ಮುಸ್ಲಿಂ ಆಯ್ತು, ಈಗ ಕ್ರಿಶ್ಚಿಯನ್‌ ಧರ್ಮದ ತುಷ್ಟೀಕರಣ

KannadaprabhaNewsNetwork |  
Published : Sep 22, 2025, 01:00 AM IST
೨೧ಕೆಎಲ್‌ಆರ್-೭ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿದರು. | Kannada Prabha

ಸಾರಾಂಶ

ಸಾಮಾಜಿಕ, ಶೈಕ್ಷಣಿಕ ಹಾಗೂ ಜಾತಿ-ಜನಗಣತಿಯ ಪಟ್ಟಿಯಲ್ಲಿ ೧೪೦ ಜಾತಿಗಳು ದ್ವಿ ಗುರುತುಗಳನ್ನು ಹೊಂದಿವೆ. ಕ್ರೈಸ್ತ ಬ್ರಾಹ್ಮಣ, ಕ್ರೈಸ್ತ ಲಿಂಗಾಯಿತ, ಕ್ರೈಸ್ತ ದಲಿತ, ಕ್ರೈಸ್ತ ಒಕ್ಕಲಿಗ, ಕ್ರೈಸ್ತ ಬಲಿಜ, ಕ್ರೈಸ್ತ ಕುರುಬ, ಕ್ರೈಸ್ತ ಗಾಣಿಗ, ಕ್ರೈಸ್ತ ವಿಶ್ವಕರ್ಮ ಇತ್ಯಾದಿಗಳನ್ನು ಕ್ರೈಸ್ತ ಜನಾಂಗದೊಂದಿಗೆ ಸೇರ್ಪಡೆ ಮಾಡಿರುವುದರ ಹಿಂದೆ ಸೋನಿಯಾ ಕೈವಾಡ ಇದ್ದಂತಿದೆ.

ಕನ್ನಡಪ್ರಭ ವಾರ್ತೆ ಕೋಲಾರಕ್ರೈಸ್ತ ಧರ್ಮಕ್ಕೆ ಹಿಂದುಗಳ ಉಪಜಾತಿಗಳ ಸೇರ್ಪಡೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಧರ್ಮವನ್ನು ವಿಭಜಿಸುವ ಷಡ್ಯಂತ್ರದ ಮೂಲಕ ಮುಸ್ಲಿಂ ಜನಾಂಗದ ನಂತರ ಕ್ರೈಸ್ತರ ಧರ್ಮವನ್ನು ತುಷ್ಟೀಕರಣಪಡಿಸುವ ಓಟ್ ಬ್ಯಾಂಕ್ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಖಂಡಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.೨೨ರ ಸೋಮವಾರದಿಂದ ಪ್ರಾರಂಭವಾಗುವ ಸಾಮಾಜಿಕ, ಶೈಕ್ಷಣಿಕ ಹಾಗೂ ಜಾತಿ-ಜನಗಣತಿಯ ಪಟ್ಟಿಯಲ್ಲಿ ೧೪೦ ಜಾತಿಗಳು ದ್ವಿ ಗುರುತುಗಳನ್ನು ಹೊಂದಿವೆ. ಕ್ರೈಸ್ತ ಬ್ರಾಹ್ಮಣ, ಕ್ರೈಸ್ತ ಲಿಂಗಾಯಿತ, ಕ್ರೈಸ್ತ ದಲಿತ, ಕ್ರೈಸ್ತ ಒಕ್ಕಲಿಗ, ಕ್ರೈಸ್ತ ಬಲಿಜ, ಕ್ರೈಸ್ತ ಕುರುಬ, ಕ್ರೈಸ್ತ ಗಾಣಿಗ, ಕ್ರೈಸ್ತ ವಿಶ್ವಕರ್ಮ ಇತ್ಯಾದಿಗಳನ್ನು ಕ್ರೈಸ್ತ ಜನಾಂಗದೊಂದಿಗೆ ಸೇರ್ಪಡೆ ಮಾಡಿರುವುದರ ಹಿಂದೆ, ಇಟಲಿ ಮೇಡಂ ಸೋನಿಯ ಗಾಂಧಿ ಮತ್ತು ರಾಹುಲ್ ಗಾಂಧಿ ಬಳಿ ಒಪ್ಪಂದ ಮಾಡಿಕೊಂಡಿರುವ ಹುನ್ನಾರ ನಡೆದಿರಬೇಕು ಎಂಬ ಸಂಶಯ ವ್ಯಕ್ತಪಡಿಸಿದರು. ಕ್ರೈಸ್ತರ ಓಲೈಕೆಗೆ ಪ್ರಯತ್ನ

ಪ್ರಥಮವಾಗಿ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಂವಿಧಾನ ಉಲ್ಲಂಘಿಸಿ ಮುಸ್ಲಿಂರನ್ನು ಓಲೈಸಲು ಇಲ್ಲಸಲ್ಲದ ತಿದ್ದುಪಡಿಗಳನ್ನು ಮಾಡಿ ಹಿಂದೂಗಳಿಗೆ ವಂಚಿಸಿದ ನಂತರ ಎರಡನೇಯದಾಗಿ ಕ್ರೈಸ್ತರನ್ನು ಓಲೈಸಿಕೊಳ್ಳುವಂತ ರಾಜಕಾರಣಕ್ಕೆ ಮುಂದಾಗಿದ್ದಾರೆ. ಇವರಿಗೆ ಕಿಂಚತ್ ಆದರೂ ಸ್ವಾಭಿಮಾನ ಇಲ್ಲದಿರುವುದು ವಿಷಾಧನೀಯ. ಹಿಂದೂಗಳನ್ನು ವಿಭಜಿಸಲು ಸಿದ್ದರಾಮಯ್ಯರ ಮನಸ್ಥಿತಿಯು ದೊಡ್ಡಪಾತ್ರವಹಿಸಿದೆ. ಹಿಂಬಾಗಿಲ ಮೂಲಕ ಸೋನಿಯ ಮೇಡಂ ಹಾಗೂ ರಾಹುಲ್ ಗಾಂಧಿ ಇದ್ದು ಮುಂಬಾಗಿಲಿನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಿಂತಿದ್ದಾರೆ ಎಂದರು. ದೇಶದಲ್ಲಿ ಯಾರು ಬೇಕಾದರೂ ಯಾವೂದೇ ಜಾತಿಗೆ ಸೇರ್ಪಡೆಯಾಗಲು ಸರ್ವಸ್ವತಂತ್ರರಾಗಿದ್ದಾರೆ. ಆದರೆ ಎರಡು ಜಾತಿಗಳನ್ನು ಒಂದೇ ಕಾಲಂನಲ್ಲಿ ಸೇರ್ಪಡೆ ಮಾಡುವ ಮೂಲಕ ಗೊಂದಲ ಹುಟ್ಟು ಹಾಕುತ್ತಿರುವುದು ಸರಿಯಲ್ಲ. ಇದರಿಂದ ನೂರಾರು ಕೋಟಿ ರೂ ವೆಚ್ಚದಲ್ಲಿ ಮಾಡುತ್ತಿರುವ ಸಮೀಕ್ಷೆಯು ಯಶಸ್ವಿಯಾಗಲು ಸ್ಥಾಧ್ಯವಿಲ್ಲ. ಗೊಂದಲ ಸೃಷ್ಠಿ ಮಾಡುತ್ತಿರುವುದರಿಂದ ಸಮರ್ಪಕವಾದ ಜಾತಿ-ಜನ ಗಣತಿ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಕ್ರೈಸ್ತ ಧರ್ಮಕ್ಕೆ ಹಿಂದು ಜಾತಿ ಸೇರ್ಪಡೆ

ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಹಿಂದು ಜಾತಿಗಳನ್ನು ಅನಧಿಕೃತವಾಗಿ ಸೇರ್ಪಡೆ ಮಾಡಲಾಗಿದೆ, ಇದರಿಂದ ಹಿಂದೂ ಧರ್ಮದ ಜಾತಿಗಳಿಗೆ ಸರ್ಕಾರದಿಂದ ಸಿಗುವಂತ ಸೌಲಭ್ಯಗಳು ಹಾಗೂ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ, ವಂಚನೆಯಾಗಲಿದೆ. ಇದಕ್ಕೆ ನಮ್ಮ ಹಿಂದೂ ನಾಯಕರಿಂದಲೇ ಮಿತಿಮೀರಿದ ಓಲೈಕೆ ರಾಜಕಾರಣ ಅಸಹ್ಯಕರವಾಗಿದ್ದು ಸಾರ್ವಜನಿಕ ವಲಯದ ಬೇಸರ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯರ ವಿರುದ್ಧ ದಂಗೆ ನಡೆದರೆ ಆಶ್ಚರ್ಯವಿಲ್ಲ ಎಂದರು. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಯೇಂದ್ರ ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಬೇಕು, ಜಾತಿ ಕಾಲಂನಲ್ಲಿ ನಿಮ್ಮ ಮೂಲಜಾತಿ ನಮೂದಿಸಬೇಕೆಂಬ ಸ್ವಷ್ಟವಾದ ಸಂದೇಶ ನೀಡಿದ್ದಾರೆ. ಇದನ್ನು ಎಲ್ಲರೂ ಅನುಸರಿಸುವಂತಾಗಬೇಕೆಂದು ಮನವಿ ಮಾಡಿದರು. ಕಾಂಗ್ರೆಸ್‌ ಸಚಿವರಿಂದಲೇ ಟೀಕೆ

ಅವೈಜ್ಞಾನಿಕ ನಿರ್ಧಾರಗಳ ವಿರುದ್ಧ ಆಡಳಿತ ಪಕ್ಷದ ಸಚಿವ ಎಂ.ಬಿ.ಪಾಟೀಲ್ ಅವರೇ ಸಿದ್ದರಾಮಯ್ಯರ ವಿರುದ್ದ ತಿರುಗಿಬಿದ್ದಿದ್ದಾರೆ. ಈ ಹಿಂದೆ ರಾಜ್ಯದ ಬಹುಸಂಖ್ಯಾತರಾದ ವೀರಶೈವ ಲಿಂಗಾಯಿತ ಸಮುದಾಯವನ್ನು ವಿಭಜಿಸಿದ ಹಿನ್ನೆಲೆಯಲ್ಲಿ ಅದು ನಿಮ್ಮನ್ನೇ ತಿನ್ನಲು ಪ್ರಾರಂಭಿಸಿದೆ. ಇದರ ಜೊತೆಗೆ ಈಗ ಹಿಂದೂ ಧರ್ಮವನ್ನೇ ವಿಭಜಿಸಿ ಕ್ರೈಸ್ತ ಧರ್ಮಕ್ಕೆ ಸೇರ್ಪಡೆ ಮಾಡುವ ಹುನ್ನಾರ ಖಂಡನೀಯ. ಸರ್ಕಾರ ಸಾರ್ವಜನಿಕರ ಆಕ್ಷೇಪಣೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯೂನತೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಗೇರಿ ನಾರಾಯಣಸ್ವಾಮಿ, ಜಿ.ಪಂ ಮಾಜಿ ಸದಸ್ಯ ಬಿ.ವಿ.ಮಹೇಶ್, ಕೆ.ಯು.ಡಿ.ಎ ಮಾಜಿ ಅಧ್ಯಕ್ಷ ವಿಜಯಕುಮಾರ್, ತಾಲ್ಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರ, ಬಿಜೆಪಿ ಕಾರ್ಯದರ್ಶಿ ರಾಜೇಶ್ ಸಿಂಗ್, ನಗರ ಅದ್ಯಕ್ಷ ಸಾ.ಮಾ.ಬಾಬು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಮಹಿಳಾ ಅಧ್ಯಕ್ಷೆ ಅರುಣಮ್ಮ ಮತ್ತಿತರರು ಇದ್ದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ