ಮೈಸೂರು ಮುಡಾ, ವಾಲ್ಮೀಕಿ ನಿಗಮದ ಹಗರಣ ಸಿಎಂ ಸಿದ್ದರಾಮಯ್ಯ ಪ್ರಮುಖ ಆರೋಪಿ: ಬಿ.ವೈ.ವಿಜಯೇಂದ್ರ

KannadaprabhaNewsNetwork |  
Published : Aug 07, 2024, 01:01 AM IST
6ಕೆಎಂಎನ್ ಡಿ21 | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿ ಆ ಸಮುದಾಯಕ್ಕೆ ದ್ರೋಹ ಮಾಡಿದೆ. ನಿಗಮದ ಹಗರಣದ ಆರೋಪಿಗಳ ಹೆಸರನ್ನು ಎಸ್ಐಟಿ ತನಿಖೆಯಲ್ಲಿ ಕೈಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗರಣದ ಪ್ರಮುಖ ಆರೋಪಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮೈಸೂರು ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಂಗಳವಾರ ಗಂಭೀರ ಆರೋಪ ಮಾಡಿದರು.ತಾಲೂಕಿನ ಸೋಮನಹಳ್ಳಿ ಮತ್ತು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಮೈಸೂರು ಚಲೋ ಪಾದಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿ, ಕೇವಲ ಮುಡಾ ಅಥವಾ ವಾಲ್ಮೀಕಿ ನಿಗಮ ಮಾತ್ರವಲ್ಲದ ರಾಜ್ಯದ ಎಲ್ಲಾ ಕಡೆ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.

ನಾವು ಯಾವುದೇ ಅಧಿಕಾರ ದಾಹದಿಂದ ಪಾದಯಾತ್ರೆ ಹಮ್ಮಿಕೊಂಡಿಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕಿತ್ತೆಸೆಯಬೇಕು ಎಂಬ ಸಂಕಲ್ಪದೊಂದಿಗೆ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿ ಆ ಸಮುದಾಯಕ್ಕೆ ದ್ರೋಹ ಮಾಡಿದೆ. ನಿಗಮದ ಹಗರಣದ ಆರೋಪಿಗಳ ಹೆಸರನ್ನು ಎಸ್ಐಟಿ ತನಿಖೆಯಲ್ಲಿ ಕೈಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗರಣದ ಪ್ರಮುಖ ಆರೋಪಿಯಾಗಿದ್ದಾರೆ ಎಂದು ದೂರಿದರು.

ರಾಜ್ಯದ ಇತಿಹಾಸದಲ್ಲಿ ಇಂತಹ ಬೃಹತ್ ಪಾದಯಾತ್ರೆಯನ್ನು ಯಾರೂ ಹಮ್ಮಿಕೊಂಡಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ರಾಜ್ಯದ ಆರೂವರೆ ಕೋಟಿ ಜನರಿಗೆ ಚುನಾಯಿತ ಸರ್ಕಾರ ಇದೆ ಎಂದು ಅನಿಸುತ್ತಿಲ್ಲ. ಕಾಂಗ್ರೆಸ್‌ನವರು ಅನೇಕ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದ್ದಾರೆ. ಆದರೆ, ಕಳೆದ 14 ತಿಂಗಳಿನಲ್ಲಿ ವಿದ್ಯುತ್ ದರ, ಹಾಲಿನ ದರ ಹೆಚ್ಚಿಸಿದರೂ ಅದರ ಪ್ರಯೋಜನ ರೈತರು, ಹೈನುಗಾರರಿಗೆ ಲಭಿಸಿಲ್ಲ ಎಂದರು.

ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಸರ್ಕಾರವು ಹಾಲು ಉತ್ಪಾದಕರಿಗೆ 5 ರು. ಪ್ರೋತ್ಸಾಹಧನ ಕೊಡುತ್ತಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ರೈತರ ಬಗ್ಗೆ ಮೊಸಳೆಕಣ್ಣೀರು ಹಾಕುತ್ತಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ 1200 ಕೋಟಿ ರು. ಹಾಗೇ ಉಳಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಎಲ್ಲಾ ನೋಂದಣಿ ಶುಲ್ಕಗಳನ್ನು ಹೆಚ್ಚಳ ಮಾಡಿದೆ. ಜನರಿಗೆ ಅಕ್ಕಿ, ದವಸ ಧಾನ್ಯವೂ ದುಬಾರಿಯಾಗಿದೆ. ಅಧಿಕಾರಕ್ಕೆ ಬಂದ 14 ತಿಂಗಳಲ್ಲೇ 1 ಲಕ್ಷ 95 ಸಾವಿರ ಕೋಟಿ ಸಾಲವನ್ನು ಸಿದ್ದರಾಮಯ್ಯನವರ ಸರ್ಕಾರ ಮಾಡಿದೆ ಎಂದು ಟೀಕಿಸಿದರು.

ಈ ವೇಳೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಇಂದ್ರೇಶ್ ಕುಮಾರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಎಸ್.ಪಿ.ಸ್ವಾಮಿ, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು, ಮಾಜಿ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು