ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರಾಜ್ಯದಲ್ಲಿ ಹೈನೋದ್ಯಮ ದೊಡ್ಡ ಉದ್ಯಮವಾಗಿ ಬೆಳೆಯಲು ದಿ. ಎಂ.ವಿ.ಕೃಷ್ಣಪ್ಪರವರ ದೂರದೃಷ್ಟಿಯೇ ಕಾರಣ. ಅವರ ಹೆಸರು ಸೂರ್ಯ ಚಂದ್ರ ಇರುವವರೆಗೂ ಜನರು ನೆನೆಯುತ್ತಾರೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಶ್ಯಾಂ ಆಸ್ಪತ್ರೆ ಬಳಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವತಿಯಿಂದ ನಿರ್ಮಾಣ ಮಾಡಿರುವ ಉಪ ಕಚೇರಿ ಪ್ರಮಿಳ ಎಂ.ವಿ.ಕೃಷ್ಣಪ್ಪ ಭವನವನ್ನು ಉದ್ಘಾಟಿಸಿ ಶಾಸಕರು ಮಾತನಾಡಿದರು.ರೈತರ ಜೀವನಾಡಿ ಹೈನೋದ್ಯಮ
ಹೈನೋದ್ಯಮ ಇಂದು ಕೋಟ್ಯಂತರ ರೈತರ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಹೈನೋದ್ಯಮ ಇಲ್ಲದಿದ್ದಿದ್ದರೆ ಬರಗಾಲದಲ್ಲಿ ಜನರ ಬದುಕು ಮೂರಾಬಟ್ಟೆಯಾಗುತ್ತಿತ್ತು, ಅವಕಾಶ ಸಿಕ್ಕಾಗ ಅಧಿಕಾರ ಬಳಸಿಕೊಂಡು ಜನರಿಗೆ ಅನುಕೂಲವಾಗುವ ಕೆಲಸ ಮಾಡಿದರೆ ಅವರ ಹೆಸರು ಜನರ ಹೃದಯದಲ್ಲಿ ಜೀವಂತವಾಗಿರುತ್ತದೆ ಎಂಬುದಕ್ಕೆ ಎಂ.ವಿ.ಕೃಷ್ಣಪ್ಪ ಸಾಕ್ಷಿ. ಅವರು ಹೈನೋದ್ಯವನ್ನು ಮಾತ್ರ ಪರಿಚಯಿಸದೆ ಬೆಮಲ್ ಕಾರ್ಖಾನೆಯನ್ನು ತಂದು ಲಕ್ಷಾಂತರ ಜನರಿಗೆ ಉದ್ಯೋಗ ಸಿಗುವಂತೆ ಮಾಡದಿದ್ದರೆ ಈ ಪ್ರದೇಶದ ಜನರ ಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಕಲ್ಪಿಸಲು ಸಾಧ್ಯವಿಲ್ಲ ಎಂದರು.ಇಂತಹ ವ್ಯಕ್ತಿಯ ಹೆಸರಿನಲ್ಲಿ ಕೋಲಾರದಲ್ಲಿ ನಿರ್ಮಾಣವಾಗುತ್ತಿದ್ದ ಎಂ.ವಿ.ಕೆ.ಗೋಲ್ಡನ್ ಡೈರಿಗೆ ಹಿಂದಿನ ಬಿಜೆಪಿ ಸರ್ಕಾರ ತಡೆ ನೀಡಿತೆಂದು ಬೇಸರ ವ್ಯಕ್ತಪಡಿಸಿದರು. ಆದರೆ ಕಾಂಗ್ರೆಸ್ ಮತ್ತೆ ಅದಕ್ಕೆ ಜೀವ ತುಂಬಿರುವುದನ್ನು ಶ್ಲಾಘಿಸಿದರು.ಐಸ್ ಕ್ರಿಂ, ಸೋಲಾರ್ ಘಟಕಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಡೇರಿ ಕ್ಷೇತ್ರದಲ್ಲಿ ಯಾವುದೇ ಹೊಸ ಯೋಜನೆಗಳು ಬಂದರೂ ಅದು ಹಾಸನ ಹಾಗೂ ಬೆಂಗಳೂರಿನ ಒಕ್ಕೂಟಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದು, ಎಂ.ವಿ.ಕೆ ಗೋಲ್ಡನ್ ಡೇರಿ, ಐಸ್ ಕ್ರಿಂ ಘಟಕ ಮತ್ತು ೧೨ಯೂನಿಟ್‌ನ ಸೋಲಾರ್ ಪ್ಲಾಂಟ್ ಯೋಜನೆ ೩೫೦ಕೋಟಿ ವೆಚ್ಚದಲ್ಲಿ ಸಿದ್ದವಾಗುತ್ತಿದೆ ಎಂದು ವಿವರಿಸಿದರು.ಲಾಭದಲ್ಲಿ ಕೋಚಿಮುಲ್
ರಾಜ್ಯದ ೧೪ ಹಾಲು ಒಕ್ಕೂಟದ ಪೈಕಿ ಹೆಚ್ಚಿನ ಲಾಭದಲ್ಲಿ ನಡೆಯುತ್ತಿರುವ ಒಕ್ಕೂಟದ ಕೋಲಾರ ಹಾಗೂ ಹಾಲಿಗೆ ಹೆಚ್ಚಿನ ಬೆಲೆ ನೀಡುತ್ತಿರುವುದೂ ಕೋಲಾರ ಒಕ್ಕೂಟ ಮಾತ್ರವಾಗಿದೆ, ಕೋಲಾರ ಹಾಲು ಒಕ್ಕೂಟವೆಂದರೆ ಉತ್ತಮ ಹೆಸರಿದೆ ಈ ಹೆಸರಿಗೆ ಕಳಂಕ ಬಾರದಂತೆ ಆಡಳಿತ ನಡೆಸುವೆ ಎಂದು ಭರವಸೆ ನೀಡಿದರು.ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಎಂಎಲ್‌ಸಿ ಅನಿಲ್ ಕುಮಾರ್, ಕಾರಹಳ್ಳಿ ಗ್ರಾಪಂ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ಹಾಲು ಒಕ್ಕೂಟದ ನಿರ್ದೇಶಕರಾದ ಜಯಸಿಂಹಕೃಷ್ಣಪ್ಪ, ಎನ್.ನಾಗರಾಜ್,ಡಿ.ವಿ.ಹರೀಶ್,ಎನ್.ಹನುಮೇಶ್,ಕಾಂತಮ್ಮ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸಗೌಡ, ಭೂ ಬ್ಯಾಂಕಿನ ಅಧ್ಯಕ್ಷ ಎಚ್.ಕೆ.ನಾರಾಯಣಸ್ವಾಮಿ ಇತರರು ಇದ್ದರು.