ಭವಿಷ್ಯದಲ್ಲಿ ಉದ್ಯೋಗ ಪಡೆಯಲು ಪುಸ್ತಕಗಳನ್ನು ಓದಲೇಬೇಕು

KannadaprabhaNewsNetwork | Published : Aug 25, 2024 1:57 AM

ಸಾರಾಂಶ

ಮನುಜ ಮತ ವೇದಿಕೆವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗ ಪಡೆಯಬೇಕೆಂದರೆ ಪುಸ್ತಕಗಳನ್ನು ಓದಲೇಬೇಕು. ಪುಸ್ತಕಗಳನ್ನು ಓದದಿದ್ದರೆ ಯಾವ ಉನ್ನತ ಸರ್ಕಾರ ಹುದ್ದೆಯನ್ನು ಪಡೆಯಲಾಗುವುದಿಲ್ಲ. ಯುವಕರು ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ತಮ್ಮ ಹಳ್ಳಿಗಳ ಬಗ್ಗೆ ಚಿಂತಿಸಬೇಕು. ಸಮಾಜದ ಒಳಗೆ ನಡೆಯುವ ಅನೀತಿಗಳ ಬಗ್ಗೆ ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಮೊಬೈಲ್ ಚಟವಾಗುತ್ತಿದ್ದು, ಇದು ರೋಗವಾಗಿ ಭವಿಷ್ಯವನ್ನು ಕಸಿಯುತ್ತದೆ ಎಂದು ಡಿವೈಎಸ್ಪಿ ರವಿಪ್ರಸಾದ್ ಹೇಳಿದರು .

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಇಂದಿನ ಯುವಕರು ಪುಸ್ತಕಗಳನ್ನು ಬಿಟ್ಟು ಫೇಸ್‌ಬುಕ್ ಮತ್ತು ಸಾಮಾಜಿಕ ಜಾಲತಾಣಗಳ ಕಡೆ ಮುಖ ಮಾಡುತ್ತಿದ್ದಾರೆ. ನೋಡುವುದನ್ನು ಹೆಚ್ಚಾಗಿ ಅವಲಂಬಿಸಿರುವ ವಿದ್ಯಾರ್ಥಿಗಳು ಕೇಳುವುದನ್ನು ಮತ್ತು ಓದುವುದನ್ನು ಕಡಿಮೆ ಮಾಡಿಕೊಂಡಿದ್ದಾರೆ ಎಂದು ಪಟ್ಟಣದ ಪೊಲೀಸ್‌ ಇಲಾಖೆಯ ಡಿವೈಎಸ್ಪಿ ರವಿಪ್ರಸಾದ್ ವಿಷಾದಿಸಿದರು.

ಮೀನಾಕ್ಷಿ ಗಿರಿರಾಜ್ ಟ್ರಸ್ಟ್, "ಮನುಜ ಮತ ವೇದಿಕೆ " ಮತ್ತು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಅನಿಕೇತನ ವೇದಿಕೆಯ ಸಹಯೋಗದಲ್ಲಿ ನಡೆದ ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅವರ "ಭುವನ ಭಾಗ್ಯ " ಕಾದಂಬರಿ ಬಿಡುಗಡೆ ಮಾಡಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗ ಪಡೆಯಬೇಕೆಂದರೆ ಪುಸ್ತಕಗಳನ್ನು ಓದಲೇಬೇಕು. ಪುಸ್ತಕಗಳನ್ನು ಓದದಿದ್ದರೆ ಯಾವ ಉನ್ನತ ಸರ್ಕಾರ ಹುದ್ದೆಯನ್ನು ಪಡೆಯಲಾಗುವುದಿಲ್ಲ. ಯುವಕರು ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ತಮ್ಮ ಹಳ್ಳಿಗಳ ಬಗ್ಗೆ ಚಿಂತಿಸಬೇಕು. ಸಮಾಜದ ಒಳಗೆ ನಡೆಯುವ ಅನೀತಿಗಳ ಬಗ್ಗೆ ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಮೊಬೈಲ್ ಚಟವಾಗುತ್ತಿದ್ದು, ಇದು ರೋಗವಾಗಿ ಭವಿಷ್ಯವನ್ನು ಕಸಿಯುತ್ತದೆ ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ಉಪನ್ಯಾಸಕ ಹಳ್ಳಿ ವೆಂಕಟೇಶ್ ಅವರು, ಮನುಜ ಮತ ವೇದಿಕೆ, ಅನಿಕೇತನ ವೇದಿಕೆಯು ವಿದ್ಯಾರ್ಥಿಗಳಲ್ಲಿರುವ ಸಾಹಿತ್ಯಾತ್ಮಕ ಅಭಿರುಚಿಗಳನ್ನು ಒರೆಗೆ ಹಚ್ಚುವ ಉದ್ದೇಶದೊಂದಿಗೆ ಕಾರ್ಯಕ್ರಮಗಳನ್ನು ಆಯೋಚಿಸುತ್ತಿದೆ. ಆಧುನಿಕ ಯುಗದಲ್ಲಿ ಮೊಬೈಲ್‌ಗೆ ದಾಸರಾಗುತ್ತಿರುವ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ ಬೆಳೆಯಬೇಕು. ಮನುಷ್ಯ ಪ್ರಜ್ಞೆಯೊಂದಿಗೆ ಉತ್ತಮ ಸಮಾಜ ನಿರ್ಮಾತೃಗಳಾಗಬೇಕು. ಮನುಷ್ಯನಾಗಿ ನಾವು ಹುಟ್ಟುವುದಲ್ಲ, ಮನುಷ್ಯರಾಗುವುದಕ್ಕೆ ನಾವು ಹುಟ್ಟುತ್ತೇವೆ. ಸಾಮಾಜಿಕ ಜವಾಬ್ದಾರಿಗಳನ್ನು ಬೆಳೆಸಿಕೊಳ್ಳಲು ಮತ್ತು ಪರಿಸರ ಕಾಳಜಿಯನ್ನು ಹೊಂದಲು ನಮ್ಮ ವೇದಿಕೆಗಳು ಮಾರ್ಗದರ್ಶಕವಾಗುತ್ತದೆ ಎಂದು ಹೇಳಿದರು. ಭುವನ ಭಾಗ್ಯ ಕಾದಂಬರಿ ಕುರಿತು ಮಾತನಾಡಿದ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಅವರು, ಪುಸ್ತಕ ಓದುವ ಹವ್ಯಾಸ ಬದುಕನ್ನು ಸುಂದರಗೊಳಿಸುತ್ತದೆ. ಹೊನ್ನಶೆಟ್ಟಿ ಹಳ್ಳಿ ಗಿರಿರಾಜ್ ಅವರು ರಾಜ್ಯ ಮಟ್ಟದ ಕಾದಂಬರಿಕಾರರು. ಅವರ ಭುವನ ಭಾಗ್ಯ ಕಾದಂಬರಿಯು ಗ್ರಾಮೀಣ ಪ್ರದೇಶದ ನೈಜ ಚಿತ್ರಣ ಎಂದರು. ಸಮಾಜ ಸೇವಾ ರತ್ನ ಪ್ರಶಸ್ತಿ ಪಡೆದ ಪುಟ್ಟರಾಜು ಹೊನ್ನಾವರ ಅವರು ಮಾತನಾಡಿ, ದೇವರು ನಮ್ಮನ್ನು ಸೃಷ್ಟಿಸಿರುವುದು ಸೇವೆಗೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಂಗೇಗೌಡ ಅವರು ಮಾತನಾಡಿ, ನಮ್ಮ ತಾಲೂಕಿನಲ್ಲಿ ಎಸ್.ಎಲ್.ಭೈರಪ್ಪನವ ರನ್ನು ಬಿಟ್ಟರೆ ಕಾದಂಬರಿ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರು ಗಿರಿರಾಜ್ ಅವರು. ಇವರು ಮತ್ತಷ್ಟು ಕೃತಿಗಳನ್ನು ಬರೆದು ಸಾಹಿತ್ಯದ ಮೂಲಕ ನಮ್ಮ ಊರಿನ ಕೀರ್ತಿ ಬೆಳಗುವಂತಾಗಲಿ ಎಂದು ಆಶಿಸಿದರು.ಸೋಮಶೇಖರ್ ಪ್ರಾರ್ಥನೆ ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಜೆ.ಎಸ್.ಗುರುರಾಜ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.

Share this article