- ಮೈಸೂರಿನ ಜಿಲ್ಲಾ ಗ್ರಾಹಕರ ಆಯೋಗ ಆದೇಶ
ಸಾಲ ತೀರಿಸಿದ ನಂತರವೂ ಸ್ವತ್ತಿನ ದಾಖಲೆಗಳನ್ನು ಹಿಂದಿರುಗಿಸದೇ ಸೇವಾ ನ್ಯೂನತೆ ಎಸಗಿದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಮೈಸೂರಿನ ಜಿಲ್ಲಾ ಗ್ರಾಹಕರ ಆಯೋಗವು 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಮೈಸೂರಿನ ರಾಮಕೃಷ್ಣನಗರದ ನಿವಾಸಿ ಎಸ್. ರಾಜೇಶ್ವರಿ ತಮ್ಮ ಮನೆಯ ದಾಖಲೆಗಳನ್ನು ಆಧಾರವಾಗಿ ನೀಡಿ ರಮಾ ವಿಲಾಸ ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲವನ್ನು ಪಡೆದಿದ್ದರು. ರಾಜೇಶ್ವರಿ ಅವರು 09.09.2020 ರಂದು ಮೈಸೂರಿನಲ್ಲಿ ಮೃತಪಟ್ಟರು. ರಾಜೇಶ್ವರಿಯವರಿಂದ ಮೊದಲೇ ಅವರ ಪತಿ ಮೃತಪಟ್ಡಿದ್ದು, ದಂಪತಿಗೆ ಮಕ್ಕಳಿರಲಿಲ್ಲ.ರಾಜೇಶ್ವರಿ ಅವರು ದಟ್ಟಗಳ್ಳಿಯಲ್ಲಿರುವ ತಮ್ಮ ಮನೆಯು ತಮ್ಮ ಕಾಲಾ ನಂತರ ತಮ್ಮ ಸಂಬಂಧಿಕರಾದ ಬಿ.ಆರ್. ವೆಂಕಟೇಶ್ ಪ್ರಸಾದ್ ಹಾಗೂ ಆರ್. ಅಶ್ವಿನಿ ಅವರಿಗೆ ಸೇರತಕ್ಕದ್ದೆಂದು ಮರಣ ಶಾಸನ ರಚಿಸಿ ನೋಂದಾಯಿಸಿದ್ದರು. ರಾಜೇಶ್ವರಿ ಅವರ ಕಾಲಾನಂತರ ಈ ಸ್ವತ್ತಿನ ಖಾತೆಯು ವೆಂಕಟೇಶ್ ಪ್ರಸಾದ್ ಹಾಗೂ ಅಶ್ವಿನಿ ಅವರ ಹೆಸರಿಗೆ ಬದಲಾಗಿ ಇವರಿಬ್ಬರೂ ಸ್ವತ್ತಿನ ಬಾಬ್ತು ತೆರಿಗೆಯನ್ನೂ ಪಾವತಿಸುತ್ತಿದ್ದರು.
ರಾಜೇಶ್ವರಿ ಅವರು ಮಾಡಿದ್ದ ಸಾಲದ ಮೊತ್ತವನ್ನು ಪೂರ್ತಿ ಮರುಪಾವತಿ ಮಾಡಿದರೆ ಸ್ವತ್ತಿಗೆ ಸಂಬಂಧಿಸಿದಂತೆ ರಾಜೇಶ್ವರಿ ಅವರು ಆಧಾರವಾಗಿ ನೀಡಿದ್ದ ಎಲ್ಲಾ ದಾಖಲೆಗಳನ್ನು ಹಿಂದಿರುಗಿಸುವುದಾಗಿ ಬ್ಯಾಂಕಿನ ಅಧಿಕಾರಿಗಳು ಒಪ್ಪಿಕೊಂಡ ಮೇರೆಗೆ ವೆಂಕಟೇಶ್ ಪ್ರಸಾದ್ ಹಾಗೂ ಅಶ್ವಿನಿ ಅವರು ಸಾಲದ ಪೂರ್ತಿ ಮೊತ್ತವನ್ನು ಮರುಪಾವತಿ ಮಾಡಿದ ಮೇರೆಗೆ ಬ್ಯಾಂಕಿನವರು ಸಾಲ ಚುಕ್ತಾ ಆಗಿದೆಯೆಂದು 29.10.2020 ರಂದು ಪತ್ರ ನೀಡಿದ್ದರು.
ಮೃತ ರಾಜೇಶ್ವರಿಯ ಪತಿ ನಾರಾಯಣಸ್ವಾಮಿಯ ತಾಯಿ ಹಾಗೂ ಅವರ ವಾರಸುದಾರರೆಲ್ಲರೂ ಬ್ಯಾಂಕಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟರೆ ಮನೆಯ ದಾಖಲೆಗಳನ್ನು ಹಿಂದಿರುಗಿಸುತ್ತೇವೆಂದು ಬ್ಯಾಂಕಿನ ಅಧಿಕಾರಿಗಳು ಸತಾಯಿಸ ತೊಡಗಿದರು.
ಇದರಿಂದ ಬೇಸತ್ತ ವೆಂಕಟೇಶ್ ಪ್ರಸಾದ್ ಹಾಗೂ ಅಶ್ವಿನಿಯವರು ಮೈಸೂರಿನ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿ ತಮ್ಮ ಸ್ವತ್ತಿನ ದಾಖಲೆ ಪತ್ರಗಳನ್ನು ಹಿಂದಿರುಗಿಸುವಂತೆ ಬ್ಯಾಂಕಿಗೆ ನಿರ್ದೇಶನ ನೀಡುವುದರ ಜೊತೆಗೆ ಸಾಲ ತೀರುವಳಿ ಪತ್ರ ರಚಿಸಿ ಬ್ಯಾಂಕಿನವರು ನೋಂದಾಯಿಸಿ ಕೊಡಬೇಕೆಂದೂ ಅಲ್ಲದೆ 2 ಲಕ್ಷ ರೂ. ಪರಿಹಾರ ದೊರಕಿಸಿಕೊಡಬೇಕೆಂದು ಕೋರಿದ್ದರು.
ಇದರೊಂದಿಗೆ ಸೇವಾ ನ್ಯೂನತೆ ಎಸಗಿ ದೂರುದಾರರಿಗೆ ಮಾನಸಿಕ ಹಿಂಸೆ ನೀಡಿದುದಕ್ಕಾಗಿ 1 ಲಕ್ಷ ರೂ. ಪರಿಹಾರವನ್ನೂ, ಪ್ರಕರಣದ ಖರ್ಚು 5 ಸಾವಿರ ರೂ.ಯನ್ನು ಒಂದು ತಿಂಗಳೊಳಗೆ ನೀಡಬೇಕೆಂದು ಆಯೋಗ ಆದೇಶಿಸಿದೆ. ತಪ್ಪಿದಲ್ಲಿ ಸದರಿ ಮೊತ್ತಕ್ಕೆ ವಾರ್ಷಿಕ ಶೇ.9 ಬಡ್ಡಿಯನ್ನು ಭರಿಸಲು ಆಯೋಗ ಆದೇಶಿಸಿದೆ.