ಹತ್ಯೆಗಳು ಆತ್ಮಹತ್ಯೆಗಳಾಗಿ ಬದಲು?

KannadaprabhaNewsNetwork | Published : Jul 10, 2024 12:34 AM

ಸಾರಾಂಶ

ಅಕ್ರಮ ಮರಳು, ಮಟ್ಕಾ ದಂಧೆ, ಕಳ್ಳತನ ಪ್ರಕರಣಗಳಿಂದಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಆರೋಪಗಳ ಬೆನ್ನಲ್ಲೇ, ಇದೀಗ ಕೆಲವೊಂದು ಹತ್ಯೆ ಪ್ರಕರಣಗಳನ್ನು ಆತ್ಮಹತ್ಯೆಗಳೆಂದು ಬಿಂಬಿಸಿ ಮುಚ್ಚಿ ಹಾಕಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಅಕ್ರಮ ಮರಳು, ಮಟ್ಕಾ ದಂಧೆ, ಕಳ್ಳತನ ಪ್ರಕರಣಗಳಿಂದಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಆರೋಪಗಳ ಬೆನ್ನಲ್ಲೇ, ಇದೀಗ ಕೆಲವೊಂದು ಹತ್ಯೆ ಪ್ರಕರಣಗಳನ್ನು ಆತ್ಮಹತ್ಯೆಗಳೆಂದು ಬಿಂಬಿಸಿ ಮುಚ್ಚಿ ಹಾಕಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ಶಹಾಪುರದ ಅರಣ್ಯಾಧಿಕಾರಿ ಮಹೇಶ ಕನಕಟ್ಟಿ ಹತ್ಯೆ ಪ್ರಕರಣವನ್ನು ಹೃದಯಾಘಾತವೆಂದು ಬಿಂಬಿಸಲು ಹೊರಟಿದ್ದಾರೆಂದು ಖಾಕಿಪಡೆಯ ವಿರುದ್ಧ ಆರೋಪಗಳ ಜೊತೆಗೇ, ಮತ್ತೊಂದೆರಡು ಅನುಮಾನಾಸ್ಪದ ಸಾವಿನ ಪ್ರಕರಣಗಳು ಮುನ್ನೆಲೆಗೆ ಬಂದಿವೆ.

ಪ್ರಕರಣ -1: ಶಹಾಪುರ ತಾಲೂಕಿನ ಶಖಾಪುರ ತಾಂಡಾದ ರಾಮು ರಾಠೋಡ್‌ (29) ಎಂಬಾತನ ಅನುಮಾನಾಸ್ಪದ ಸಾವಿನ ತನಿಖೆ ನಡೆಸಬೇಕೆಂದು ಕೋರಿ ಜೂ.29ರಂದು ಶಹಾಪುರದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಜನಸ್ಪಂದನದಲ್ಲಿ ಆತನ ತಂದೆ ರಾಮು ಅರ್ಜಿ ನೀಡಿದ್ದಾರೆ.

ಶಿರವಾಳದ ಜೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ, ಮೇ 6 ರಂದು ಹಾಲು ತರಲೆಂದು ಮನೆಯಿಂದ ಹೊರ ಹೋಗಿದ್ದ. ಮೇ 7 ರಂದು ಹೋತಪೇಟೆ ಭಾಗದ ಹೊಲವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿತ್ತು. ಇದನ್ನು ಆತ್ಮಹತ್ಯೆಯೆಂದು ಬಿಂಬಿಸಲಾಗಿದೆ. ಆದರೆ, ತಮ್ಮ ಮಗ ಪ್ರಕಾಶನ ಸಾವಿನಲ್ಲಿ ಅನುಮಾನವಿದೆ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ದೂರಿದ ತಂದೆ ರಾಮು ರಾಠೋಡ್‌ ಹೆಚ್ಚಿನ ತನಿಖೆಗೆ ಆಗ್ರಹಿಸಿದ್ದರೂ, ಪೊಲೀಸ್‌ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ದೂರಿ ಜನಸ್ಪಂದನದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣ - 2: ಶಹಾಪುರ ತಾಲೂಕಿನ ತಿಪ್ಪನಹಳ್ಳಿ ಗ್ರಾಮದ ಭಾಗಪ್ಪ (18) ಎಂಬಾತನನ್ನು ಇದೇ ಏ.16ರಂದು ಕೌಟುಂಬಿಕ ಕಲಹದಡಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಆದರೆ, ಫಿಟ್ಸ್‌ ಕಾಯಿಲೆ ಬಂದು ಹೊಂಡದಲ್ಲಿ ಬಿದ್ದು ಸತ್ತಿದ್ದಾನೆಂದು ಹೇಳಿ ಈ ಪ್ರಕರಣವನ್ನು ಮರೆಮಾಚಲಾಗುತ್ತಿದೆ ಎಂಬುದು ತಂದೆ ಸಿದ್ದಪ್ಪರ ಆರೋಪವಾಗಿದೆ.

ತನಿಖೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸುರಪುರದಲ್ಲಿ ಜು.4ರಂದು ಪ್ರತಿಭಟನೆ ನಡೆಸಿತ್ತು. ಆದರೆ, ಈ ಕುರಿತು ಈವರೆಗಿನ ಪೊಲೀಸರ ನಡೆ ಅನುಮಾನ ಮೂಡಿಸಿದೆ ಎಂದು ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಎಂ. ಹಸನಾಪುರ ದೂರಿದ್ದಾರೆ.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ದೂರು ದಾಖಲಿಸುವವರ ವಿರುದ್ಧವೇ ಪ್ರತಿದೂರು ದಾಖಲಿಸುವಂತೆ ಪೊಲೀಸ್‌ ಅಧಿಕಾರಿಗಳೇ ಪ್ರೇರೇಪಸುತ್ತಾರೆ ಎಂದು ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು ಜನಸ್ಪಂದನದಲ್ಲಿ ಕಿಡಿ ಕಾರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೇಸರ ವ್ಯಕ್ತಪಡಿಸಿದ್ದರು.

ಜಿಲ್ಲೆಯಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣಗಳ ತನಿಖೆ ಹಳ್ಳ ಹಿಡಿಯುತ್ತಿವೆ. ಕೊಲೆಗಳು ನಡೆದರೂ ಆತ್ಮಹತ್ಯೆ ಅಥವಾ ಅಪಘಾತ ಎಂದು ಬಿಂಬಿಸಿ ಕೈತೊಳೆದುಕೊಳ್ಳಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Share this article