ಕನ್ನಡಪ್ರಭ ವಾರ್ತೆ ಮಂಡ್ಯ
ಬಿಜೆಪಿ-ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಗೆ ಮಂಗಳವಾರ ಸಕ್ಕರೆ ನಾಡಿನಲ್ಲಿ ಚಾಲನೆ ನೀಡಲಾಯಿತು.ರಾಮನಗರ ಜಿಲ್ಲೆಯಿಂದ ಆಗಮಿಸಿದ ಮಿತ್ರಪಕ್ಷಗಳ ಪಾದಯಾತ್ರೆ ಸೋಮವಾರ ರಾತ್ರಿ ಮದ್ದೂರು ತಾಲೂಕು ನಿಡಘಟ್ಟದ ಸುಮಿತ್ರಾದೇವಿ ಕಲ್ಯಾಣ ಮಂಟಪದಲ್ಲಿ ಬೀಡುಬಿಟ್ಟಿತ್ತು.
ಮಂಗಳವಾರ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಅಶ್ವಥ್ ನಾರಾಯಣ, ಡಿ.ಸಿ.ತಮಣ್ಣ ಸೇರಿದಂತೆ ಮೈತ್ರಿ ಪಕ್ಷದ ನಾಯಕರು ಪಾದಯಾತ್ರೆಗೆ ಜಂಟಿ ಚಾಲನೆ ನೀಡಿದರು.ಪಾದಯಾತ್ರೆಯಲ್ಲಿ ಗಮನಸೆಳೆದ ನಿಖಿಲ್
ಪಾದಯಾತ್ರೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಲ್ಲರ ಗಮನಸೆಳೆದರು. ಮಹಿಳೆಯರು ನಿಖಿಲ್‌ಗೆ ಬೆಲ್ಲದ ಆರತಿ ಬೆಳಗಿ ಸ್ವಾಗತಿಸಿದರು. ಬಸ್‌ನಲ್ಲಿ ತೆರಳುತ್ತಿದ್ದ ಮಹಿಳೆಯರು, ವೃದ್ಧರು ನಿಖಿಲ್ ಕೈಹಿಡಿದು ಮಾತನಾಡಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಹಲವರು ನಿಖಿಲ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ವೃದ್ಧರೊಬ್ಬರ ಜೊತೆ ನಿಖಿಲ್ ಹೆಜ್ಜೆ ಹಾಕುತ್ತಲೇ ಅವರ ಅಹವಾಲನ್ನು ಆಲಿಸಿದರು. ಅಭಿಮಾನಿಗಳು, ಕಾರ್ಯಕರ್ತರು ಪಾದಯಾತ್ರೆ ಸಮಯದಲ್ಲಿ ನಿಖಿಲ್ ಅವರನ್ನು ಎತ್ತಿಕೊಂಡು ಸಂಭ್ರಮಿಸಿದರು.ಮಾಜಿ ಸಂಸದೆ ಸುಮಲತಾ ಗೈರು
ಮೈಸೂರು ಚಲೋ ಪಾದಯಾತ್ರೆಯಲ್ಲಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಗೈರು ಎದ್ದು ಕಾಣುತ್ತಿತ್ತು. ಬಿಜೆಪಿ-ಜೆಡಿಎಸ್ ಜಂಟಿಯಾಗಿ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಎಲ್ಲಿಯೂ ಸುಮಲತಾ ಕಾಣಿಸಿಕೊಳ್ಳದಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಪಾದಯಾತ್ರೆಗೆ ಸುಮಲತಾ ಅವರಿಗೆ ಆಹ್ವಾನವಿತ್ತೋ, ಇರಲಿಲ್ಲವೋ ಗೊತ್ತಾಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಬಿಟ್ಟುಕೊಟ್ಟ ನಂತರ ಬಿಜೆಪಿ ವರಿಷ್ಠರು ಯಾವುದೇ ಸ್ಥಾನ-ಮಾನ ನೀಡಿಲ್ಲವೆಂಬ ಕಾರಣಕ್ಕೆ ಪಾದಯಾತ್ರೆಯಿಂದ ದೂರ ಉಳಿದು ಮುನಿಸು ಪ್ರದರ್ಶಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.2018ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ವಾಭಿಮಾನದ ಕಿಚ್ಚನ್ನು ಎಬ್ಬಿಸಿದ್ದ ಸುಮಲತಾ ಅಂಬರೀಶ್ ಮಂಡ್ಯ ಜಿಲ್ಲೆಯಿಂದ ಆರಂಭಗೊಳ್ಳುವ ಪಾದಯಾತ್ರೆಯಲ್ಲಿ ಭಾಗವಹಿಸುವರೆಂಬ ನಿರೀಕ್ಷೆ ಇತ್ತು. ಅವರ ಗೈರು ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ.ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಸುರೇಶ್ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಮಾಜಿ ಅಧ್ಯಕ್ಷ ಉಮೇಶ್, ತಾಲೂಕ ಅಧ್ಯಕ್ಷ ಸಿ.ಕೆ. ಸತೀಶ್, ಮಹಿಳಾ ಘಟಕದ ಅಧ್ಯಕ್ಷ ಶ್ವೇತಾ. ಸೌಮ್ಯ, ಜಿ.ಎಸ್. ಮಹೇಂದ್ರ, ಎಂ.ಸಿ.ಸಿದ್ದು. ಮನು ಕುಮಾರ್ , ಮಾದನಾಯಕನಹಳ್ಳಿ ರಾಜಣ್ಣ, ಕೆ .ಟಿ. ಶೇಖರ್, ಎನ್ .ಆರ್ .ಪ್ರಕಾಶ್. ಪುರಸಭಾ ಸದಸ್ಯರಾದ ಪ್ರಸನ್ನ, ಮಹೇಶ, ಸುಮಿತ್ರ ರಮೇಶ್, ಸೇರಿದಂತೆ ಮೈತ್ರಿ ಪಕ್ಷದ ಮುಖಂಡರು ಹಾಗೂ ವಿವಿಧ ಘಟಕ ಗಳು ಪದಾಧಿಕಾರಿಗಳು ಪಾಲ್ಗೊಂಡಿದ್ದರು.