ಹೇರೂರು ಗ್ರಾಪಂ ನೂತನ ಅಧ್ಯಕ್ಷ ಅಶ್ವಥ್ ಅಭಿನಂದನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕೊಪ್ಪಗ್ರಾಮ ಪಂಚಾಯ್ತಿ ಸೇರಿದಂತೆ ಯಾವುದೇ ಸಾರ್ವಜನಿಕ ವಲಯದ ಜವಾಬ್ದಾರಿಗಳು ಅಧಿಕಾರವಲ್ಲ. ಅದು ಜನರ ಸೇವೆಗಾಗಿ ನಮಗೆ ಬಂದಿರುವ ಅವಕಾಶವಾಗಿದ್ದು, ಜನ ಸೇವಕರಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇರೂರು ಪಿಎಸಿಎಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ಹೇಳಿದರು. ಹೇರೂರು ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶ್ವಥ್ ಅವರ ಅಭಿನಂಧನಾ ಕಾರ್ಯಕ್ರಮದಲ್ಲಿ ಮಾತನಾಡಿ, ಅಧಿಕಾರ ಶಾಶ್ವತವಲ್ಲ, ನಮಗೆ ಸಿಕ್ಕ ಅವಕಾಶವನ್ನು ಬಡವರ, ನಾಗರಿಕರ ಸೇವೆ ಮಾಡುವ ಮೂಲಕ ಸಾಕಾರ ಗೊಳಿಸಬೇಕು. ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಜನ ವಸತಿ ರಹಿತರಿದ್ದು, ಅವರಿಗೆ ನಿವೇಶನ ನೀಡುವತ್ತ ವಿಶೇಷ ಪ್ರಯತ್ನ ವಹಿಸಬೇಕು ಎಂದರು.ಕೊಪ್ಪ ತಾಲೂಕು ಕೆಡಿಪಿ ಸದಸ್ಯ ನಾಗೇಶ್ ಅಮೀನ್ ಮಾತನಾಡಿ, ಉಳ್ಳವರ, ಪ್ರಭಾವಿಗಳ ಬಳಿಯೇ ಇರುತ್ತಿದ್ದ ಅಧಿಕಾರವನ್ನು ಮೀಸಲಾತಿ ಮೂಲಕ ಸಾಮಾನ್ಯರಿಗೂ ನೀಡಿದ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿದಾನಕ್ಕೆ ಸಲ್ಲುತ್ತಿದ್ದು, ಅಧಿಕಾರದ ಗದ್ದುಗೆ ಏರಿದವರು, ಜಾತಿ, ಮತ, ಪಂಥ ಹಾಗೂ ಧರ್ಮದ ಎಲ್ಲೆ ಮೀರಿ ಮನುಜ ಮತದ ಭಾವನೆ ಅಳವಡಿಸಿಕೊಂಡು ತಮ್ಮ ಕರ್ಥವ್ಯ ನಿಭಾಯಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಹೇರೂರು ಪಿಎಸಿಎಸ್ ಅದ್ಯಕ್ಷ ಕುಕ್ಕುಡಿಗೆ ರವಿಂದ್ರ, ಕೊಪ್ಪ ತಾಲೂಕು ಕೆಡಿಪಿ ಸದಸ್ಯ ನಾಗೇಶ್ ಅಮೀನ್, ಪಿಎಸಿಎಸ್ ನಿರ್ದೇಶಕ ಕೆ ಪಿ ರಂಗಪ್ಪಗೌಡ, ಗ್ರಾಪಂ ನಿರ್ಗಮಿತ ಅದ್ಯಕ್ಷೆ ಶೋಭ, ಮುಖಂಡರಾದ ಸುಕುಮಾರ್, ಸಂಜೀವ, ಶಭರೀಶ್ ಇತರರಿದ್ದರು.೧೭ ಸದಸ್ಯ ಬಲದ ಗ್ರಾಪಂನಲ್ಲಿ ೧೦ ಕಾಂಗ್ರೆಸ್ ಬೆಂಬಲಿತ ಹಾಗೂ ೭ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಎರಡನೇ ಅವಧಿ ಅದ್ಯಕ್ಷ ಸ್ಥಾನಕ್ಕೆ ದೇವಗೋಡು ವಾರ್ಡಿನ ಸದಸ್ಯ ಅಶ್ವಥ್ ಮಾತ್ರ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾದರು. ಪಕ್ಷದ ಆಂತರಿಕ ಒಪ್ಪಂದದಂತೆ ಮುಂದಿನ 15 ತಿಂಗಳ ಅಧ್ಯಕ್ಷರಾಗಿ ಅಶ್ವಥ್ ಕಾರ್ಯ ನಿರ್ವಹಿಸಲಿದ್ದಾರೆ. ಉಪಾಧ್ಯಕ್ಷ ಸ್ಧಾನ ಬಿಸಿಎಮ್(ಎ) ಮಹಿಳೆಗೆ ಮೀಸಲಾಗಿದ್ದು, ನಾಮಪತ್ರ ಸಲ್ಲಿಸಿದ್ದ ಸದಸ್ಯೆ ಅಶ್ವಿನಿ ಗಿರೀಶ್ ರವರ ಜಾತಿ ಪ್ರಮಾಣ ಪತ್ರದ ವ್ಯಾಲಿಡಿಟಿ ಮುಗಿದ ಕಾರಣ ನಾಮಪತ್ರ ತಿರಸ್ಕೃತಗೊಂಡು, ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಮುಂದೂಡಲ್ಪಟ್ಟಿತು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಅಶೋಕ ಚುನಾವಣಾ ಅಧಿಕಾರಿ ಯಾಗಿ ಕಾರ್ಯ ನಿರ್ವಹಿಸಿದರು.