ಆಪ್ತ ಸ್ನೇಹಿತನ ಹತ್ಯೆ: ಆರೋಪಿಗಳ ಕಾಲಿಗೆ ಗುಂಡೇಟು

KannadaprabhaNewsNetwork | Published : Oct 13, 2024 1:05 AM

ಸಾರಾಂಶ

ಜಾತ್ರೆಯಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ವಿಷಯಕ್ಕೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯಕಂಡಿದೆ. ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಲಾಗಿದೆ.

ಹುಬ್ಬಳ್ಳಿ:

ಜಾತ್ರೆಯಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ವಿಷಯಕ್ಕೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ನಗರದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.

ಗೋಪನಕೊಪ್ಪ ನಿವಾಸಿ ಶಿವರಾಜ ಕಮ್ಮಾರ (23) ಕೊಲೆಯಾದ ಯುವಕ. ಈತನನ್ನು ಬರೋಬ್ಬರಿ 30ಕ್ಕೂ ಹೆಚ್ಚು ಸಲ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಸುದೀಪ ರಾಯಪುರ ಹಾಗೂ ಕಿರಣ ಜಟ್ಟಪ್ಪನವರ ಎಂಬುವವರೇ ಕೊಲೆ ಮಾಡಿ ಬಂಧಿತರಾಗಿರುವ ಆರೋಪಿಗಳು.

ಆಗಿರುವುದೇನು?:

ಮೃತ ಶಿವರಾಜ ಕಮ್ಮಾರ ಮತ್ತು ಸುದೀಪ ರಾಯಪುರ ಇಬ್ಬರೂ ಆತ್ಮೀಯ ಸ್ನೇಹಿತರು. ಗೋಪನಕೊಪ್ಪದ ಕರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಈ ಇಬ್ಬರ ನಡುವೆ ಜಗಳವಾಗಿತ್ತು. ಕೈ ಕೈ ಮಿಲಾಯಿಸುವ ಹಂತಕ್ಕೇ ಜಗಳ ಹೋಗಿತ್ತು. ಆಗ ಅಲ್ಲೇ ಇದ್ದ ಕೆಲವರು ಇಬ್ಬರನ್ನು ತಡೆದು ಬುದ್ಧಿ ಹೇಳಿ ಕಳುಹಿಸಿದ್ದರು.

ಶುಕ್ರವಾರ ಶಿವರಾಜ ಮನೆಯಲ್ಲಿ ಹಬ್ಬದ ನಿಮಿತ್ತ ಬಾಡೂಟ ಮಾಡಲಾಗಿತ್ತು. ಮಧ್ಯಾಹ್ನದವರೆಗೂ ತನ್ನ ಸ್ನೇಹಿತರ ಜತೆ ಸೇರಿ ದೇವರಿಗೆ ನೈವೇದ್ಯ ಅರ್ಪಣೆ ಮಾಡಿ ಗೆಳೆಯರಿಗೆ ಊಟ ಮಾಡಿಸಿ ಕಳುಹಿಸಿದ್ದಾನೆ. ರಾತ್ರಿ 10 ಗಂಟೆಗೆ ತನ್ನ ಸಹೋದರಿಯೊಂದಿಗೆ ಮನೆಯಲ್ಲಿ ಊಟ ಮಾಡಿ ಹೊರಗಡೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಹೋದ ಕೆಲವೇ ನಿಮಿಷಗಳಲ್ಲಿ ಕೊಲೆಗೀಡಾಗಿದ್ದಾನೆ. ಗೋಪನಕೊಪ್ಪ ವೃತ್ತದ ಬಳಿ ಸುದೀಪ್‌, ಕಿರಣ್ ಹಾಗೂ ಅವನ ಸ್ನೇಹಿತರು ಸೇರಿ ಏಕಾಏಕಿ ಆತನ ಮೇಲೆ ನುಗ್ಗಿ 5 ಬಾರಿ ತಲೆಗೆ ಹಾಗೂ ದೇಹದ 30ಕ್ಕೂ ಹೆಚ್ಚು ಕಡೆ ಮಾರಕಾಸ್ತ್ರಗಳಿಂದ ಇರಿದು ಪರಾರಿಯಾಗಿದ್ದಾರೆ. ಸ್ಥಳದಲ್ಲಿಯೇ ಶಿವರಾಜ ಸಾವನ್ನಪ್ಪಿದ್ದಾನೆ.

ಆರೋಪಿಗಳಿಗೆ ​ಗುಂಡೇಟು:

ಈ ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಗಳಾದ ಸುದೀಪ್‌ ರಾಯಪುರ, ಕಿರಣ್‌ ಜಟ್ಟಪ್ಪನವರ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಇನ್ನು ಕೆಲವರು ಭಾಗಿಯಾಗಿದ್ದರು. ಅವರನ್ನು ಬಂಧಿಸಲು ಪೊಲೀಸರು ಬಂಧಿತ ಆರೋಪಿಗಳೊಂದಿಗೆ ಹಳೇಹುಬ್ಬಳ್ಳಿ ರೈಲ್ವೆ ಕ್ವಾಟರ್ಸ್‌ ಬಳಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿಗಳಿಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪಿಎಸ್‌ಐ ಕಿರಣ ಹಾಗೂ ಸಾತಣ್ಣವರ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೂ ಆರೋಪಿಗಳು ಮಾತ್ರ ಪರಾರಿಯಾಗುವ ಯತ್ನವನ್ನು ಮುಂದುವರಿಸಿದ್ದಾರೆ. ಆಗ ಪೊಲೀಸರು, ಸುದೀಪನ ಎರಡು ಕಾಲುಗಳಿಗೆ ಹಾಗೂ ಕಿರಣನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಇವರ ಹಲ್ಲೆಯಿಂದ ಇಬ್ಬರು ಪಿಎಸ್‌ಐ ಸೇರಿದಂತೆ ಆರು ಜನ ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಎಂಟು ಜನರನ್ನು ಕೆಎಂಸಿ ಆರ್‌ಐನಲ್ಲಿ ದಾಖಲಿಸಲಾಗಿದೆ.

ಕಮೀಷನರ್‌ ಭೇಟಿ:

ಘಟನೆಯ ಮಾಹಿತಿ ತಿಳಿಸಿದ ಕೆಎಂಸಿಆರ್‌ಗೆ ಭೇಟಿ ನೀಡಿದ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಕೊಲೆ ಮಾಡಿರುವುದನ್ನು ನೋಡಿದರೆ ಪೂರ್ವನಿಯೋಜಿತ ಕೃತ್ಯ ಎಂದೆನಿಸುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 5-6 ಜನ ಆರೋಪಿಗಳಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ. ಮೃತ ಶಿವರಾಜ ಹಾಗೂ ಆರೋಪಿಗಳ ನಡುವೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಹೋದ ವೇಳೆ ಗಲಾಟೆಯಾಗಿರುವುದು ಗೊತ್ತಾಗಿದೆ. ಮೃತನ ಕುಟುಂಬಸ್ಥರು ಸುದೀಪ ದೇಸೂರ, ಕಾರ್ತಿಕ, ಕಿರಣ್ ಜುಟ್ಟಪ್ಪನವರ, ಅಭಿಷೇಕ ಜಾಧವ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಇನ್ನುಳಿದ ಆರೋಪಿಗಳನ್ನು ಆದಷ್ಟು ಬೇಗನೆ ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Share this article