- ಕೆಪಿಆರ್ ಎಸ್‌ನಿಂದ ಪ್ರತಿಭಟನೆ ನಡೆಸಿ ಆಗ್ರಹ----
ಕನ್ನಡಪ್ರಭ ವಾರ್ತೆ ಮೈಸೂರುಗೋಮಾಳ, ಅರಣ್ಯ ಭೂಮಿ, ಸರ್ಕಾರಿ ಜಾಗಗಳಲ್ಲಿ ಕಳೆದ 50- 60 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದವರು (ಕೆಪಿಆರ್ ಎಸ್) ಮೈಸೂರು ತಾಪಂ ಕಚೇರಿ (ಮಿನಿ ವಿಧಾನಸೌಧ) ಮುಂಭಾಗದಲ್ಲಿ ಶನಿವಾರ ಪ್ರತಿಭಟಿಸಿದರು.
ಕಳೆದ 50-60 ವರ್ಷಗಳಿಂದ ಗೋಮಾಳ, ಗುಂಡು ತೋಪು, ಅರಣ್ಯ ಭೂಮಿಗಳಲ್ಲಿ ಬಡ ಬಗರ್ ಹುಕುಂ ಸಾಗುವಳಿದಾರರು ಉಳುಮೆ ಮಾಡುತ್ತಾ ತಮ್ಮ ಜೀವನ ನಡೆಸುತ್ತಿದ್ದಾರೆ. ಈ ಹಿಂದೆ ಫಾರಂ ನಂಬರ್ 50- 57 ರಲ್ಲಿ ಅರ್ಜಿ ಸಲ್ಲಿಸಿದ್ದರೂ ಆ ಅರ್ಜಿಗಳನ್ನು ವಿಲೇವಾರಿ ಮಾಡಿಲ್ಲ. ಅಲ್ಲದೆ ಸಾಗುವಳಿ ಪತ್ರ ಇಲ್ಲದ ಕಾರಣ ಸರ್ಕಾರಿ ಸವಲತ್ತುಗಳು, ಸಾಲ ಸೌಲಭ್ಯ, ಬರ ಪರಿಹಾರ ಇತ್ಯಾದಿ ಸೌಲಭ್ಯಗಳಿಂದ ಈ ಸಾಗುವಳಿ ರೈತರು ವಂಚಿತರಾಗಿದ್ದಾರೆ ಎಂದು ಅವರು ಕಿಡಿಕಾರಿದರು.ಈ ಬಾರಿ ರಾಜ್ಯ ಭೀಕರ ಬರಗಾಲದ ಪರಿಸ್ಥಿತಿಯನ್ನು ಎದುರುಸುತ್ತಿದೆ. ಅದರ ನೇರ ಪರಿಣಾಮವನ್ನು ರೈತರೇ ಅನುಭವಿಸಬೇಕಿದೆ. ಹೀಗಾಗಿ, ಕೂಡಲೆ ರೈತರಿಗೆ ಬರ ಪರಿಹಾರವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.
ತಾಲೂಕಿನ ಎಲ್ಲಾ ಗ್ರಾಮಗಳಲ್ಲಿರುವ ಗೋವುಗಳ ಸಮೀಕ್ಷೆ ಮಾಡಿ, ಆ ಹಸುಗಳಿಗೆ ಬೇಕಾದ ಭೂಮಿಯನ್ನು ಬಿಟ್ಟು ಉಳಿದ ಭೂಮಿಯನ್ನು ಗೋಮಾಳದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಂಚಲು ಕ್ರಮ ವಹಿಸಬೇಕು. ಆದಿವಾಸಿಯೇತರ ಅರಣ್ಯ ಭೂಮಿ ಬಡ ಸಾಗುವಳಿದಾರರಿಗೆ ಹಕ್ಕು ಪತ್ರ ದೊರೆಯುವಂತೆ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಗೆ ತಿದ್ದುಪಡಿ ಮಾಡಿ ಹಕ್ಕು ಪತ್ರ ನೀಡಬೇಕು. ನಗರ ಮಿತಿಯನ್ನು 10 ಕಿ.ಮಿಗಿಂತಲೂ ಕಡಿಮೆ ಮಾಡಬೇಕು ಎಂದು ಅವರು ಆಗ್ರಹಿಸಿದರು.ಅರಣ್ಯದ ಅಂಚಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿರುವುದನ್ನು ಅರಣ್ಯ ಇಲಾಖೆ ನಿಲ್ಲಿಸಬೇಕು. ಕೂಡಲೇ ಅಕ್ರಮ- ಸಕ್ರಮ ಸಮಿತಿಯನ್ನು ರಚಿಸಿ ಸಾಗುವಳಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಕೂಡಲೇ ಬರ ಪರಿಹಾರ ವಿತರಿಸಬೇಕು. ತಾಲೂಕಿನ ಎಲ್ಲಾ ಜಮೀನುಗಳನ್ನು ಹದ್ದುಬಸ್ತು ಮಾಡಿಸಿ ಪಕ್ಕಾಪೋಡು ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಡೀ ರಾಜ್ಯವನ್ನು ಸಂಪೂರ್ಣ ಬರಗಾಲ ಪಿಡೀತ ಪ್ರದೇಶ ಎಂದು ಘೋಷಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರವನ್ನು ಒದಗಿಸಬೇಕು. ಒಂದು ಹೆಕ್ಟರ್ಗೆ ಬೆಳೆ ನಷ್ಟ ಪರಿಹಾರವಾಗಿ 50 ಸಾವಿರ ರೂ. ನೀಡಬೇಕು ಎಂದು ಅವರು ಒತ್ತಾಯಿಸಿದರು.
ತಕ್ಷಣವೇ ಬಿಪಿಎಲ್, ಎಪಿಎಲ್ ತಾರತಮ್ಯ ಇಲ್ಲದೇ ಬರಗಾಲ ಪರಿಹಾರ ರೇಷನ್ ವಿತರಣೆಯಲ್ಲಿ ಹೆಚ್ಚುವರಿ ಆಹಾರ ಧಾನ್ಯ ಒದಗಿಸಬೇಕು. ಆಹಾರ ಧಾನ್ಯಗಳ ಬೆಲೆ ಏರಿಕೆ ಮೇಲೆ ಕಡಿವಾಣ ವಿಧಿಸಬೇಕು. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮ ವಹಿಸಬೇಕು. ಮೇವು ಕುಂದು ಕೊರತೆ ಪರಿಹರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದರು.ಕೂಡಲೇ ಕೇಂದ್ರ ಸರ್ಕಾರವು, ಎಲ್ಲಾ ರೈತರ, ಕೃಷಿ ಕೂಲಿಕಾರರ, ಗ್ರಾಮೀಣ ಮಹಿಳೆಯರ ಸಾಲ ಮನ್ನಾ ಹಾಗೂ ಬಡ್ಡಿ ಮನ್ನಾ ಮಾಡಬೇಕು. ಎಲ್ಲಾ ರೀತಿಯ ಸಾಲ ವಸೂಲಾತಿಯನ್ನು ನಿಷೇಧಿಸಿ ಆದೇಶ ಹೊರಡಿಸಬೇಕು. ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ದಿನಗಳನ್ನು 200 ದಿನಕ್ಕೆ ಹೆಚ್ಚಿಸಬೇಕು. ಬರಗಾಲದ ಕೂಲಿಯಾಗಿ 600 ರೂ. ಪಾವತಿಸಬೇಕು. ಬಯೋಮೆಟ್ರಿಕ್ ಹಾಜರಾತಿ ಹಾಗೂ ಆಧಾರ್ ಆಧಾರಿತ ಕೂಲಿ ಪಾವತಿ ವ್ಯವಸ್ಥೆ ರದ್ದು ಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಸೂರ್ಯ, ತಾಲೂಕು ಅಧ್ಯಕ್ಷ ದೂರ ಲೋಕೇಶ್, ಮುಖಂಡರಾದ ಗುಮಚಳ್ಳಿ ಸೋಮಶೇಖರ್, ಕೆಂಪಯ್ಯ, ಹರೀಶ್, ಕೆಂಪಮ್ಮ, ಚೌಡಮ್ಮ, ಕನಕ ನಾಯಕ, ಮರಿಚೌಡನಾಯಕ, ಪಾಪ ನಾಯಕ, ಆಯರಳ್ಳಿ ಸಣ್ಣನಾಯಕ, ಮಹದೇವಸ್ವಾಮಿ, ತೋಟಪ್ಪ, ರವಿಕುಮಾರ್, ಕರಿರಾಮಯ್ಯ, ರಾಜೇಂದ್ರ, ಚಿಕ್ಕಣ್ಣ ಶಂಭುಲಿಂಗಪ್ಪ, ರಾಜೇಂದ್ರಪ್ರಸಾದ್, ಸುರೇಶ್ ಮೊದಲಾದವರು ಇದ್ದರು.