ನಾಡಪ್ರಭು ಕೆಂಪೇಗೌಡರು ಮಹಾನ್ ವ್ಯಕ್ತಿ

KannadaprabhaNewsNetwork | Updated : Jul 07 2024, 10:29 AM IST

ಸಾರಾಂಶ

ನಾಡಪ್ರಭು ಕೆಂಪೇಗೌಡರಂತಹ ಒಳ್ಳೆಯ ವ್ಯಕ್ತಿಗಳು ಮಾಡಿದ ಕೆಲಸಗಳು ಹಾಗೂ ಅವರ ವ್ಯಕ್ತಿತ್ವ ಮತ್ತು ಗುಣಗಳ ಬಗ್ಗೆ ಸ್ಮರಣೆಗಾಗಿ ಇಂತಹ ಜಯಂತಿ ಕಾರ್ಯಕ್ರಮ ನಡೆಸಬೇಕಿದೆ. ಜತೆಗೆ ಅವರಿಂದ ಪ್ರೇರಣೆಗೊಂಡು ಕಿಂಚಿತ್ತಾದರೂ ಸಮಾಜದ ಕೆಲಸ ಮಾಡಬೇಕು.

ಪಾಂಡವಪುರ  : ನಾಡಪ್ರಭು ಕೆಂಪೇಗೌಡರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗೂ ಮೀರಿ ಬೆಂಗಳೂರನ್ನು ವಿಶ್ವವೇ ತಿರುಗಿ ನೋಡುವಂತಹ ದೊಡ್ಡ ನಗರವನ್ನಾಗಿ ರೂಪಿಸುವ ಕನಸ್ಸು ಕಟ್ಟಿಕೊಂಡು ನನಸ್ಸಾಗಿ ಮಾಡಿದ ಮಹಾನ್ ವ್ಯಕ್ತಿ ಎಂದು ಮೈಸೂರಿನ ಸಾಮಾಜಿಕ ಕಾರ್ಯಕರ್ತೆ ಮಾಳವಿಕ ಗುಬ್ಬಿವಾಣಿ ಹೇಳಿದರು.

ತಾಲೂಕಿನ ಕಣಿವೆಕೊಪ್ಪಲು ಗ್ರಾಮದ ಡೇರಿ ಆವರಣದಲ್ಲಿ ಪರಿಸರ ಪ್ರೇಮಿ ಲವಕುಮಾರ್ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯ ಆಚರಣೆ, ಉಚಿತ ನೇತ್ರ ತಪಾಸಣೆ ಶಿಬಿರ, ಪತ್ರಿಕಾ ದಿನಾಚರಣೆ ಹಾಗೂ ಗಿಡ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಳ್ಳಿಯಂತಿದ್ದ ಬೆಂಗಳೂರು ನಗರವನ್ನು ತಮ್ಮ‌ ಪರಿಕಲ್ಪನೆ ಮೂಲಕ ಬಹುದೊಡ್ಡ ನಗರವನ್ನಾಗಿಸಿದರು. ಆದರೆ, ಇಂದಿನ ದಿನಗಳಲ್ಲಿ ಹಳ್ಳಿಗಳು ಹಾಳಾಗುತ್ತಿದೆ. ಅಲ್ಲದೇ, ಪರಿಸರ ಮತ್ತು ಆರೋಗ್ಯ ಕೂಡ ಹಾಳು ಮಾಡುತ್ತಿದ್ದೇವೆ. ಹೀಗಾಗಿ ಕೆಲ ಸಮಯವಾದರೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡು ಹಳ್ಳಿ ಅಭಿವೃದ್ಧಿಗೊಳಿಸುವ ಜತೆ ಜತೆಯಲ್ಲಿ ನಮ್ಮ ಆರೋಗ್ಯವನ್ನೂ ಸುಧಾರಣೆ ಮಾಡಿಕೊಳ್ಳಬೇಕಿದೆ ಎಂದರು.

ನಾಡಪ್ರಭು ಕೆಂಪೇಗೌಡರಂತಹ ಒಳ್ಳೆಯ ವ್ಯಕ್ತಿಗಳು ಮಾಡಿದ ಕೆಲಸಗಳು ಹಾಗೂ ಅವರ ವ್ಯಕ್ತಿತ್ವ ಮತ್ತು ಗುಣಗಳ ಬಗ್ಗೆ ಸ್ಮರಣೆಗಾಗಿ ಇಂತಹ ಜಯಂತಿ ಕಾರ್ಯಕ್ರಮ ನಡೆಸಬೇಕಿದೆ. ಜತೆಗೆ ಅವರಿಂದ ಪ್ರೇರಣೆಗೊಂಡು ಕಿಂಚಿತ್ತಾದರೂ ಸಮಾಜದ ಕೆಲಸ ಮಾಡಬೇಕು ಎಂದರು.

ಜನ ಜಾಗೃತಿ ವೇದಿಕೆ ಸದಸ್ಯ ಹಾರೋಹಳ್ಳಿ ಧನ್ಯಕುಮಾರ್ ಉಪನ್ಯಾಸ ನೀಡಿ, ಪ್ರತಿಯೊಬ್ಬ ಮನುಷ್ಯನು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಅದರಲ್ಲೂ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.

ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಬದಲಾವಣೆಯಿಂದಾಗಿ ಹಲವು ಕಾಯಿಲೆಗಳು ಮನುಷ್ಯನನ್ನು ಭಾದಿಸುತ್ತಿವೆ. ಕೇವಲ 25, 30 ವರ್ಷಗಳಿಗೆ ಯುವಕರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಿದ್ದಾರೆ. ಇನ್ನೂ ಕೆಲವರು ಮಾದಕ ಚಟುವಟಿಕೆಗಳಿಗೆ ದಾಸರಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರ ಪ್ರೇಮಿ ಲವಕುಮಾರ್ ಅವರ ಸಾಮಾಜಿಕ‌ಕಳಕಳಿ ಶ್ಲಾಘನೀಯ. ವಿವಿಧೆಡೆ ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರೇಮಿಯಾಗಿದ್ದಾರೆ. ಜತೆಗೆ ಹಲವು ಸಮಾಜಮುಖಿ ಕೆಲಸ ಕಾರ್ಯಗಳನ್ನೂ ಮಾಡುವ ಮೂಲಕ ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ ಮಾತನಾಡಿದರು. ಮೈಸೂರಿನ ಎಎಸ್ ಜಿ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳಾದ ಪ್ರೀತಿ, ರಘು, ಚಿನಕುರಳಿ ಸಮುದಾ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಂದೀಪ್, ಕ್ಷೇತ್ರ ಆರೋಗ್ಯಾಧಿಕಾರಿ ಶಿವಮ್ಮ, ಗ್ರಾಪಂ ಉಪಾಧ್ಯಕ್ಷ ಕಣಿವೆಕೊಪ್ಪಲು ರವಿ, ಸದಸ್ಯ ರಮೇಶ್, ಅರಣ್ಯ ಇಲಾಖೆ ನಂಜುಂಡಸ್ವಾಮಿ, ಯಜಮಾನರಾದ ಮರೀಗೌಡ, ಅಂಕೇಗೌಡ, . ಸೇವಾ ಪ್ರತಿನಿಧಿ ವಿಜಯ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.

Share this article