ಕನ್ನಡಪ್ರಭ ವಾರ್ತೆ ಹಲಗೂರು
ಶ್ರಾವಣ ಮಾಸದ ಮೊದಲನೇ ಶನಿವಾರ ಮುತ್ತತ್ತಿ ಗ್ರಾಮದಲ್ಲಿ ನೆಲೆಸಿರುವ ಮುತ್ತತ್ತಿರಾಯಸ್ವಾಮಿಗೆ 6ನೇ ವರ್ಷದ ಬ್ರಹ್ಮರಥೋತ್ಸವ ಅಂಗವಾಗಿ ಬೆಣ್ಣೆಯಿಂದ ಅಲಂಕಾರ ಮಾಡಿ ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.ಹಲಗೂರಿಂದ 22 ಕಿಲೋ ಮೀಟರ್ ದೂರದ ಮುತ್ತತ್ತಿ ಗ್ರಾಮದಲ್ಲಿ ತೆತ್ರಾಯುಗದಲ್ಲಿ ಆಂಜನೇಯ ನೆಲೆಸಿ, ನಂಬಿ ಬರುವ ಭಕ್ತರ ಕಷ್ಟ- ಕಾರ್ಪಣ್ಯಗಳನ್ನು ನಿವಾರಿಸುತ್ತಿರುವ ವಿವಿಧ ಜಿಲ್ಲೆಗಳಲ್ಲಿ ಅಪಾರ ಭಕ್ತಾದಿಗಳನ್ನು ಒಳಗೊಂಡಿದ್ದಾನೆ.
ಮುತ್ತತ್ತಿರಾಯನಿಗೆ ಶ್ರಾವಣ ಮಾಸದ ಮೊದಲನೇ ದಿನ ಶನಿವಾರ ಆರನೇ ವರ್ಷದ ಬ್ರಹ್ಮರಥೋತ್ಸವ ಈ ಬಾರಿ ಅಪಾರ ಭಕ್ತಾದಿಗಳೊಡನೆ ನೆರವೇರಿತು. ಬೆಳಗಿನ ಜಾವ ಕಾವೇರಿ ನದಿಯಿಂದ ಕಾವೇರಿ ಮಾತೆ ಒಡಲಿನಲ್ಲಿ ನೀರು ತಂದು ದೇವರ ಮೂರ್ತಿಯನ್ನು ಶುಚಿಗೊಳಿಸಿ ಅಭಿಷೇಕ ನಡೆಸಲಾಯಿತು.ನಂತರ ಗಣಹೋಮ, ನವಗ್ರಹ ಹೋಮ, ಸ್ವಾಮಿಗೆ ಬೆಣ್ಣೆಯಿಂದ ಅಲಂಕಾರ ಮಾಡಿ ಪಾದಪೂಜೆ ನಡೆಸಿ ವಿವಿಧ ಪುಷ್ಪಗಳನ್ನು ಧರಿಸಿ ಮಹಾ ಮಂಗಳಾರತಿ ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.
ನಂತರ ದೇವರ ಮೂರ್ತಿಯನ್ನು ರಥದಲ್ಲಿ ಕೂರಿಸಿ ರಥವನ್ನು ಅಲಂಕರಿಸಿಕೊಂಡು ಕಬ್ಬಾಳಮ್ಮನ ದೇವರ ಮೆರವಣಿಗೆ, ವೀರಗಾಸೆ, ಹಲಗೂರು ಭದ್ರಕಾಳಿ ದೇವರ ಬಸಪ್ಪನು ಸಹ ಪಾಲ್ಗೊಂಡು ಗ್ರಾಮದಲ್ಲಿ ಮೆರವಣಿಗೆ ನಡೆಸುವಾಗ ಭಕ್ತರು ಶ್ರೀ ರಮಣ ಪಾದಕ್ಕೆ ಗೋವಿಂದ ಗೋವಿಂದ ಎಂಬ ಘೋಷಣೆಗಳನ್ನು ಕೂಗುತ್ತಾ ಭಕ್ತಿ ಸಮರ್ಪಿಸಿದರು. ನಂತರ ದೇಗುಲದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದು ಪುನೀತರಾದರು.ಅರ್ಚಕ ರವಿ ಮಾತನಾಡಿ, ದೇವರ ಸನ್ನಿಧಿಯಲ್ಲಿ 6 ವರ್ಷಗಳಿಂದ ಬ್ರಹ್ಮರಥೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಶ್ರಾವಣ ಮಾಸದ ಅಂಗವಾಗಿ ಮೊದಲನೇ ಶನಿವಾರ ಮುತ್ತತ್ತಿರಾಯನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಪ್ರತಿವರ್ಷ ಜಾತ್ರಾ ಮಹೋತ್ಸವವೂ ಸಹ ನಡೆಸಲಾಗುತ್ತದೆ ಎಂದರು.
ಶ್ರಾವಣ ಮಾಸದಲ್ಲಿ ದೇವರಿಗೆ ಪೂಜೆ ಸಲ್ಲಿಸುವುದರಿಂದ ತಮ್ಮ ಇಷ್ಟಾರ್ಥ ನೆರವೇರುತ್ತದೆ. ದೇವಸ್ಥಾನ ಹೆಚ್ಚು ಭಕ್ತರನ್ನು ಒಳಗೊಂಡಿದೆ. ಪ್ರವಾಸಿಗರು ಸುಂದರ ಪ್ರವಾಸಿ ತಾಣಕ್ಕೆ ಪ್ರಕೃತಿ ಸೌಂದರ್ಯ ಸವಿಯಲು ಹಾಗೂ ನೋಡಲು ಬರುತ್ತಾರೆ ಎಂದು ಹೇಳಿದರು.ಕಾವೇರಿ ನದಿಗೆ ಕೆಆರ್ ಎಸ್ ಮತ್ತು ಕಬಿನಿ ಜಲಾಶಯದಿಂದ ಹೆಚ್ಚು ನೀರು ಬಿಟ್ಟ ಹಿನ್ನೆಲೆಯಲ್ಲಿ ಮುತ್ತತ್ತಿಗೆ ಭಕ್ತರು ಹಾಗೂ ಪ್ರವಾಸಿಗರಿಗೆ ಅಷಾಢ ಮಾಸದಲ್ಲಿ ನಿಷೇಧ ಮಾಡಲಾಗಿತ್ತು. ಶ್ರಾವಣ ಮಾಸದಲ್ಲಿ ಮುತ್ತತ್ತಿರಾಯನಿಗೆ ಪೂಜೆ ಸಲ್ಲಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಕಾವೇರಿ ಫಿಶಿಂಗ್ ಕ್ಯಾಂಪನಲ್ಲೂ ಸಹ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು.