ನಾಡಪ್ರಭು ಕೆಂಪೇಗೌಡರ ಸೇವೆ ಆದರ್ಶನೀಯ: ಶಾಸಕ ಸ್ವರೂಪ್

KannadaprabhaNewsNetwork | Published : Jun 28, 2024 12:49 AM

ಸಾರಾಂಶ

ಮರುದಿನ ಬೆಳಗ್ಗೆ ಧೂತರು ಓಡಿಬಂದು ಬಾಗಿಲು ಬಿದ್ದುಹೋಗಿರುವ ಸುದ್ದಿಯನ್ನು ಗೌಡರಿಗೆ ಮುಟ್ಟಿಸುತ್ತಾರೆ. ಒದಗಿದ ವಿಘ್ನವನ್ನು ಕಂಡು ಹೌಹಾರಿದ ಗೌಡರು ಸ್ಥಳಕ್ಕೆ ಬಂದು ಎಲ್ಲವನ್ನೂ ಪರಿಶೀಲಿಸುತ್ತಾರೆ. ಇದನ್ನೆಲ್ಲ ಗಮನಿಸುತ್ತಿದ್ದ ಸೊಸೆ ಲಕ್ಷ್ಮೀದೇವಿ ಮಾವನವರ ಕೊರಗನ್ನು ಕಂಡು ತಾನೇ ಬಲಿದಾನ ಮಾಡಿಕೊಳ್ಳುವ ತೀರ್ಮಾನಕ್ಕೆ ಬರುತ್ತಾಳೆ.

ಕನ್ನಡಪ್ರಭ ವಾರ್ತೆ ಹಾಸನ

ಈ ನಾಡಿಗೆ ಕೆಂಪೇಗೌಡರ ಕೊಡುಗೆ ಅಪಾರವಾಗಿದ್ದು, ಕೃತಜ್ಞತಾ ಭಾವದಲ್ಲಿ ಇಂತಹ ಮಹನೀಯರ ನೆನಪು ಮಾಡಿಕೊಳ್ಳಲು ಮುಂದಿನ ವರ್ಷ ಕೆಂಪೇಗೌಡ ಜಯಂತಿ ಹೊತ್ತಿಗೆ ನಗರದಲ್ಲಿ ಕೆಂಪೇಗೌಡರ ಬೃಹತ್‌ ಪ್ರತಿಮೆ ಅನಾವರಣ ಮಾಡಲಾಗುವುದು ಎಂದು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರಿನಂತಹ ಮಹಾನಗರ ನಿರ್ಮಿಸಿ, ಸರ್ವ ಜನಾಂಗದವರು, ದೇಶ- ವಿದೇಶಗಳಿಂದ ಬಂದ ಎಲ್ಲ ಜನರೂ ಜೀವನ ನಡೆಸುವುದಕ್ಕೆ ಕಾರಣೀಭೂತರಾಗಿದ್ದಾರೆ. ಇಂತಹ ಮಹಾನೀಯರ ಜಯಂತಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಸರ್ವ ಜನಾಂಗದವರನ್ನು ಗುರುತಿಸಿ ಸನ್ಮಾನ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಎಲ್ಲಾ ಜಯಂತಿಗಳು, ಎಲ್ಲಾ ಮಹಾತ್ಮರೂ, ಎಲ್ಲಾ ಪುಣ್ಯ ಪುರುಷರೂ ತಮಗಾಗಿ ಏನು ಮಾಡಿಕೊಂಡಿಲ್ಲ. ತನ್ನ ಪ್ರಜೆಗಳಿಗಾಗಿ ಮತ್ತು ಅವರ ಯೋಗಕ್ಷೇಮಕ್ಕಾಗಿ ಬೇರೆಯವರಿಗೆ ಒಳ್ಳೆಯದನ್ನು ಮಾಡಿರುವುದಕ್ಕೇ ಅವರು ಮಹಾತ್ಮರಾಗಿದ್ದಾರೆ. ಅವರನ್ನು ನಾವು ನೆನೆಯುತ್ತಿದ್ದೇವೆಂದರೆ ಅವರು ನಮ್ಮ ಹೃದಯದಲ್ಲಿದ್ದಾರೆ ಎಂದರ್ಥ. ಕೆಂಪೇಗೌಡರು ಎಂದರೆ ಕೇವಲ ಒಕ್ಕಲಿಗ, ಗೌಡರ ಸಮಾಜಕ್ಕೆ ಸೀಮಿತವಾಗಿರುವುದಿಲ್ಲ. ಎಲ್ಲ ಜನಾಂಗಕ್ಕೂ ಕೆಂಪೇಗೌಡರು ಸೇರಿದವರಾಗಿದ್ದಾರೆ. ಯಾವತ್ತು ಸ್ವಾರ್ಥ ಮಾಡದೇ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಬಣ್ಣಿಸಿದರು.

ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ಧೇಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಹೆಣ್ಣು ಮಕ್ಕಳು ಏಳ್ಗೆಯಾಗದಿದ್ದರೆ ಸಮಾಜ ಅಭಿವೃದ್ಧಿಯಾಗುವುದಿಲ್ಲ. ಕೆಂಪೇಗೌಡರು ಅಂದಿನ ಕಲ್ಪನೆಯಂತೆ ಬೆಂಗಳೂರು ನಿರ್ಮಾಣಕ್ಕೆ ಮುಂದಾದರು. ಸುಮಾರು ೫೦೦ ವರ್ಷಗಳಷ್ಟು ಹಿಂದೆಯೇ ವ್ಯಾಪಾರಿಗಳನ್ನು ಕರೆತಂದು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಅವರವರ ವೃತ್ತಿಗಳಿಗೆ ಅನುಸಾರವಾಗಿ ಪೇಟೆಗಳನ್ನು ನಿರ್ಮಿಸಿಕೊಟ್ಟು ನಗರವು ಬೆಳೆಯಲು ಅನುವು ಮಾಡಿಕೊಟ್ಟ ಕೀರ್ತಿ ಕೆಂಪೆಗೌಡರಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮಕ್ಕೆ ಮೊದಲು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಬೆಳ್ಳಿ ಸಾರೋಟದಲ್ಲಿ ಕೆಂಪೇಗೌಡರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡದೊಡನೆ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಕಲಾಭವನದಲ್ಲಿ ಕೊನೆಗೊಂಡಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಕೂಡ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ, ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್ ಮಹಮ್ಮದ್ ಸುಜೀತ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಎಸ್. ರಘುಗೌಡ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಚ್.ಪಿ. ತಾರನಾಥ್, ಕಸಾಪ ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ ಇತರರು ಭಾಗವಹಿಸಿದ್ದರು. ಸಮಾಜಸೇವಕ ಯದೀಶ್ ಕಾರ್ಯಕ್ರಮ ನಿರೂಪಿಸಿದರು.

ಮಹಾನಗರ ನಿರ್ಮಿಸಲು ಕೆಂಪೇಗೌಡರ ಶ್ರಮ ಅನನ್ಯ:

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಗುರುರಾಜ್ ಉಪನ್ಯಾಸದಲ್ಲಿ ಮಾತನಾಡಿ, ರಾಜಧಾನಿಯ ನಿರ್ಮಾಣ ಕಾರ್ಯಕ್ಕೆ ಅಪಾರ ಹಣದ ಅವಶ್ಯಕತೆ ಇದ್ದಿದ್ದರಿಂದಾಗಿ ಗೌಡರು ಅಗತ್ಯವಾದ ಧನ ಸಹಾಯ ಮಾಡಬೇಕೆಂದು ತಮ್ಮ ವ್ಯಾಪ್ತಿಯ ಪ್ರದೇಶದ ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಮನವಿಗೆ ಓಗೊಟ್ಟ ಹಲಸೂರು, ಜಿಗಣಿ, ಬಾಣಾವರ, ಬೇಗೂರು, ತಲಘಟ್ಟಪುರ, ಕುಣಿಗಲ್ ಮತ್ತಿತರ ಕಡೆಗಳಿಂದ ಸ್ವಲ್ಪ ಪ್ರಮಾಣದ ಹಣ ಹರಿದುಬರುತ್ತದೆ. ಉಳಿದಂತೆ ನಿರ್ಮಾಣ ಕಾರ್ಯಕ್ಕೆ ಬೇಕಾದ ಸಾಮಗ್ರಿಗಳನ್ನು ಗಾಡಿಗಳ ಮೂಲಕ ಕೆಲವರು ತಲುಪಿಸುತ್ತಾರೆ ಮತ್ತು ಕೋಟೆಯ ನಿರ್ಮಾಣದಲ್ಲಿ ನೆರವಾಗಲು ನೂರಾರು ಮಂದಿ ಸ್ವಯಂ ಪ್ರೇರಿತರಾಗಿ ಮುಂದೆ ಬರುವುದಾಗಿ ಗೌಡರಿಗೆ ಧೈರ್ಯ ನೀಡುತ್ತಾರೆ. ಆಸ್ಥಾನದ ಪ್ರಮುಖರೊಂದಿಗೆ ಚರ್ಚಿಸಿ ಗುರುತಿಸಿದ ಪ್ರದೇಶದಲ್ಲಿ ಕೋಟೆ, ಪೇಟೆ, ಗುಡಿ, ಕೆರೆ ಮತ್ತು ಉದ್ಯಾನ ಈ ಐದು ಅಂಗಗಳಿಂದ ಕೂಡಿದ ರಾಜಧಾನಿಯ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಿಸುತ್ತಾರೆ. ನಂತರ ಪುರೋಹಿತರಿಂದ ನಗರ ನಿರ್ಮಾಣಕ್ಕೆ ಮುಹೂರ್ತವನ್ನು ನಿಗಧಿ ಮಾಡಿಸುತ್ತಾರೆ.ನಂತರ ಗೌಡರು ಬೆಂಗಳೂರು ನಗರ ನಿರ್ಮಿಸಲು ಮುಂದಾಗಿ, ಬಾಗಿಲು ಹೆಬ್ಬಾಗಿಲು ನಿಲ್ಲಿಸಿದ ಸಂಭ್ರಮದಲ್ಲಿ ಅರಮನೆಗೆ ಹಿಂದಿರುಗಿ ಮನೆ ಮಂದಿಯ ಜೊತೆ ಸಂತಸ ಹಂಚಿಕೊಳ್ಳುತ್ತಾರೆ. ಆದರೆ ಮರುದಿನ ಬೆಳಗ್ಗೆ ಧೂತರು ಓಡಿಬಂದು ಬಾಗಿಲು ಬಿದ್ದುಹೋಗಿರುವ ಸುದ್ದಿಯನ್ನು ಗೌಡರಿಗೆ ಮುಟ್ಟಿಸುತ್ತಾರೆ. ಒದಗಿದ ವಿಘ್ನವನ್ನು ಕಂಡು ಹೌಹಾರಿದ ಗೌಡರು ಸ್ಥಳಕ್ಕೆ ಬಂದು ಎಲ್ಲವನ್ನೂ ಪರಿಶೀಲಿಸುತ್ತಾರೆ. ಇದನ್ನೆಲ್ಲ ಗಮನಿಸುತ್ತಿದ್ದ ಸೊಸೆ ಲಕ್ಷ್ಮೀದೇವಿ ಮಾವನವರ ಕೊರಗನ್ನು ಕಂಡು ತಾನೇ ಬಲಿದಾನ ಮಾಡಿಕೊಳ್ಳುವ ತೀರ್ಮಾನಕ್ಕೆ ಬರುತ್ತಾಳೆ. ಹೀಗೆ ಕೆಂಪೇಗೌಡರು ಬೆಂಗಳೂರು ಮಹಾನಗರವನ್ನು ನಿರ್ಮಿಸಲು ಶ್ರಮಿಸಿದ ರೀತಿಯನ್ನು ತಿಳಿಸಿಕೊಟ್ಟರು.

ಕೆಂಪೇಗೌಡರು ಅನ್ಯ ಜಾತಿಯ ಧರ್ಮಿಯರಿಗೆ ಕಟ್ಟಿದ ಅರಳೆಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರ ಪೇಟೆ, ಮಡಿವಾಳ ಪೇಟೆ, ಗೊಲ್ಲರಪೇಟೆ, ಹೂವಾಡಿಗರ ಪೇಟೆ, ಮಂಡಿಪೇಟೆ, ಅಂಚೆಪೇಟೆ, ಬಳೇಪೇಟೆ, ತರಗುಪೇಟೆ, ಸುಣ್ಣಕಲ್ ಪೇಟೆ, ಮೇದರ ಪೇಟೆ, ಕುರುಬರ ಪೇಟೆ, ಮುತ್ಯಾಲಪೇಟೆ, ಕುಂಚಿಟಿಗರ ಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಕಲ್ಲಾರಪೇಟೆ, ತಿಗಳರ ಪೇಟೆ, ಮಾಮೂಲ್ ಪೇಟೆ, ನಗರ್ತಪೇಟೆ, ಸುಲ್ತಾನಪೇಟೆ,, ಬಿನ್ನಿಪೇಟೆಗಳು, ಉದ್ಯಾನಗಳು, ಕೆರೆಗಳು, ನಗರದ ಯೋಜನೆಗಳು ಇದಕ್ಕೆ ಸಾಕ್ಷಿ ಎಂದು ಕೆಂಪೇಗೌಡರನ್ನು ಶ್ಲಾಘಿಸಿದರು.

Share this article