ಗೋಡಂಬಿ ಬೆಳೆಯಲು ಮುಸಲಾಪೂರ, ಕನಕಗಿರಿ ಪ್ರದೇಶ ಉತ್ತಮ: ನಿಂಗಪ್ಪ ಅಗಸರ

KannadaprabhaNewsNetwork | Published : Nov 25, 2024 1:06 AM

ಸಾರಾಂಶ

ರೈತರು ಗೋಡಂಬಿ ಬೆಳೆ ಬೆಳೆಯಲು ಮುಂದಾಗಬೇಕು.

ಮಾದರಿ ರೈತರಿಗೆ ಗೋಡಂಬಿ ಸಸಿ ವಿತರಣೆ

ಕನ್ನಡಪ್ರಭ ವಾರ್ತೆ ಕನಕಗಿರಿ

ಗೋಡಂಬಿ ಬೆಳೆ ಬೆಳೆಯಲು ತಾಲೂಕಿನ ಮುಸಲಾಪೂರ ಹಾಗೂ ಕನಕಗಿರಿ ಪ್ರದೇಶವು ಉತ್ತಮವಾಗಿದ್ದು, ರೈತರು ಗೋಡಂಬಿ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕನಕಗಿರಿ-ಕಾರಟಗಿ ತಾಲೂಕು ಯೋಜನಾಧಿಕಾರಿ ನಿಂಗಪ್ಪ ಅಗಸರ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮೂಡಬಿದಿರೆಯ ವಿಜಯಲಕ್ಷ್ಮೀ ಪ್ರತಿಷ್ಠಾನ ಹಾಗೂ ಉಡುಪಿಯ ಪೇಜಾವರ ಅಧೋಕ್ಷಜ ಮಠದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗೋಡಂಬಿ ಸಸಿ ವಿತರಣೆಯಲ್ಲಿ ಅವರು ಈಚೆಗೆ ಮಾತನಾಡಿದರು. ಡಾ. ವೀರೇಂದ್ರ ಹೆಗ್ಗಡೆ ಅವರು ಕೃಷಿ ಕ್ಷೇತ್ರಕ್ಕೆ ಹಲವು ಕೂಡುಗೆ ನೀಡಿದ್ದಾರೆ. ಇದರ ಫಲವಾಗಿ ಕಾರಟಗಿ ಹಾಗೂ ಕನಕಗಿರಿ ತಾಲೂಕಿನಲ್ಲಿ ಗೋಡಂಬಿ ಸಸಿ ವಿತರಿಸುತ್ತಿದ್ದೇವೆ. ಪೂಜ್ಯರ ನಿರ್ದೇಶನದಂತೆ ಕರ್ನಾಟಕದ ಆಯ್ದ ತಾಲೂಕುಗಳಲ್ಲಿ ಪ್ರತಿ ವರ್ಷ ಆಯ್ಕೆಯಾದ ರೈತರಿಗೆ ಮಾತ್ರ ಗೋಡಂಬಿ ಸಸಿ ವಿತರಣೆ ಮಾಡುತ್ತಾ ಬಂದಿದ್ದಾರೆ. ಇದರ ಜೊತೆಗೆ ಹೊಸ-ಹೊಸ ಕೃಷಿ ಕಾರ್ಯಕ್ರಮಗಳ ಉತ್ತೇಜನ ನೀಡುತ್ತಿರುವುದು, ಸಮಗ್ರ ತೋಟಗಾರಿಕೆ ಕೃಷಿ ಹಲಸು, ಮಾವು, ನಿಂಬೆ, ನುಗ್ಗೆ, ತೆಂಗು, ದಾಳಿಂಬೆ ಹೀಗೆ ಅನೇಕ ಬೆಳೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು. ಅಲ್ಲದೇ ಸಾವಯವ ಬೆಳೆಗಳಾದ ಸಿರಿಧಾನ್ಯ, ಸುಸ್ಥಿರ ಕಬ್ಬು ಬೇಸಾಯ, ಹೈನುಗಾರಿಕೆ ಇತ್ಯಾದಿ, ಕೃಷಿ ಮತ್ತು ಸ್ವ-ಉದ್ಯೋಗಕ್ಕೆ ಆದ್ಯತೆ ನೀಡಲಾಗಿದೆ. ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ತಾಲೂಕು ಕೃಷಿ ಮೇಲ್ವಿಚಾರಕ ಎನ್. ಗಂಗಾಧರಪ್ಪ ಮಾತನಾಡಿದರು.

ಧರ್ಮಸ್ಥಳ ಸಂಸ್ಥೆಯ ಮೇಲ್ವಿಚಾರಕರಾದ ಯಲ್ಲಾರಿ ಶಿವಾಜಿ, ಗಂಗಾಧರಯ್ಯ, ಮುಸಲಾಪೂರದ ಹಾಲಿನ ಕೇಂದ್ರದ ಮುಖ್ಯಸ್ಥ ದೇವೇಂದ್ರಪ್ಪ, ಸೇವಾ ಪ್ರತಿನಿಧಿಗಳಾದ ಶಿವಕುಮಾರ, ಸರಸ್ವತಿ, ವಿಎಲ್ಎ ಸೇವಾದಾರ ಚನ್ನಬಸನಗೌಡ, ಪ್ರಗತಿ ಬಂಧು ಸದಸ್ಯರು, ಸ್ವಸಹಾಯ ಸಂಘಗಳ ಸದಸ್ಯರು ಇತರರಿದ್ದರು.

Share this article