ಮೈಷುಗರ್ ಕಬ್ಬು ಅರೆಯುವಿಕೆ ಅಸ್ತವ್ಯಸ್ತ..!

KannadaprabhaNewsNetwork |  
Published : Jul 23, 2025, 01:45 AM IST
22ಕೆಎಂಎನ್‌ಡಿ-2 | Kannada Prabha

ಸಾರಾಂಶ

ಸರ್ಕಾರಿ ಸ್ವಾಮ್ಯದ ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಅಸ್ತವ್ಯಸ್ತಗೊಂಡಿದೆ. ಕಳೆದೊಂದು ವಾರದಿಂದ 1500 ಟನ್ ಕಬ್ಬನ್ನು ಅರೆಯುವುದಕ್ಕೆ ಸಾಧ್ಯವಾಗದಿರುವುದು ಕಾರ್ಖಾನೆ ದುರಂತ ಸ್ಥಿತಿಗೆ ಸಾಕ್ಷಿಯಾಗಿದೆ. ಕಾರ್ಖಾನೆ ಸ್ಥಿತಿ ಹಳ್ಳ ಹಿಡಿದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು, ಮೂರು ತಾಲೂಕುಗಳ ಶಾಸಕರು ಅತ್ತ ತಿರುಗಿ ನೋಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರಿ ಸ್ವಾಮ್ಯದ ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಅಸ್ತವ್ಯಸ್ತಗೊಂಡಿದೆ. ಕಳೆದೊಂದು ವಾರದಿಂದ 1500 ಟನ್ ಕಬ್ಬನ್ನು ಅರೆಯುವುದಕ್ಕೆ ಸಾಧ್ಯವಾಗದಿರುವುದು ಕಾರ್ಖಾನೆ ದುರಂತ ಸ್ಥಿತಿಗೆ ಸಾಕ್ಷಿಯಾಗಿದೆ. ಕಾರ್ಖಾನೆ ಸ್ಥಿತಿ ಹಳ್ಳ ಹಿಡಿದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು, ಮೂರು ತಾಲೂಕುಗಳ ಶಾಸಕರು ಅತ್ತ ತಿರುಗಿ ನೋಡುತ್ತಿಲ್ಲ. ಅಧ್ಯಕ್ಷರು, ಅಧಿಕಾರಿಗಳು ಮತ್ತು ಗುತ್ತಿಗೆ ಪಡೆದಿರುವ ಕಂಪನಿ ನಡುವೆ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದೆ.ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ರೈತ ಮುಖಂಡರು ಮಂಗಳವಾರ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅವ್ಯವಸ್ಥೆಯ ದಿವ್ಯದರ್ಶನವಾಗಿತ್ತು. ಕಾರ್ಖಾನೆಗೆ ನಿರಂತರ ಕಬ್ಬು ಪೂರೈಕೆಯಾಗದಿರುವುದು, ಕಾರ್ಖಾನೆ ಇನ್ನೂ ಕಬ್ಬು ಅರೆಯುವುದಕ್ಕೆ ಸಂಪೂರ್ಣವಾಗಿ ಸಜ್ಜಾಗದಿರುವುದು, ಪೂರೈಕೆಯಾಗಿರುವ 1500 ಟನ್ ಕಬ್ಬಿನಲ್ಲಿ ಸ್ವಲ್ಪ ಪ್ರಮಾಣದ ಕಬ್ಬನ್ನಷ್ಟೇ ಅರೆದಿರುವುದು ಕಂಡುಬಂದಿತು.

ಹುಟ್ಟಿದ ಮಗು ಎದ್ದು ನಡೆಯುವುದೇ?

ಸಮರ್ಪಕವಾಗಿ ಕಬ್ಬು ಅರೆಯದಿರುವುದಕ್ಕೆ ಕಾರಣವೇನೆಂದು ಅಧ್ಯಕ್ಷರು, ಅಧಿಕಾರಿಗಳನ್ನು ಪ್ರಶ್ನಿಸಿದರೆ ಒಬ್ಬೊಬ್ಬರಿಂದ ಒಂದೊಂದು ಉತ್ತರ ಬರುತ್ತಿತ್ತು. ಗುತ್ತಿಗೆ ವಹಿಸಿಕೊಂಡಿರುವ ಆರ್‌ಬಿಟೆಕ್ ಕಂಪನಿ ವಿರುದ್ಧ ಕೆಲವು ಅಧಿಕಾರಿಗಳು ಬೊಟ್ಟು ಮಾಡಿದರು. ಜೂನ್ ತಿಂಗಳಲ್ಲೇ ಕಾರ್ಖಾನೆ ಪ್ರಾರಂಭಿಸುವುದಾಗಿ ಹೇಳಿ ಜುಲೈ ಕೊನೆಯವಾರ ಬಂದರೂ ಕಬ್ಬು ಅರೆಯುವುದಕ್ಕೆ ಕಾರ್ಖಾನೆಯನ್ನು ಸಜ್ಜುಗೊಳಿಸದಿರುವ ಬಗ್ಗೆ ದೂರವಾಣಿ ಮೂಲಕ ಅಧ್ಯಕ್ಷರನ್ನು ರೈತ ನಾಯಕಿ ಸುನಂದಾ ಜಯರಾಂ ಕೇಳಿದಾಗ ಆರಂಭದಲ್ಲಿ ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತವೆ. ಹುಟ್ಟಿದ ಮಗು ಎದ್ದು ನಡೆದುಬಿಡುವುದೇ ಎಂಬ ಉತ್ತರ ಬಂದಿತು.

ಅಧ್ಯಕ್ಷರಿಂದ ಆರ್.ಬಿ.ಟೆಕ್ ಕಂಪನಿಗೆ ಪತ್ರ?

ಈ ಸಾಲಿನಲ್ಲಿ ಕಾರ್ಖಾನೆ ಸಿದ್ಧತೆಗೆ ನೀವೇನೂ ಮಾಡಬಾರದು ಎಂದು ಹೇಳಿ ಅಧ್ಯಕ್ಷ ಸಿ.ಡಿ.ಗಂಗಾಧರ್ ಆರ್.ಬಿ.ಟೆಕ್ ಕಂಪನಿಯವರಿಗೆ ಪತ್ರ ಬರೆದಿರುವರೆಂಬ ವಿಚಾರವನ್ನು ಸುನಂದಾ ಜಯರಾಂ ಬಹಿರಂಗಪಡಿಸಿದರು. ಇದನ್ನು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್ ಮತ್ತು ಜನರಲ್ ಮ್ಯಾನೇಜರ್ ಅಪ್ಪಾ ಸಾಹೇಬ ಪಾಟೀಲ್‌ ಅವರು ಒಪ್ಪಿಕೊಂಡಿದ್ದಾರೆಂಬ ವಿಷಯವನ್ನೂ ಹೊರಹಾಕಿದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧ್ಯಕ್ಷರು ಯಾವ ಉದ್ದೇಶವನ್ನಿಟ್ಟುಕೊಂಡು ಕಂಪನಿಯವರಿಗೆ ಪತ್ರ ಬರೆದಿದ್ದಾರೆ. ಕಾರ್ಖಾನೆ ಸುಗಮವಾಗಿ ನಡೆಯುವುದು ಇವರಿಗೆ ಬೇಕಿಲ್ಲವೇ ಎಂದು ಪ್ರಶ್ನಿಸಿದರು.

ಸಚಿವರು, ಶಾಸಕರು ಮೌನ:

ಮೈಷುಗರ್ ಕಾರ್ಖಾನೆ ವ್ಯಾಪ್ತಿಗೆ ಮಂಡ್ಯ, ಮೇಲುಕೋಟೆ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಗಳೂ ಬರುತ್ತವೆ. ಮೈಷುಗರ್ ಕಬ್ಬು ಅರೆಯುವಿಕೆ ಅಸ್ತವ್ಯಸ್ತಗೊಂಡಿದ್ದರೂ ಒಬ್ಬ ಶಾಸಕರೂ ಕಾರ್ಖಾನೆ ಕಡೆ ತಿರುಗಿ ನೋಡುತ್ತಿಲ್ಲ. ಕಾರ್ಖಾನೆಯ ಇಂದಿನ ಪರಿಸ್ಥಿತಿಗೆ ಕಾರಣವೇನು. ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಗುತ್ತಿಗೆ ನೀಡಿದ್ದರೂ ಸಕಾಲದಲ್ಲಿ ಕಬ್ಬು ಅರೆಯುವುದಕ್ಕೆ ಸಜ್ಜುಗೊಳಿಸಲಿಲಲ್ಲವೇಕೆ. ರಾಜ್ಯ ಸರ್ಕಾರ ಎರಡು ವರ್ಷದ ಹಿಂದೆ ಸಾಲದ ರೂಪದಲ್ಲಿ 50 ಕೋಟಿ ರು. ನೀಡಿದೆ. ವಿದ್ಯುತ್ ಬಿಲ್ ಮನ್ನಾ, ತೆರಿಗೆ ಮನ್ನಾ ಮಾಡಿದೆ. ಇದಕ್ಕಿಂತಲೂ ಇನ್ನೇನು ಮಾಡಲು ಸಾಧ್ಯ. ಸಚಿವರೂ ಕಾರ್ಖಾನೆಯ ಸಹವಾಸವೇ ಬೇಡ ಎಂದು ದೂರವೇ ಉಳಿದಿದೇಕೆ ಎಂಬ ರೈತ ಮುಖಂಡರ ಪ್ರಶ್ನೆಗಳಿಗೆ ಉತ್ತರವೇ ಇಲ್ಲ.

ಆರ್.ಬಿ.ಟೆಕ್ ಕಂಪನಿಗೆ 14 ಕೋಟಿ ರು. ಪಾವತಿ:

ಪ್ರಸಕ್ತ ಸಾಲಿನಲ್ಲಿ ಆರ್.ಬಿ.ಟೆಕ್ ಕಂಪನಿ ಇನ್ನೂ ಸಮರ್ಪಕವಾಗಿ ಕಬ್ಬು ಅರೆಯುವಿಕೆಯನ್ನೇ ಪ್ರಾರಂಭಿಸಿಲ್ಲ. ಆಗಲೇ ಗುತ್ತಿಗೆ ಪಡೆದಿರುವ ಕಂಪನಿ ಖಾತೆಗೆ ಈ ಸಾಲಿನ 14 ಕೋಟಿ ರು. ಹಣ ಜಮೆ ಆಗಿದೆ ಎಂದು ತಿಳಿದುಬಂದಿದೆ. ಒಂದು ವರ್ಷ ಟನ್ ಕಬ್ಬಿಗೆ 700 ರು.ನಂತೆ ನೀಡಿದರೆ, ಕಳೆದ ಮತ್ತು ಈ ಸಾಲಿನಿಂದ ಪ್ರತಿ ಟನ್‌ಗೆ 900 ರು.ಗಳಂತೆ ಗುತ್ತಿಗೆ ಕಂಪನಿಗೆ ಹಣ ನೀಡಲಾಗಿದೆ. ಕಳೆದ ಸಾಲಿನಲ್ಲಿ ಕಬ್ಬು ಅರೆದ ಬಳಿಕ ವಾಟರ್ ವಾಶ್ ಮಾಡಿ ನಿಲ್ಲಿಸಿದ್ದ ಆರ್.ಬಿ.ಟೆಕ್ ಕಂಪನಿ ಮೇ ತಿಂಗಳಿನಿಂದ ಯಂತ್ರೋಪಕರಣಗಳ ಓವರ್ ಆಯಿಲ್ ಕೆಲಸ ಕೈಗೆತ್ತಿಕೊಂಡ ಕಾರಣ ಹಣಕಾಸಿನ ಕೊರತೆಯನ್ನು ಮುಂದಿಟ್ಟು 14 ಕೋಟಿ ರು.ಗಳನ್ನು ಪಡೆದುಕೊಂಡಿರುವುದಾಗಿ ಗೊತ್ತಾಗಿದೆ. ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿರುವ ಕೆಲವೊಂದು ಷರತ್ತುಗಳನ್ನು ಉಲ್ಲಂಸಲಾಗಿದೆ ಮತ್ತು ಕೆಲವೊಂದನ್ನು ಬದಲಾವಣೆ ಮಾಡಿಕೊಂಡಿರುವುದಾಗಿ ರೈತ ಮುಖಂಡರು ಆರೋಪಿಸಿದರು.

ಕಾರ್ಖಾನೆ ಯಂತ್ರೋಪಕರಣಗಳನ್ನು ದುರಸ್ತಿಗೊಳಿಸಿ ಕಬ್ಬು ಅರೆಯುವಿಕೆಗೆ ಸಜ್ಜುಗೊಳಿಸಲು ಕನಿಷ್ಠ ೨೪ ವಾರಗಳ ಕಾಲಾವಕಾಶ ಬೇಕು. ಒಂದೊಂದು ವಿಭಾಗವನ್ನು ಸರಣಿಯಾಗಿ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಬಾರಿ ಯಂತ್ರೋಪಕರಣಗಳ ದುರಸ್ತಿ ಕಾರ್ಯ ವಿಳಂಬವಾಗಿದೆ. ಏಕಾಏಕಿ ಕಾರ್ಖಾನೆ ಆರಂಭ ಮಾಡಲಾಗಿದೆ. ಯಾವುದೇ ದುರಸ್ತಿ ಕಾರ್ಯಕ್ಕೆ ನಿರ್ದಿಷ್ಟ ಕಾಲಾವಧಿ ಬೇಕು. ಪೂರ್ವ ಸಿದ್ಧತೆಯಿಲ್ಲದೆ ಅರಂಭವಾಗಿರುವುದರಿಂದ ಕಬ್ಬು ಅರೆಯುವಿಕೆಗೆ ತೊಂದರೆಯಾಗಿದೆ ಎಂದು ರೈತರ ಪ್ರಶ್ನೆಗೆ ಪ್ರಧಾನ ವ್ಯವಸ್ಥಾಪಕ ಅಪ್ಪಾಸಾಹೇಬ ಪಾಟೀಲ್‌ ತಿಳಿಸಿದರು.

ಕಬ್ಬು ಕಟಾವು ವಿಳಂಬ:

ಕಾರ್ಖಾನೆ ಇನ್ನೂ ಕಬ್ಬು ಅರೆಯುವುದಕ್ಕೆ ಸಂಪೂರ್ಣವಾಗಿ ಸಜ್ಜಾಗದಿರುವ ಹಿನ್ನೆಲೆಯಲ್ಲಿ ಕಾರ್ಖಾನೆ ವ್ಯಾಪ್ತಿಯ ಕಬ್ಬು ಕಟಾವನ್ನು ಅಧಿಕಾರಿಗಳೇ ವಿಳಂಬ ಮಾಡುತ್ತಿದ್ದಾರೆ ಎನ್ನಲಾಗಿದೆ. ಚೈನ್ ಕ್ಯಾರಿಯರ್, ಬಾಯ್ಲಿಂಗ್ ಹೌಸ್ ಸೇರಿದಂತೆ ಇನ್ನೂ ಹಲವು ಕೆಲಸಗಳು ಬಾಕಿ ಇರುವುದರಿಂದ ಕಬ್ಬು ಕಟಾವನ್ನು ಮುಂದಕ್ಕೆ ಹಾಕಲಾಗುತ್ತಿದೆ. ಕಾರ್ಖಾನೆ ಸ್ವಲ್ಪ ಪ್ರಮಾಣದಲ್ಲಿ ಅರೆದಿರುವ ಕಬ್ಬಿನ ಸ್ಥಿತಿ ಏನಾಗಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಮೈಷುಗರ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿರುವುದು ದುರಂತದ ಸಂಗತಿಯಾಗಿದೆ.

ರೈತ ಮುಖಂಡರಾದ ಕೆ.ಬೊರಯ್ಯ, ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್. ಮುದ್ದೇಗೌಡ, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ, ಮೈಷುಗರ್ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಾತನೂರು ವೇಣುಗೋಪಾಲ್‌ ಸೇರಿದಂತೆ ಇತರರು ಹಾಜರಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ