ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ವಯೋನಿವೃತ್ತಿ ಹೊಂದುತ್ತಿರುವ ಕಳಂಕಿತ ಭ್ರಷ್ಟ ಮುಖ್ಯ ಅಭಿಯಂತರ ಬಾಲರಾಜು ಅವರನ್ನು ಯಾವುದೇ ಕಾರಣಕ್ಕೂ ಸೇವೆಯಲ್ಲಿ ಮುಂದುವರೆಸಬಾರದು ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.ಈ ಸಂಬಂಧ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮುಖ್ಯ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿರುವ ಬಾಲರಾಜು ಅವರು ಆ.31ರಂದು ವಯೋ ನಿವೃತ್ತಿ ಹೊಂದಲಿದ್ದಾರೆ. ಇವರ ವಿರುದ್ಧ ಹಲವಾರು ಗುರುತರ ಆರೋಪಗಳಿವೆ ಎಂದಿದ್ದಾರೆ.
ತಮ್ಮ ಸೇವಾವಧಿಯಲ್ಲಿ ಹಲವು ವಿವಾದಗಳಿಗೆ ಸಿಲುಕಿರುವ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿರುವ ಬಾಲರಾಜು ಅವರನ್ನು ನಿವೃತ್ತಿ ಬಳಿಕ 2 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಸೇವೆಯಲ್ಲಿ ಮುಂದುವರೆಸುವ ಸಂಬಂಧ ವಸತಿ ಸಚಿವ ಜಮೀರ್ ಅಹಮದ್ ಖಾನ್ ಪತ್ರ ಮುಖೇನ ಆಗ್ರಹಿಸಿರುವ ಆತಂಕಕಾರಿ ವಿಷಯ ಮಾಧ್ಯಮಗಳ ಮುಖಾಂತರ ತಿಳಿದು ಬಂದಿದೆ ಎಂದು ಹೇಳಿದ್ದಾರೆ.ಈ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೊರಡಿಸಿರುವ ಸರ್ಕಾರಿ ಆದೇಶದಲ್ಲಿ ‘ನಿವೃತ್ತರಾಗುವ ರಾಜ್ಯ ಸರ್ಕಾರಿ ಅಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ಸೇವೆಯಲ್ಲಿ ಮುಂದುವರೆಸಲು ಅವಕಾಶವಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೂ ಮುಖ್ಯಮಂತ್ರಿಯ ಆದೇಶವನ್ನೂ ಮೀರಿ ಬಾಲರಾಜು ಎಂಬ ಭ್ರಷ್ಟ ಅಧಿಕಾರಿಯನ್ನು ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮುಖ್ಯ ಅಭಿಯಂತರ ಹುದ್ದೆಯಲ್ಲಿ ಮುಂದುವರೆಸುವ ಸಂಬಂಧ ಕಾಣದ ಕೈಗಳು ಕೆಲಸ ಮಾಡುತ್ತಿರುವುದು ಕಾನೂನು ರೀತಿ ಸರಿಯಾದ ಕ್ರಮವಲ್ಲ ಎಂದು ತಿಳಿಸಿದ್ದಾರೆ.
ಹೀಗಾಗಿ ಪ್ರಾಮಾಣಿಕ ಅಧಿಕಾರಿಯಾಗಿರುವ ತಾವು ಯಾವುದೇ ಕಾರಣಕ್ಕೂ ಬಾಲರಾಜು ಎಂಬ ಅತ್ಯಂತ ಭ್ರಷ್ಟ ಅಧಿಕಾರಿಯನ್ನು ಸೇವಾ ನಿವೃತ್ತಿ ಬಳಿಕ ಗುತ್ತಿಗೆ ಆಧಾರದಡಿ ಅದೇ ಹುದ್ದೆಯಲ್ಲಿ ಮುಂದುವರೆಸುವ ಆದೇಶ ನೀಡಬಾರದು. ಒಂದು ವೇಳೆ ಮುಂದುವರೆಸಿದ್ದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ರಮೇಶ್ ಎಚ್ಚರಿಸಿದ್ದಾರೆ.