯಾರಂಟಿಗೆ ಬಂದು ನಿಂತಿದ್ದಾರೆ. ಅತ್ಯಾಚಾರ ಆರೋಪಿಗಳಿಗೆ ಒಂದು ವಾರದಲ್ಲಿ ಶಿಕ್ಷೆಯಾಗುವ ಕಾನೂನು. ನೇಹಾ ಕೊಲೆ ಆರೋಪಿಗೆ ಮರಣ ದಂಡನೆ ಆಗಬೇಕು ಎಂದು ಕಾನೂನು ಸಚಿವ ಹಾಗೂ ಗೃಹ ಸಚಿವರನ್ನು ಒತ್ತಾಯಿಸಿದರು.

ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ದೇಶದಲ್ಲಿ ಜನರ ಮನಸು ಒಡೆಯುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ಈ ರೀತಿ ಮಾಡುವುದು ಸರಿಯಲ್ಲ. ತಮ್ಮ ಸಾಧನೆ ಬಗ್ಗೆ ಹೇಳಿ ಮತ ಕೇಳಬೇಕು ಎಂದರು. ನೇಹಾ ಪ್ರೀತಿ ವಿಷಯ ಪೋಷಕರಿಗೆ ಗೊತ್ತಿತ್ತು. ಅವರು ಪೊಲೀಸರಿಗೆ ದೂರು ನೀಡಿದ್ದರೆ ಹತ್ಯೆ ತಡೆಯಬಹುದಿತ್ತು. ನೇಹಾ ಹತ್ಯೆ ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪ್ರಕಾಶ ತಪಶೆಟ್ಟಿ, ಆನಂದ ಜಿಗಜಿನ್ನಿ, ಚಂದ್ರಶೇಖರ ರಾಠೋಡ, ಸಿಕಂದರ್ ಅಥಣಿ ಇದ್ದರು.

Share this article