ಕುಟುಂಬ ರಾಜಕರಣಕ್ಕೆ ಅಂತ್ಯ ಕಾಣಿಸುವುದೇ ನನ್ನ ಗುರಿ: ಕೆ.ಎಸ್‌.ಈಶ್ವರಪ್ಪ

KannadaprabhaNewsNetwork | Published : Apr 30, 2024 2:04 AM

ಸಾರಾಂಶ

ಆನವಟ್ಟಿಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಲೋಕಸಭೆ ಅಭ್ಯರ್ಥಿ ಕೆ.ಎಸ್‍ ಈಶ್ವರಪ್ಪಗೆ ಅಭಿಮಾನಿಗಳು ಕುರಿಮರಿ ನೀಡಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಆನವಟ್ಟಿ

ನಾನು ರಾಷ್ಟ್ರಭಕ್ತ ಮುಸ್ಲಿಂರನ್ನು ಗೌರವಿಸುತ್ತೇನೆ. ಆದರೆ, ರಾಷ್ಟ್ರ ದ್ರೋಹಿ, ಅತ್ಯಚಾರಿ, ಭಯೋತ್ಪಾದಕ ಮುಸ್ಲಿಂರನ್ನು ದ್ವೇಷಿಸುತ್ತೇನೆ. ಲವ್‍ ಜಿಹಾದ್‍ ಹೆಸರಲ್ಲಿ ಹಿಂದು ಮಹಿಳೆಯರನ್ನು ಕೊಲೆ ಮಾಡುವ ಮುಸ್ಲಿಮರಿಗೆ ಶಿಕ್ಷೆಯಾಗುವವರೆಗೂ ಬಿಡುವುದಿಲ್ಲ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‍.ಈಶ್ವರಪ್ಪ ಗುಡುಗಿದರು.

ಪಟ್ಟಣದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪ ಕುಟುಂಬ ನನ್ನ ಬಗ್ಗೆ ಇಲ್ಲ ಸಲ್ಲದ ವಂದತಿ ಹರಡಿಸಿದ್ದರು. ಆದರೆ, ಪಕ್ಷ ಶುದ್ಧೀಕರಿಸುವ ತಪಸ್ಸು ಕೈಗೊಂಡಿದ್ದೇನೆ. ನನ್ನ ಕಬ್ಬು ಹಿಡಿದ ರೈತನ ಗುರುತಿಗೆ ಮತ ನೀಡಿ ಮೋದಿ ಕೈ ಬಲಪಡಿಸಬೇಕು. ಬಿಜೆಪಿ ನನಗೆ ತಾಯಿ ಇದ್ದಂತೆ, ನಾನು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ. ಲೋಕಸಭೆ ಚುಣಾವಣೆಯಲ್ಲಿ ಗೆದ್ದು ಮೋದಿ ಮತ್ತೆ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ ಎಂದರು.

ನರೇಂದ್ರ ಮೋದಿ ಅವರು, ಸೊನಿಯಾ, ರಾಹುಲ್‍ ಗಾಂಧಿ ಅವರ ಕುಟುಂಬ ರಾಜಕರಣ ಅಂತ್ಯಗೊಳಿಸುವ ಶಪಥ ಮಾಡಿದ್ದಾರೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ತೊರೆದು, ಮೋದಿ, ಅಮಿತ್ ಶಾ ಅವರನ್ನು ಮನಸ್ಸಿಗೆ ಬಂದಂತೆ ಬೈದು, ಮತ್ತೆ ಬಿಜೆಪಿ ಸೇರಿ ತನ್ನ ಕುಟುಂಬದ ಹಿಡಿತದಲ್ಲಿ ಪಕ್ಷ ಇಟ್ಟುಕೊಂಡಿರುವ ಯಡಿಯೂರಪ್ಪ ಅವರು ತಮ್ಮ ಸ್ವಾರ್ಥ ರಾಜಕರಣಕ್ಕೆ ಅಪ್ಪಟ ಹಿಂದುವಾದಿ ನಾಯಕರನ್ನು ಮೂಲೆಗುಂಪು ಮಾಡಿ ತನ್ನಗೆ ಬೇಕಾದವರಿಗೆ ಬಿಜೆಪಿ ಟಿಕೆಟ್‍ ಕೂಡಿಸಿದ್ದಾರೆ. ಒಂದು ಕುಟುಂಬದ ಕೈಯಲ್ಲಿ ಸಿಕ್ಕಿ ನಲುಗುತ್ತಿರುವ ಪಕ್ಷವನ್ನು ಕುಟುಂಬ ರಾಜಕಾರಣದಿಂದ ಮುಕ್ತಗೊಳಿಸಬೇಕು. ಇಲ್ಲಿ ರಾಘವೇಂದ್ರರನ್ನು ಸೋಲಿಸಿ, ಕುಟುಂಬ ರಾಜಕರಣಕ್ಕೆ ಅಂತ್ಯಕಾಣಿಸುವುದೇ ನನ್ನ ಗುರಿ ಎಂದರು.

ಸಿದ್ದರಾಮಯ್ಯ ಗ್ಯಾರಂಟಿ ಹೆಸರಲ್ಲಿ ರಾಜ್ಯದ ಖಾಜಾನೆ ಕಾಲಿ ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್‍ ಬಂದರೆ ಐದು ಗ್ಯಾರಂಟಿ ಜನರಿಗೆ ನೀಡುತ್ತೇವೆ ಎಂದು ನೀಡಿರುವ ಕಾರ್ಡ್ ಎಲ್ಲಾ ಹಸಿಸುಳ್ಳು, ಅವುಗಳನ್ನು ಸುಟ್ಟು ಹಾಕಿ. ಬಡವರ ಹೆಸರಲ್ಲಿ ರಾಜಕರಣ ಮಾಡುವ ಕಾಂಗ್ರೆಸ್‍ , ಬಿಜೆಪಿ ಬಡವರಿಗೆ ಏನು ಅನುಕೂಲ ಮಾಡಿಲ್ಲ. ನಾನು ಉಪಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದ ಸಾಕಾಷ್ಟು ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ಮಠ, ಮಂದಿರಗಳಿಗೆ ಅನುದಾನ ಕೂಡಿಸಿದ್ದೇನೆ. ಆದರೆ, ಸೊರಬ ತಾಲೂಕಿನಲ್ಲಿ 35 ವರ್ಷದಿಂದ ಬಗರ್ ಹುಕಂ, ಅರಣ್ಯ ವಾಸಿಗಳಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಹೇಳುತ್ತಲ್ಲೇ ಜನರಿಗೆ ಮೋಸ ಮಾಡಿದ್ದಾರೆ. ಎಲ್ಲಾ ಜಾತಿ ಧರ್ಮದಲ್ಲೂ ಬಡವರಿದ್ದಾರೆ. ಅವರಿಗೆ ನ್ಯಾಯ ಒದಗಿಸುವುದೇ ನನ್ನ ಮೊದಲ ಕೆಲಸ ಎಂದರು.

ಬಂಗಾರಪ್ಪರನ್ನು ಕಂಡರೇ ನನಗೆ ತುಂಬ ಗೌರವ, ಕಾರಣ ಅವರು ಬಡವರ ಪರ ಚಿಂತನೆ ಮಾಡುತ್ತಿದ್ದರು. ಬಡವರ ಪರ ಯೋಜನೆ ಜಾರಿಗೆ ತಂದಿದ್ದರು. ಆದರೆ, ಇಂದು ಅವರ ಮಕ್ಕಳಾದ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಕಚ್ಚಾಟದಿಂದ ಸೊರಬ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಸಂಪೂರ್ಣ ನೀರಾವರಿ ಕಲ್ಪಿಸಲು ಸಾಧ್ಯವಾಗಿಲ್ಲ. ಇನ್ನೂ ಪುತ್ರಿ ಗೀತಾ ಏನು ಮಾಡಬಹುದು ಎಂದು ನೀವೇ ಯೋಚಿಸಿ ಎಂದು ಹೇಳಿದರು.

ಬಹಿರಂಗ ಸಮಾವೇಶದಲ್ಲಿ ಆನವಟ್ಟಿ ಘಟಕದ ರಾಷ್ಟ್ರ ಭಕ್ತರ ಬಳಗದ ಅಧ್ಯಕ್ಷ ರಾಮಾನಾಯ್ಕ ಕೋಟಿಪುರ, ಸದಸ್ಯರಾದ ಕೇಶವ ನಾಯ್ಕ, ಸಂಜೀವ್ ನಾಯ್ಕ, ಪ್ರಶಾಂತ ನೆಲ್ಲಿಕೊಪ್ಪ ಮುಖಂಡರಾದ ವಿಠ್ಠಲ್‍ ಬನ್ನಿ, ಟಿ.ವಿ ಬೆಳಗಾವಿ, ಎನ್‍ವೀರಪ್ಪ, ಮೂಗಡಪ್ಪ, ಸುಜಾತ ಕಳ್ಳಿಕೇರಿ, ದುರ್ಗಪ್ಪ ಅಂಗಡಿ, ದಾನಪ್ಪ ಗಂಟೇರ್, ಪ್ರಭಾಕರ್ ರಾಯ್ಕರ್, ಚಿದಾನಂದಗೌಡ, ಮಂಜುನಾಥ ಸಾಗರ, ಹೇಮಾರವಿ, ವಕೀಲ ಶಿವಪ್ಪ ಇದ್ದರು.

Share this article