ಕನ್ನಡಪ್ರಭ ವಾರ್ತೆ ಕಲಬುರಗಿ
ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ, ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಅಭಿವೃದ್ಧಿಗಾಗಿ ಮೂಲ ಸೌಕರ್ಯ ಮತ್ತು ಹೈಟೆಕ್ ಪ್ರಯೋಗಾಲಯಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ, ಶರಣಬಸವ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರದ ಪಿಜಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗವು ತಿಳುವಳಿಕೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿವೆ.ಸೋಮವಾರ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಸಿಯುಕೆ ಮುಖ್ಯ ಕ್ಯಾಂಪಸ್‍ನಲ್ಲಿ ಸಿಯುಕೆ ಉಪಕುಲಪತಿ ಬಟ್ಟು ಸತ್ಯನಾರಾಯಣ ಹಾಗೂ ಶರಣಬಸವ ವಿವಿ ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಉಪಸ್ಥಿತಿಯಲ್ಲಿ, ಸಿಯುಕೆಯ ರಿಜಿಸ್ಟ್ರಾರ್ ಡಾ. ಆರ್.ಆರ್. ಬಿರಾದಾರ್ ಮತ್ತು ಶರಣಬಸವ ವಿವಿ ರಿಜಿಸ್ಟ್ರಾರ್ ಡಾ. ಅನಿಲಕುಮಾರ ಬಿಡವೆ ಅವರು ಕ್ರಮವಾಗಿ ಎಂಒಯುಗೆ ಸಹಿ ಹಾಕಿದರು.
ಉನ್ನತ ಶಿಕ್ಷಣದ ಎರಡು ಕೇಂದ್ರಗಳ ನಡುವಿನ ತಿಳುವಳಿಕಾ ಒಪ್ಪಂದ ಪತ್ರದ ಮುಖ್ಯ ಉದ್ದೇಶವೆಂದರೆ ವಿದ್ಯಾರ್ಥಿಗಳಲ್ಲಿ ಸಂಶೋಧನೆಯನ್ನು ಮಾಡಲು ಉತ್ತೇಜಿಸುವುದು, ಎರಡೂ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಸಂಪನ್ಮೂಲ ಮತ್ತು ಕೌಶಲ್ಯಗಳನ್ನು ಪರಸ್ಪರ ಹಂಚಿಕೊಳ್ಳುವುದು, ಎರಡೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಆಯಾ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವುದು ಈ ತಿಳಿವಳಿಕೆ ಒಪ್ಪಂದದ ವಿಶಾಲ ಉದ್ದೇಶವಾಗಿದೆ.ಪ್ರಾಣಿಗಳ ನಿರ್ವಹಣೆಯ ಸಂಬಂಧಿತ ಪ್ರಯೋಗಗಳಲ್ಲಿ ಸಹಕಾರವನ್ನು ಒಳಗೊಂಡಿದ್ದು, ಪ್ರಾಣಿಗಳ ಶರೀರಶಾಸ್ತ್ರ, ಜೀವಶಾಸ್ತ್ರ ಮತ್ತು ಫಾರ್ಮಾಕೋಟಾಕ್ಸಿಕಾಲಜಿ, ಜ್ಞಾನದ ಶೈಕ್ಷಣಿಕ ಪ್ರಸರಣ, ತರಬೇತಿ ಕೌಶಲ್ಯಗಳು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸುವುದು, ಕೌಶಲ್ಯ ಆಧಾರಿತ ಕಲಿಕೆ ಹಾಗೂ ಮಾನವ ಸಾಮರ್ಥ್ಯ ವೃದ್ಧಿಸುವುದು ಈ ಒಪ್ಪಂದದ ಮುಖ್ಯ ಉದ್ದೇಶ.
ಶರಣಬಸವ ವಿವಿ ಕುಲಾಧಿಪತಿ ಹಾಗೂ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಕಾರ್ಯದರ್ಶಿ ಬಸವರಾಜ ದೇಶಮುಖ, ಉಪಕುಲಪತಿ ಡಾ.ನಿರಂಜನ್ ವಿ. ನಿಷ್ಠಿ ಈ ಬೆಳವಣಿಗೆಗೆ ಹರ್ಷ ವ್ಯಕ್ತಪಡಿಸಿ ಪ್ರಾಣಿಶಾಸ್ತ್ರ ವಿಭಾಗವನ್ನು ಅಭಿನಂದಿಸಿದ್ದಾರೆ.