ಕನ್ನಡಪ್ರಭ ವಾರ್ತೆ ನಾಗಮಂಗಲ
23 ಮಂದಿ ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ ನ 10 ಮಂದಿ ಹಾಗೂ ಜೆಡಿಎಸ್ ನ 13 ಮಂದಿ ಸದಸ್ಯರಿದ್ದರು. ಸುಲಭವಾಗಿ ಅಧಿಕಾರ ಹಿಡಿಯಲು ಬಹುಮತ ಹೊಂದಿದ್ದ ಜೆಡಿಎಸ್ ಗೆ ತೀವ್ರ ಮುಖಭಂಗ ಉಂಟಾಗಿದೆ.
ಸ್ಥಳೀಯ ಶಾಸಕರೂ ಆಗಿರುವ ಜಿಲ್ಲಾ ಉಸ್ತವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಎರಡು ಮತಗಳು ಸೇರಿ ಮತದಾನದ ಸಂಖ್ಯಾಬಲ ಒಟ್ಟು 25 ಇತ್ತು.ಚುನಾವಣೆಯಲ್ಲಿ ಕಾಂಗ್ರೆಸ್ ನ 12ನೇ ವಾರ್ಡ್ ಸದಸ್ಯ ಅಲಿ ಅನ್ಸರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡ್ ಸದಸ್ಯೆ ವಸಂತಲಕ್ಷ್ಮೀ ನಾಮಪತ್ರ ಸಲ್ಲಿಸಿದರೆ, ಜೆಡಿಎಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ 7ನೇ ವಾರ್ಡ್ ಸದಸ್ಯೆ ಚಂದ್ರಕಲಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್ ಸದಸ್ಯೆ ಸೌಮ್ಯ ನಾಮಪತ್ರ ಸಲ್ಲಿಸಿದ್ದರು.
ಇಬ್ಬರು ಗೈರು, ಇಬ್ಬರು ತಟಸ್ಥ :
ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರೂ ಕೂಡ ಜೆಡಿಎಸ್‌ನ 4ನೇ ವಾರ್ಡ್ ಸದಸ್ಯೆ ಭಾರತಿ ಮತ್ತು 2ನೇ ವಾರ್ಡ್ ಸದಸ್ಯೆ ರತ್ನಮ್ಮ ತಟಸ್ಥವಾಗಿ ಕುಳಿತಿದ್ದರು. ಇದರಿಂದ ತಮ್ಮ ರಾಜಕೀಯ ಚಾಣಕ್ಷ್ಯತನದಿಂದ ಸುಲಭವಾಗಿ ಪುರಸಭೆಯ ಅಧಿಕಾರ ಹಿಡಿಯುವಲ್ಲಿ ಸಚಿವ ಚಲುವರಾಯಸ್ವಾಮಿ ಯಶಸ್ವಿಯಾದರು.
ಬಳಿಕ ಮಾತನಾಡಿದ ಸಚಿವರು, ರಾಜ್ಯದ ಎಲ್ಲಾ ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ ನಗರ ಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿ ತೀರ್ಮಾನ ಹೊರಬರುವುದು ತಡವಾದ್ದರಿಂದ ಕಳೆದ 14 ತಿಂಗಳಿಂದ ಚುನಾವಣೆ ನಡೆದಿರಲಿಲ್ಲ ಎಂದರು.ಸರ್ಕಾರ ನಿಗಧಿಪಡಿಸಿದ್ದ ಮೀಸಲಾತಿಯಂತೆ ಚುನಾವಣೆ ನಡೆಸುವಂತೆ ಕಳೆದ ಒಂದು ತಿಂಗಳ ಹಿಂದೆ ಸುರ್ಪಿಂಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಮೀಸಲಾತಿ ಪ್ರಕ್ರಿಯೆ ಬದಲಾಯಿಸುವಂತೆ ಸರ್ಕಾರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರೆ ಈಗಾಗಲೇ 14 ತಿಂಗಳಿಂದ ಅಧಿಕಾರ ಕಳೆದುಕೊಂಡಿರುವ ಚುನಾಯಿತ ಪ್ರತಿನಿಧಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಕೊರತೆಯಾಗುತ್ತದೆಂದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಚುನಾವಣೆ ನಡೆಸುತ್ತಿದೆ ಎಂದು ಹೇಳಿದರು.
ವಿಜಯೋತ್ಸವ: ಪುರಸಭೆ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಬೆಂಬಲಿತರು ಹಿಡಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪುರಸಭೆ ಕಚೇರಿ ಮುಂಭಾಗದ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಟಿ.ಮರಿಯಪ್ಪ ವೃತ್ತದಲ್ಲಿ ಬೃಹತ್ ಪಟಾಕಿ ಸಿಡಿಸುವ ಜೊತೆಗೆ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಪಕ್ಷದ ವರಿಷ್ಠರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಜಯಘೋಷ ಮೊಳಗಿಸಿ ವಿಜಯೋತ್ಸವ ಆಚರಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್ :ಚುನಾವಣೆ ಪ್ರಕ್ರಿಯೆ ವೇಳೆ ಯಾವುದೇ ಸಣ್ಣ- ಪುಟ್ಟ ಅಹಿತಕರ ಘಟನೆಗಳು ಸಂಭವಿಸದಂತೆ ಪುರಸಭೆ ಕಚೇರಿ ಸುತ್ತ ಮುತ್ತ ಡಿವೈಎಸ್‌ಪಿ ಎ.ಆರ್.ಸುಮಿತ್, ಸಿಪಿಐ ನಿರಂಜನ್, ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.