ಕತೆ ಬರೆವಾಗ ಸಾಮಾಜಿಕ ಜವಾಬ್ದಾರಿ, ಇತಿಮಿತಿ ನೋಡಿ

KannadaprabhaNewsNetwork |  
Published : Jul 06, 2025, 11:48 PM IST
10 | Kannada Prabha

ಸಾರಾಂಶ

ಮಹಾಭಾರತವನ್ನು ಬರೆದ ವ್ಯಾಸರೂ ಅದಕ್ಕೆ ಸಂಬಂಧಿಸಿದ್ದರೂ, ತಪ್ಪು, ಒಪ್ಪುಗಳನ್ನು ಹೇಳಲಿಲ್ಲ ಯಾಕೆ ಎಂದು ಯೋಚಿಸುವಾಗ, ಲೇಖಕನಿಗೆ ತನ್ನದೇ ಆದ ಇತಿಮಿತಿ ಇರುತ್ತದೆ. ಆ

ಕನ್ನಡಪ್ರಭ ವಾರ್ತೆ ಮೈಸೂರು

ಕತೆ ಬರೆಯುವ ಸಂದರ್ಭದಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಲೇಖಕನ ಮಿತಿಯನ್ನು ನೋಡಬೇಕು ಎಂದು ಖ್ಯಾತ ಲೇಖಕರೂ ಆದ ಕನ್ನಡಪ್ರಭ ಪತ್ರಿಕೆಯ ಪ್ರದಾನ ಪುರವಣಿ ಸಂಪಾದಕರಾದ ಜೋಗಿ ಅಭಿಪ್ರಾಯಪಟ್ಟರು.

ಮೈಸೂರು ಸಾಹಿತ್ಯ ಸಂಭ್ರಮ 9ನೇ ಆವೃತ್ತಿ - 2025 ಕಾರ್ಯಕ್ರಮದಲ್ಲಿ ಭಾನುವಾರ ''''ಕಥೆ ಹುಟ್ಟುವ ಹೊತ್ತು'''' ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಸ್ತಿನಾವತಿ ಕಾದಂಬರಿಯಲ್ಲಿ ವ್ಯಾಸರು ಕಡೆಗೆ ಬರುತ್ತಾರೆ. ನಾನು ಒಂದು ನೂರು ಪುಟದಲ್ಲಿ ಮುಗಿಸಬೇಕು ಎಂದುಕೊಂಡಿದ್ದೆ. ಆದರೆ ಅದು ಬರೆಯುತ್ತಾ ಬರೆಯುತ್ತಾ ಕೈ ಮೀರಿತು. ಜೀವನದಲ್ಲಿಯೂ ಹಾಗೆಯೇ ನಾವು ಹೀಗೆ ಬದುಕಬೇಕು ಎಂದು ಕೊಳ್ಳುತ್ತೇವೆ, ಆದರೆ ಬೇರೆಯದ್ದೇ ರೀತಿಯಲ್ಲಿ ಬದುಕುತ್ತೇವೆ. ದಾರಿ ತಪ್ಪಿದ ಮಗ ಆದಾಗಲೇ ಉದ್ಧಾರ ಆಗೋಕೆ ಸಾಧ್ಯ ಎಂದು ಅವರು ಹೇಳಿದರು.

ಮಹಾಭಾರತವನ್ನು ಬರೆದ ವ್ಯಾಸರೂ ಅದಕ್ಕೆ ಸಂಬಂಧಿಸಿದ್ದರೂ, ತಪ್ಪು, ಒಪ್ಪುಗಳನ್ನು ಹೇಳಲಿಲ್ಲ ಯಾಕೆ ಎಂದು ಯೋಚಿಸುವಾಗ, ಲೇಖಕನಿಗೆ ತನ್ನದೇ ಆದ ಇತಿಮಿತಿ ಇರುತ್ತದೆ. ಆತ ಪಾತ್ರಗಳ ಮನೋಧರ್ಮದ‌ ಒಳಗೆ ಪ್ರವೇಶಿಸುವಂತಿಲ್ಲ. ಆತನಿಗೆ ಸಾಮಾಜಿಕ ಜವಾಬ್ದಾರಿ ಮತ್ತು ಲೇಖಕನ ಮಿತಿ ನೋಡಬೇಕು ಎಂದರು.

ನಿರಂತರತೆ ನಡುವೆ ಕತೆ, ಕಾದಂಬರಿ ಹೇಗೆ ಬರೆಯುತ್ತೀರಿ ಎಂಬ ಎಚ್‌.ಬಿ. ಇಂದ್ರಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಜೋಗಿ ಅವರು, ನನಗೆ ಬರೆಯುವುದು ಒಂದು ಚಟ. ಬಹಳ ವೇಗವಾಗಿ ಬರೆಯುತ್ತೇನೆ. ದಿನಕ್ಕೆ ಸುಮಾರು 30 ಪುಟಗಳಷ್ಟು ಬರೆಯುತ್ತೇನೆ. ಧಾರಾವಾಹಿ ಆದರೆ ದಿನಕ್ಕೆ ಮೂರು ಧಾರಾವಾಹಿ ಬರೆಯುತ್ತೇನೆ. ಯಾರ್ಯಾರನ್ನೋ ನೋಡಿದಾಗ ಕತೆ ಹುಟ್ಟಿಕೊಳ್ಳುತ್ತದೆ. ನಮ್ಮ ಊರು ಒಂದೊಂದು ಬಾರಿ ಹೋದಾಗಲು ಒಂದೊಂದು ರೀತಿ ಕಾಣುತ್ತದೆ. ಕೋವಿಡ್‌ಗೆ ಮುನ್ನ ಹೋಗಿದ್ದಾಗ ವೃದ್ಧಾಶ್ರಮದಂತೆ ಇತ್ತು. ಕೋವಿಡ್‌ಬಳಿಕ ಹೋದಾಗ ಎಲ್ಲರೂ ಹಳ್ಳಿಗೆ ಬಂದಿದ್ದರು. ಹೀಗೆ ಒಂದೊಂದು ರೀತಿ ಕಂಡಾಗಲೂ ಒಂದೊಂದು ಕತೆ ಹುಟ್ಟಿಕೊಳ್ಳುತ್ತದೆ ಎಂದರು.

ಕತೆಯನ್ನು ಹೇಗೆ ಬರೆಯುತ್ತೀರಿ? ಕತೆಯ ವಸ್ತು, ಸನ್ನಿವೇಶ ಅಥವಾ ಪಾತ್ರದ ಮೂಲಕ ಬರೆಯುತ್ತೀರೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಪಾತ್ರದ ಸುತ್ತ ಕತೆ ಹೆಣೆದುಕೊಂಡು ಹೋಗುತ್ತೇನೆ. ಕಟ್ಟಿನ ಕತೆ ಇರಬಹುದು. ಜೀವನದಲ್ಲಿ ಕುಂದಿಸಿದ ಸಂಗತಿಗಳೂ ಇರುತ್ತವೆ. ಕತೆಗಾರ ಒಂದಲ್ಲ ಒಂದು ವಿಷಯವನ್ನು ಹೊಸದಾಗಿ ಹೇಳಿಕೊಳ್ಳಬೇಕು ಎಂಬ ಗುಂಗಿನಲ್ಲಿ ಇರುತ್ತಾನೆ ಎಂದರು.

ನಗರ ಸಂವೇದನೆ ಕುರಿತಾದ ಪ್ರಶ್ನೆ ಕುರಿತು ಪ್ರತಿಕ್ರಿಯಿಸಿದ ಲೇಖಕ ನಾಗರಾಜ ವಸ್ತಾರೆ, ನಗರ ಸಂವೇದನೆ ಎಂಬುದು ಇದೆಯೇ ಎಂಬುದು ಪ್ರಶ್ನೆ? ಆಕಸ್ಮಿಕವಾಗಿ ಕತೆಗಾರಿಕೆಗೆ ಬಂದವನು ನಾನು. ಹಣದ ಜತೆಗೆ ಚಟವೂ ಹುಟ್ಟಿಕೊಂಡಿತ್ತು. ೧೦ ವರ್ಷ ತರಗೆಲೆಯಂತೆ ತೂರಿ ಹೋದೆ. ಬಳಿಕ ಒಳಗಿನಿಂದ ಟೊಳ್ಳಾಗಿದ್ದೇನೆ ಎನಿಸಿತು. ನಾನು ಬಾಲ್ಯವನ್ನು ಕುರಿತು ಬರೆಯಲಿಲ್ಲ. ವಾಸ್ತವದ ನೆಲೆಗಟ್ಟಿನಲ್ಲಿ ಬರೆಯುತ್ತಿರುವುದರಿಂದ ಮತ್ತು ನಾನು ಬೆಂಗಳೂರಿನಲ್ಲಿ ವಾಸವಿರುವುದರಿಂದ ಕೆಲವರು ನಗರ ಸಂವೇದನೆ ಎಂದು ಕರೆದಿರಬಹುದು. ಅದು ಅವರಿಗೆ ಬಿಟ್ಟದ್ದು ಎಂದರು.

ನನಗೆ ಕತೆ ಬರೆಯಬೇಕು ಎಂದು ಅನ್ನಿಸಿದ ಕೂಡಲೇ ಬರೆಯುತ್ತೇನೆ. ಆ ಗಳಿಗೆ ಅಥವಾ ಆ ಮುಹೂರ್ತದಲ್ಲಿ ತಾನಾಗಿಯೇ ಇಳಿದು ಬರುತ್ತದೆ. ಕಸುಬುಗಾರಿಕೆಗೆ ಬದ್ಧವಾಗಿದ್ದರೆ ಬರುತ್ತದೆ. ನಾವು ಹಿಂದೆ ಗುಡಿಸಲಿನಲ್ಲಿದ್ದೆವು, ನಂತರ ಹಂಚಿನ ಮನೆಗೆ ಬಂದಾಗ ಎಲ್ಲಾವೂ ಸರಿ ಇಲ್ಲ ಗುಡಿಸಲೇ ಸರಿ ಅಂದೆವು, ಹಂಚಿನ ಮನೆ ಬಿಟ್ಟು ತಾರಿಸಿಗೆ ಬಂದಾಗ ಹಂಚಿನ ಮನೆಯೇ ಸರಿ ಎಂದೆವು. ಈಗ ಪುಸ್ತಕ ಬಿಟ್ಟು ಟ್ಯಾಬ್ ಗೆ ಬಂದಾಗ ಯಾಕೆ ಆತಂಕ ಪಡಬೇಕು. ಹಿಂದಿನದನ್ನು ಹಿಡಿದುಕೊಂಡು ಜಗ್ಗಾಡಬೇಕಿಲ್ಲ ಎಂದರು.

ನನ್ನ ಅನುಭವ ದಾಟಿಸಲು ಕನ್ನಡ ಬಳಸುತ್ತಿದ್ದೇನೆ. ಕನ್ನಡದ ಮೆರವಣಿಗೆ ಆಗಬೇಕು. ಜೂಮಿಂಗ್‌ ಇನ್‌ ಔಟ್‌ ನಂತೆ ಬರವಣಿಗೆಯಲ್ಲಿಯೂ ಜೂಮ್‌ ಇನ್‌ಆದಾಗ ಹೆಚ್ಚು ಹೆಚ್ಚು ವಿಷಯವಿರಬೇಕು ಎಂದು ಅಭಿಪ್ರಾಯಪಟ್ಟರು.

ಕತೆ ಎಂಬುದು ಲೀಲಾ ಜಾಲವಾಗಿ ಬರುತ್ತದೆ. ಮೈಸೂರಿನ ಪುರಾಣ ಹೇಳಬೇಕು ಎಂದರೆ ವಿಜಯನಗರದ ಸಾಮ್ರಾಜ್ಯದ ಕತೆ ತಿಳಿಯಬೇಕು. ಇಲ್ಲವಾದರೆ ಇದು ಅಪೂರ್ಣವಾಗುತ್ತದೆ. ಇತಿಹಾಸ ಹಿನ್ನೆಲೆಯಾದರೆ, ಕತೆ ಮುನ್ನೆಲೆ ಆಗಬೇಕು ಎಂದರು. ಲೇಖಕ ಎಚ್‌.ಬಿ. ಇಂದ್ರಕುಮಾರ್‌ ಗೋಷ್ಠಿಯನ್ನು ನಿರ್ವಹಿಸಿದರು.

PREV