ಕೊಲೆ ಸಂಚು: ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳು

KannadaprabhaNewsNetwork | Published : Jun 15, 2024 1:01 AM

ಸಾರಾಂಶ

ನಟ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿ ಹತ್ಯೆ ಮಾಡಿರುವುದರ ಹಿಂದೆ ಪೂರ್ವಯೋಜಿತ ಸಂಚು ಇರುವಂತೆಯೇ ಅಮಾಯಕರು ಕೊಲೆ ಸಂಚಿಗೆ ಒಳಗಾಗಿರುವ ಶಂಕೆಗಳು ಮೂಡಿವೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಟ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿ ಹತ್ಯೆ ಮಾಡಿರುವುದರ ಹಿಂದೆ ಪೂರ್ವಯೋಜಿತ ಸಂಚು ಇರುವಂತೆಯೇ ಅಮಾಯಕರು ಕೊಲೆ ಸಂಚಿಗೆ ಒಳಗಾಗಿರುವ ಶಂಕೆಗಳು ಮೂಡಿವೆ. ಬಾಡಿಗೆ ಕಾರು ಓಡಿಸಿಕೊಂಡಿದ್ದ ರವಿಶಂಕರ್‌ಗೆ ಇಂತಹದ್ದೊಂದು ಸಂಚಿಗೆ ಬಲಿಯಾಗುವ ಯಾವ ಮುನ್ಸೂಚನೆಗಳೂ ಇರಲಿಲ್ಲ. ಬಾಡಿಗೆ ಸಿಕ್ಕಿತು ಎಂಬ ಖುಷಿಯಲ್ಲಿ ಬೆಂಗಳೂರಿಗೆ ಹೋಗಿದ್ದಾನೆ. ಪರಿಣಾಮ ದರ್ಶನ್ ಗ್ಯಾಂಗಿನಲ್ಲಿ ಈತನೂ ಒಬ್ಬನಾಗಿ ಸೇರ್ಪಡೆಯಾಗಿದ್ದಾರೆ. ಹೆತ್ತವರಿಗಂತೂ ತಮ್ಮ ಮಕ್ಕಳು ತುಳಿದ ಹಾದಿ ಅಚ್ಚರಿ ತರಿಸಿದೆ.

ಪ್ರಕರಣದ ಎ8 ಆರೋಪಿ ರವಿಶಂಕರ್ ಬಂಧನದ ಹಿನ್ನೆಲೆ ಅವರ ಕುಟುಂಬ ಪೂರ್ಣ ಪ್ರಮಾಣದಲ್ಲಿ ಕಂಗಾಲಾಗಿದೆ. ಯಾಕೆ ಹೀಗಾಯ್ತು ಎಂಬುದೇ ಅರಿವಿಗೆ ಬಂದಿಲ್ಲ. ಚಿತ್ರದುರ್ಗ ತಾಲೂಕಿನ ಐನಹಳ್ಳಿ ಕುರುಬರಹಟ್ಟಿ ಗ್ರಾಮದ ರಾಘವೇಂದ್ರನ ಪತ್ನಿ ಕವಿತಾ ಕನ್ನಡಪ್ರಭದೊಂದಿಗೆ ಮಾತನಾಡುವಾಗ ಮನದಲ್ಲಿನೋವು ಮಡುಗಟ್ಟಿತ್ತು. ದುಗುಡದಿಂದಲೇ ಮಾತುಗಳ ಹರವಿದಳು.

ಶನಿವಾರ ಸಹಜವಾಗಿ ಕಾರು ಬಾಡಿಗೆಗೆ ಹೋಗಿ ಭಾನುವಾರ ಬಂದರು. ಬೆಂಗಳೂರಿಗೆ ಹೋಗಿ ಬಂದ ನಂತರ ಅವರು ಎಂದಿನಂತೆ ಇರಲಿಲ್ಲ. ಸದಾ ಚಡಪಡಿಸುತ್ತಿದ್ದರು. ವಿಚಲಿತರಾದಂತೆ ಕಂಡು ಬಂತು. ಎರಡು ದಿನ ಅವರು ಮನಶಾಂತಿ ಕಳೆದುಕೊಂಡಿದ್ದರು. ಮನೆಯಲ್ಲಿ ತಾಯಿಗೆ ಅನಾರೋಗ್ಯವಿದೆ, ಹೆಂಡ್ತಿ, ಇಬ್ಬರು ಮಕ್ಕಳಿದ್ದಾರೆ. ರೇಣುಕಾಸ್ವಾಮಿ ಕೊಲೆಗಾರರ ಪಟ್ಟಿಯಲ್ಲಿ ತನ್ನ ಪತಿ ಹೆಸರು ಸೇರ್ಪಡೆಯಾಗಿದ್ದು ದಂಗಾದಂತಾಯಿತು.

ನನ್ನ ಪತಿ ರವಿಯನ್ನು ಯಾವ ಮಹಾಶಯ ಆರೋಪಿ ಅಂತ ಮಾಡಿದ್ದು ಎಂದು ಕಣ್ತುಂಬ ನೀರು ತುಂಬಿಕೊಂಡಳಾಕೆ.

ರವಿ ತಾನಾಗಿಯೇ ಪೊಲೀಸರ ಮುಂದೆ ಶರಣಾಗಿ ಸತ್ಯ ಹೇಳಿದ್ದಾರೆ. ಹೊಟ್ಟೆ ಪಾಡಿಗೆ ಬಾಡಿಗೆಗೆ ಕಾರು ಓಡಿಸಿದ್ದು ತಪ್ಪಾ. ಪೊಲೀಸರು ಆರೋಪಿ 8 ಅನ್ನುವ ಬದಲು ಬಿಟ್ಟು ಕಳುಹಿಸಬೇಕಿತ್ತು. ನಟ ದರ್ಶನ್ ಅಷ್ಟೊ ದೊಡ್ಡ ವ್ಯಕ್ತಿಯಾಗಿದ್ದು ತನ್ನ ಕಾರು ಕಳಿಸಿ ರೇಣುಕಾಸ್ವಾಮಿ ಕರೆದುಕೊಂಡು ಹೋಗಬೇಕಿತ್ತು. ಬಡಪಾಯಿಯ ಕಾರು ಬಳಸಿಕೊಳ್ಳಬೇಕಿತ್ತೇ ಎಂದರು.

ಪತಿ ರವಿಯೇ ನಮ್ಮ ಕುಟುಂಬದ ಆಧಾರ ಸ್ತಂಭ. ಚಾಲಕ ವೃತ್ತಿ ಮಾಡುವುದೇ ಅಪರಾಧವೇ. ಮಕ್ಕಳು ಅಪ್ಪ ಎಲ್ಲಿದೆ, ವಿಡಿಯೋ ಕಾಲ್ ಮಾಡಿ ತೋರಿಸು ಎಂದು ದುಂಬಾಲು ಬಿದ್ದಿದ್ದಾರೆ. ಅವರಿಗೆ ಏನು ಉತ್ತರ ಹೇಳಲಿ ಎಂದು ಕವಿತಾ ನೊಂದು ನುಡಿದರು.ಸಾಲ ಮಾಡಿ ಆಟೋ ಖರೀದಿಸಿದ್ದ:

ನಟ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಅನು ಅಲಿಯಾಸ್ ಅನುಕುಮಾರ್ ಅವರ ಕುಟುಂಬದ ಸಮಸ್ಯೆ ಕೂಡಾ ರವಿ ಕುಟುಂಬದಷ್ಟೇ ಸಮಸ್ಯಾತ್ಮಕವಾಗಿದೆ. ಕನ್ನಡಪ್ರಭದೊಂದಿಗೆ ಮಾತನಾಡಿದ ಅನು ತಾಯಿ ಜಯಮ್ಮ, ತಂದೆ ಚಂದ್ರಣ್ಣ ಆಕಾಶವೇ ನೆತ್ತಿ ಮೇಲೆ ಬಿದ್ದಂತೆ ಚಡಪಡಿಸುತ್ತಿದ್ದರು. ಅನು ಆಟೋ ಓಡಿಸಿಕೊಂಡಿದ್ದು ಮನೆಗೆ ಆಸರೆ ಆಗಿದ್ದನು. ಯಾರೋ ಮೋಸದಿಂದ ಕರೆದುಕೊಂಡು ಹೋಗಿದ್ದಾರೆ. ನಾವು ಇವತ್ತು ದುಡಿದು ಇವತ್ತು ಬದುಕುವ ಸ್ಥಿತಿಯಿದೆ ಎಂದರು.

ನಮ್ಮ ಮಗ ಅನು ಕೊಲೆ ಮಾಡುವ ಮಟ್ಟಕ್ಕೆ ಇಳಿಯುವವನಲ್ಲ. ಇಡೀ ಏರಿಯಾದಲ್ಲಿಯೇ ಅನು ಎಷ್ಟು ಒಳ್ಳೆಯವನು ಎಂದು ಜನ ಹೇಳ್ತಾರೆ. ಇತ್ತೀಚೆಗಷ್ಟೇ ಸಾಲ ಮಾಡಿ ಆಟೋ ಖರೀದಿ ಮಾಡಿದ್ದ. ರಘು ಎನ್ನುವವನು ನಮಗೆ ಪರಿಚಯವೇ ಇಲ್ಲ. ನಮ್ಮ ಮುಂದೆ ಯಾವತ್ತೂ ಅನು, ರಘು ಜೊತೆ ಮಾತನಾಡಿರಲಿಲ್ಲ

ಮೋಸದಿಂದಲೇ ನನ್ನ ಮಗನನ್ನು ಕರೆದುಕೊಂಡು ಹೋಗಿದ್ದಾರೆ. ನನ್ನ ಮಗ ಈ ಕೃತ್ಯದಲ್ಲಿ ಭಾಗಿಯಾಗಿಲ್ಲ, ನ್ಯಾಯ ಸಿಗುವ ಭರವಸೆಯಿದೆ. ನನ್ನ ಮಗನೇ ನನಗೇ ಜೀವ ಅವನಿಗೆ ಈ ರೀತಿ ಆಗಿರೋದು ನೋವು ತಂದಿದೆ ಎಂದು ಅನು ತಂದೆ ಚಂದ್ರಣ್ಣ ಕಣ್ಣೀರು ಹಾಕಿದರು.

Share this article