ಮನೋವಿಜ್ಞಾನದ ವೈಶಿಷ್ಟ್ಯ ತಿಳಿಸುವ ಕುವೆಂಪು ಕೃತಿಗಳು ಇಂದಿಗೂ ಪ್ರಸ್ತುತ

KannadaprabhaNewsNetwork | Published : Dec 18, 2024 12:45 AM

ಸಾರಾಂಶ

ಕುವೆಂಪು ತಮ್ಮ ಸಾಹಿತ್ಯದಲ್ಲಿ ಪರಿಸರ ಹಾಗೂ ಮಾನವನ ಮನಸ್ಸು ಒಂದಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ಅದು ಸತ್ಯವಾದ ವಿಚಾರ, ಹಾಗಾದಾಗ ಜೀವನ ಸಂಘರ್ಷ ಕಡಿಮೆಯಾಗಲು ಸಾಧ್ಯ

ಕನ್ನಡಪ್ರಭ ವಾರ್ತೆ ಮೈಸೂರು

ಮನೋವಿಜ್ಞಾನದ ವೈಶಿಷ್ಟ್ಯ ಹಾಗೂ ಅಗತ್ಯತೆಗಳ ಬಗ್ಗೆ ತಿಳಿಸುವ ಕುವೆಂಪು ಅವರ ಕೃತಿಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.ಮಾನಸಗಂಗೋತ್ರಿಯ ಮೈಸೂರು ವಿವಿ ಮನೋವಿಜ್ಞಾನ ಅಧ್ಯಯನ ವಿಭಾಗವು ಕುವೆಂಪು ಜನ್ಮ ದಿನಾಚರಣೆ, ವಿಭಾಗದ ಶತಮಾನೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಕುವೆಂಪು ತತ್ವಶಾಸ್ತ್ರ ಹಾಗೂ ಮನೋವಿಜ್ಞಾನದ ಕುರಿತು ವಿಶೇಷ ಆಸಕ್ತಿ ಹೊಂದಿದ್ದರು. ಹೀಗಾಗಿ, ಅವರ ಕೃತಿಗಳಲ್ಲಿ ಬರುವ ಘಟನೆಗಳಲ್ಲಿ ಆತ್ಮಸಾಕ್ಷಾತ್ಕಾರ, ಮನೋವಿಜ್ಞಾನಕ್ಕೆ ಸಂಬಂಧಿಸಿದ ವಿಚಾರ ಕಾಣಲು ಸಾಧ್ಯ. ಪ್ರಸ್ತುತ ಒತ್ತಡದ ಜೀವನದ ನಡುವೆ ಮನೋವಿಜ್ಞಾನವನ್ನು ಕಲಿಯುವ ಆಸಕ್ತಿ ಹೆಚ್ಚಿದೆ. ಆದರೆ, ಕುವೆಂಪು ಈ ಬಗ್ಗೆ ಹಿಂದೆಯೇ ತಿಳಿಸಿದ್ದಾರೆ ಎಂದರು.ಕುವೆಂಪು ತಮ್ಮ ಸಾಹಿತ್ಯದಲ್ಲಿ ಪರಿಸರ ಹಾಗೂ ಮಾನವನ ಮನಸ್ಸು ಒಂದಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ಅದು ಸತ್ಯವಾದ ವಿಚಾರ, ಹಾಗಾದಾಗ ಜೀವನ ಸಂಘರ್ಷ ಕಡಿಮೆಯಾಗಲು ಸಾಧ್ಯ. ನಾವು ಪರಿಸರದಿಂದ ಬಂದರೂ ನಗರೀಕರಣದ ಯೋಚನೆಯಲ್ಲಿ ಪ್ರಾಣಿಗಳಿಗೆ ತೊಂದರೆ ನೀಡುತ್ತಿದ್ದೇವೆ. ಇದರಿಂದ ಅಸಮತೋಲನ ಉಂಟಾಗಿದ್ದು, ಮಾನವ– ಪ್ರಾಣಿ ಸಂಘರ್ಷ ಹೆಚ್ಚುತ್ತಿವೆ ಎಂದು ಅವರು ಹೇಳಿದರು.ಕುವೆಂಪು ಭಿನ್ನ ವ್ಯಕ್ತಿತ್ವ ಹೊಂದಿದ್ದರು. ಈ ವಿಶ್ವವಿದ್ಯಾಲಯವನ್ನು ರೂಪಿಸುವಲ್ಲಿ ಅವರ ಶ್ರಮವನ್ನು ಇಂದಿನ ವಿದ್ಯಾರ್ಥಿಗಳು ಅರಿಯಬೇಕು. ರಾಷ್ಟ್ರದಲ್ಲಿ ಕಲ್ಕತ್ತಾ ವಿವಿ ಬಳಿಕ ಮೈಸೂರು ವಿವಿ ಮನೋವಿಜ್ಞಾನ ವಿಭಾಗ ಆರಂಭವಾಗಿತ್ತು ಎಂಬುದು ಹೆಮ್ಮೆಯ ವಿಚಾರ. ಇಲ್ಲಿನ ಪರಂಪರೆಯನ್ನು ಬೆಳೆಸುವ ಜವಾಬ್ದಾರಿ ಯುವ ಸಮುದಾಯಕ್ಕಿದೆ ಎಂದರು.ಕುವೆಂಪು ಕುಲಪತಿ ಆಗಿದ್ಗಾಗಲೂ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದವು. ಆದರೆ, ಅವರ ಗಟ್ಟಿಯಾದ ನಿಲುವಿನ ಮುಂದೆ ಟೀಕೆಗಳು ಸತ್ತು, ಕೆಲಸಗಳಷ್ಟೇ ಉಳಿಯಿತು. ಇತ್ತೀಚೆಗೆ ಅವರ ಬಗ್ಗೆ ಭಾಷಣ ಮಾಡುವವರು ಹೇಳುವುದೊಂದು, ನಡೆದುಕೊಳ್ಳುವುದು ಇನ್ನೊಂದು ಎಂಬ ಸ್ಥಿತಿ ನಿರ್ಮಿಸಿದ್ದಾರೆ. ಆದರ್ಶಪ್ರಾಯವಾದ ಕುವೆಂಪು ಜೀವನ ಅನುಸರಿಸಲು ಪ್ರಯತ್ನಿಸೋಣ ಎಂದು ಅವರು ಕರೆ ನೀಡಿದರು.ಮನೋವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಸಂಪತ್ತಕುಮಾರ್, ಹಿರಿಯ ವಿದ್ಯಾರ್ಥಿಗಳ ಸಂಘದ ಸಂಘಟನಾ ಕಾರ್ಯದರ್ಶಿ ಡಾ.ಪಿ. ಮಂಜುನಾಥ, ಪ್ರೊ. ಮೇವಾ ಸಿಂಗ್, ವಿಶ್ರಾಂತ ಪ್ರಧ್ಯಾಪಕ ಎಂ. ಶ್ರೀಧರಮೂರ್ತಿ, ರಾಜ್ಯ ಮುಕ್ತ ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಜ್ಯೋತಿ ಶಂಕರ್ ಮೊದಲಾದವರು ಇದ್ದರು.

Share this article