ಬಿಬಿಎಂಪಿ ವ್ಯಾಪ್ತಿಯ ಉದ್ಯಾನವನ ಪ್ರವೇಶಕ್ಕೆ ನಿಗದಿಪಡಿಸಿರುವ ಸಮಯ ಬದಲಿಸಿ: ರಮೇಶ್‌ ಆಗ್ರಹ

KannadaprabhaNewsNetwork | Updated : Aug 23 2024, 05:53 AM IST

ಸಾರಾಂಶ

ಬಿಬಿಎಂಪಿ ವ್ಯಾಪ್ತಿಯ ಉದ್ಯಾನವನಗಳಲ್ಲಿ ಸಾರ್ವಜನಿಕರ ಬಳಕೆಗೆ ನಿಗದಿಪಡಿಸಿರುವ ಸಮಯ ಬದಲಾಯಿಸುವಂತೆ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಬಿಬಿಎಂಪಿ ಆಡಳಿತಾಧಿಕಾರಿ ಮತ್ತು ಮುಖ್ಯ ಆಯುಕ್ತರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

 ಬೆಂಗಳೂರು :  ಬಿಬಿಎಂಪಿ ವ್ಯಾಪ್ತಿಯ ಉದ್ಯಾನವನಗಳಲ್ಲಿ ಸಾರ್ವಜನಿಕರ ಬಳಕೆಗೆ ನಿಗದಿಪಡಿಸಿರುವ ಸಮಯ ಬದಲಾಯಿಸುವಂತೆ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಬಿಬಿಎಂಪಿ ಆಡಳಿತಾಧಿಕಾರಿ ಮತ್ತು ಮುಖ್ಯ ಆಯುಕ್ತರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಉದ್ಯಾನಗಳಲ್ಲಿ ಸಾರ್ವಜನಿಕರು ವಿಹರಿಸಲು ಮತ್ತು ವಿಶ್ರಾಂತಿ ಪಡೆಯಲು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸಮಯ ನಿಗದಿಗೊಳಿಸಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ. ಸಾರ್ವಜನಿಕರ ಲಕ್ಷಾಂತರ ರು. ತೆರಿಗೆ ಹಣ ವ್ಯಯಿಸಿ ಪ್ರತಿ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ. ಉದ್ಯಾನದಲ್ಲಿರುವ ಸಸಿಗಳು ಮತ್ತು ಗಿಡಗಳ ನಿರ್ವಹಣೆಗೆ ನಿತ್ಯ ನಾಲ್ಕೈದು ಗಂಟೆ ಕಾಲಾವಕಾಶದ ಅಗತ್ಯವಿದೆ. ಪ್ರಮುಖವಾಗಿ ನಿತ್ಯ ನೀರು ಹಾಕಿ ಪೋಷಿಸುವ ಕೆಲಸವನ್ನು ಆಯಾ ಉದ್ಯಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಲಿಗಳು ಮಾಡಬೇಕು.

ಈ ಹಿಂದೆ ಉದ್ಯಾನಗಳನ್ನು ಸಾರ್ವಜನಿಕರ ಬಳಕೆಗೆ ಬೆಳಗ್ಗೆ 6 ರಿಂದ ಬೆಳಗ್ಗೆ 10 ಮತ್ತು ಸಂಜೆ 4ರಿಂದ ರಾತ್ರಿ 8 ಗಂಟೆ ವರೆಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ, ತುಘಲಕ್‌ ದರ್ಬಾರ್‌ ಹೋಲುವ ಪಾಲಿಕೆಯ ಮುಖ್ಯ ಆಯುಕ್ತರ ಆದೇಶದಿಂದಾಗಿ ಉದ್ಯಾನಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಸುಶಿಕ್ಷಿತರಿಗೆ ಅಸಹ್ಯಕಾರಿ ಘಟನೆಗಳು ಹಾಗೂ ಕಾನೂನು ಬಾಹಿರ ಚಟುವಟಿಕೆಗಳು ನಡೆಯುವುದಕ್ಕೆ ಆಸ್ಪದವಾಗಿದೆ. ಈ ಸಮಯದಲ್ಲಿ ಕೆಲವು ಯುವಕ-ಯುವತಿಯರು ನಾಗರಿಕರಿಗೆ ಮುಜುಗರವಾಗುವಂತಹ ರೀತಿಯಲ್ಲಿ ವರ್ತಿಸುವುದು ಹಾಗೂ ಉದ್ಯಾನಗಳ ಭದ್ರತಾ ಸಿಬ್ಬಂದಿ ಜತೆಗೆ ಅನುಚಿತವಾಗಿ ವರ್ತಿಸುವುದು ಸಾಮಾನ್ಯವಾಗಿದೆ ಎಂದು ಆರೋಪಿಸಿದ್ದಾರೆ.

ಹಿಂದಿನ ಸಮಯ ನಿಗದಿಗೆ ಆಗ್ರಹ:

ಇಂತಹ ಮುಜುಗರದ ಸನ್ನಿವೇಶಗಳನ್ನು ತಪ್ಪಿಸುವ, ಅಪರಾಧ ಪ್ರಕರಣಗಳಿಗೆ ಎಡೆಮಾಡಿಕೊಡುವ ಅವಕಾಶಗಳನ್ನು ತಪ್ಪಿಸುವ ಹಾಗೂ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನಗಳಲ್ಲಿನ ಗಿಡಿ-ಮರ-ಸಸಿಗಳಿಗೆ ಪ್ರತಿ ನಿತ್ಯ ನಿಯಮಿತವಾಗಿ ನೀರುಣಿಸುವ ಕಾರ್ಯಕ್ಕೆ ತೊಂದರೆಯಾಗದಂತೆ ಈ ಮೊದಲಿನಂತೆ ಉದ್ಯಾನಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆ ವರೆಗಿನ ಅವಧಿ ನಿಗದಿಗೊಳಿಸಿ ಆದೇಶಿಸಬೇಕು. ಈ ಮೂಲಕ ಉದ್ಯಾನಗಳ ಸಮರ್ಪಕ ನಿರ್ವಹಣೆಗೆ ಅನುವು ಮಾಡಿಕೊಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಆಡಳಿತಾಧಿಕಾರಿಯನ್ನು ಆಗ್ರಹಿಸಿದ್ದಾರೆ.

Share this article