ಬುಲ್ ಟ್ರಾಲ್, ಲೈಟ್ ಫಿಶಿಂಗ್ ನಿಷೇಧಕ್ಕೆ ನಾಗೇಶ ಖಾರ್ವಿ ಆಗ್ರಹ

KannadaprabhaNewsNetwork | Published : Dec 16, 2024 12:47 AM

ಸಾರಾಂಶ

ಟ್ರಾಲ್ ಹಾಗೂ ಲೈಟ್ ಫಿಶಿಂಗ್‌ ಸಾಂಪ್ರದಾಯಿಕ ಮಿನುಗಾರರನ್ನು ಬೀದಿಗೆ ತರುತ್ತಿದೆ. ಮತ್ಸ್ಯಕ್ಷಾಮ ಉಂಟಾಗಲು ಕಾರಣವಾಗುತ್ತಿದೆ.

ಕಾರವಾರ: ಜ್ಯದಲ್ಲೂ ಬುಲ್ ಟ್ರಾಲ್ ಹಾಗೂ ಲೈಟ್ ಫಿಶಿಂಗ್ ನಿಷೇಧ‌ ಮಾಡಬೇಕು. ಇದರಿಂದಾಗಿಯೇ ಮತ್ಸ್ಯಕ್ಷಾಮ ತಲೆದೋರುತ್ತಿದೆ. ಜನಪ್ರತಿನಿಧಿಗಳು ಕೇವಲ ಭಾಷಣದಲ್ಲಿ ಮಾತ್ರ ಹೇಳಿಕೆ ನೀಡುತ್ತಿದ್ದಾರೆ. ಆದರೆ ಈ‌ ಎರಡು ಬಗೆಯ ಮೀನುಗಾರಿಕೆಯನ್ನು ನಿಷೇಧ‌ ಮಾಡಲು ಮುಂದಾಗುತ್ತಿಲ್ಲ ಎಂದು ರಾಜ್ಯ ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಅಧ್ಯಕ್ಷ ನಾಗೇಶ ಖಾರ್ವಿ ಹೇಳಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‌ ಟ್ರಾಲ್ ಹಾಗೂ ಲೈಟ್ ಫಿಶಿಂಗ್‌ ಸಾಂಪ್ರದಾಯಿಕ ಮಿನುಗಾರರನ್ನು ಬೀದಿಗೆ ತರುತ್ತಿದೆ. ಮತ್ಸ್ಯಕ್ಷಾಮ ಉಂಟಾಗಲು ಕಾರಣವಾಗುತ್ತಿದೆ. ದಶಕಗಳಿಂದಲೂ ಈ ಎರಡು ಬಗೆಯ ಮೀನುಗಾರಿಕೆ ನಿಷೇಧಿಸುವಂತೆ ಹೋರಾಟ ನಡೆಸುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ. ಲೈಟ್ ಹಾಗೂ ಟ್ರಾಲ್ ಫಿಶಿಂಗ್ ನಡೆಯುತ್ತಲೇ ಇದೆ. ಪರ್ಸೈಯನ್ ಬೋಟ್ ನಡೆಸುವವರು ಈ ಹಿಂದೆ ಲೈಟ್, ಟ್ರಾಲ್ ಮೀನುಗಾರಿಕೆ ವಿರೋಧ ಮಾಡುತ್ತಿದ್ದರು. ಆದರೆ ಅವರು ಈಗ ಈ ಮೀನುಗಾರಿಕೆ ಬೆಂಬಲಿಸುತ್ತಿದ್ದಾರೆ ಎಂದರು.ಟ್ರಾಲ್, ಲೈಟ್ ಫಿಶಿಂಗ್ ಮಾಡಬಾರದು ಎಂದು ನ್ಯಾಯಾಲಯದ, ರಾಜ್ಯ, ಕೇಂದ್ರ ಸರ್ಕಾರ ಆದೇಶವಿದೆ. ಆದರೆ ಅಧಿಕಾರಿಗಳು ಅನುಷ್ಠಾನ ಮಾತ್ರ ಮಾಡುತ್ತಿಲ್ಲ.‌ ದಶಕಗಳ ಹಿಂದೆ ಆಗಸ್ಟ್‌- ಸೆಪ್ಟೆಂಬರ್‌ನಲ್ಲಿ ಮೀನುಗಾರಿಕೆ ಆರಂಭವಾದರೆ ಮೇ ವರೆಗೂ ಮೀನು ಸಿಗುತ್ತಿತ್ತು. ಆದರೆ ಇದೀಗ ನವೆಂಬರ್ ವೇಳೆಗೆ ಮೀನಿನ ಲಭ್ಯತೆ ಕಡಿಮೆಯಾಗಿದೆ. ಲೈಟ್, ಟ್ರಾಲ್ ಮೀನುಗಾರಿಕೆ ನಿಷೇಧ ಮಾಡದೇ ಇದ್ದರೆ ಮುಂದೊಂದು ದಿನ ಸಮುದ್ರ ಬರಿದಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಮುಖಂಡರಾದ‌ ನವೀನಚಂದ್ರ ಮುಕುಂದ ಮಾತನಾಡಿ, ಲೈಟ್, ಟ್ರಾಲ್ ಮೀನುಗಾರಿಕೆ ವಿರುದ್ಧ ಭಟ್ಕಳದಲ್ಲಿ ಸೋಮವಾರ ಪ್ರತಿಭಟನೆಗೆ ನಡೆಸಲು ಅನುಮತಿ ಕೇಳಲಾಗಿತ್ತು. ಆದರೆ ಅಲ್ಲಿನ ಉಪವಿಭಾಗಾಧಿಕಾರಿ ಭಟ್ಕಳ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಅವಕಾಶವಿಲ್ಲ‌ ಎಂದು ಹಿಂಬರಹ ನೀಡಿದ್ದಾರೆ. ಹಿಂದೂ ಸಂಘಟನೆಗಳ ಪ್ರತಿಭಟನೆ ಅವಕಾಶ ನೀಡಲಾಗಿದೆ. ನಾವು ಯಾವ ಧರ್ಮ, ಜಾತಿ,‌ ವ್ಯಕ್ತಿ ವಿರುದ್ಧ ಪ್ರತಿಭಟನೆ ನಡೆಸಲು ಹೊರಟಿರಲಿಲ್ಲ. ನಮ್ಮ ಉಳಿವಿಗಾಗಿ ಹೋರಾಟ‌ ಮಾಡುತ್ತಿದ್ದೇವೆ ಎಂದರು.ಒಕ್ಕೂಟದ ಗೌರವ ಸಲಹೆಗಾರ ಮದನಕುಮಾರ್ ಮುಕುಂದ, ಅವೈಜ್ಞಾನಿಕವಾಗಿ ನಡೆಸುತ್ತಿರುವ ಮೀನುಗಾರಿಕೆ ಬಂದಾಗಬೇಕು. ನಮ್ಮ ರಾಜ್ಯದಲ್ಲಿ ಮಾತ್ರ ಈ‌ ಎರಡು ಮೀನುಗಾರಿಕೆ ನಡೆಯುತ್ತಿದೆ. ಗೋವಾ, ಕೇರಳ, ಮಹಾರಾಷ್ಟ್ರ, ಗುಜರಾತ್ ಎಲ್ಲಿಯೂ ಅವಕಾಶವಿಲ್ಲ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ನಿಷೇಧ ಹೇರಬೇಕು. ಈ ಮೂಲಕ ಸಾಂಪ್ರದಾಯಿಕ ಮೀನುಗಾರರ ರಕ್ಷಣೆ ಮಾಡಬೇಕು.

ಮತ್ಸ್ಯಕ್ಷಾಮದಿಂದ ಕಡಲು ಒಡಲು ಬರಿದಾಗುವುದನ್ನು ತಪ್ಪಿಸಬೇಕು. ಮೀನುಗಾರ ಸಮುದಾಯದವರೇ ಇಲಾಖೆಯ ಸಚಿವರಾಗಿರುವ ಕಾರಣ ಅವರಿಗೆ ಪರಿಸ್ಥಿತಿ ಅರಿವಿದೆ. ಯಾವ ಒತ್ತಡಕ್ಕೂ ಒಳಗಾಗದೇ ಈ ಎರಡು ಬಗೆಯ ಮೀನುಗಾರಿಕೆ ನಿಷೇಧ‌ಮಾಡಲು ಮುಂದಾಗಬೇಕು ಎಂದರು.ಅಶ್ವಥ, ಕೃಷ್ಣ ಹರಿಕಂತ್ರ, ಸುಧೀರ ಸಾಲ್ಯಾನ, ನಾಗರಾಜ ಹರಿಕಂತ್ರ‌ ವೆಂಕಟ್ರಮಣ ಖಾರ್ವಿ, ರಾಮಚಂದ್ರ ಖಾರ್ವಿ, ಹರೀಶ ಮೊಗೇರ, ಅಶೋಕ ಮೊಗೇರ ಉಮೇಶ ಮೊಗೇರ ಮುಂತಾದವರು ಇದ್ದರು.

ಹೆಜ್ಜೇನು ದಾಳಿ, ಐವರು ಅಸ್ವಸ್ಥ

ಭಟ್ಕಳ: ತಾಲೂಕಿನ ಬೆಳಕೆ ಜನತಾ ಕಾಲನಿ ಬಳಿ ಭಾನುವಾರ ಬೆಳಗ್ಗೆ ಐವರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಎಲ್ಲರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮನೆಯ ಗೇಟ್ ಬಳಿ ನಿಂತಿದ್ದ ವೇಳೆ ಹೆಜ್ಜೇನು ಹಿಂಡು ಪರಮೇಶ್ವರಿ ಮಂಜುನಾಥ ಮೊಗೇರ, ಮಂಜುನಾಥ ಮಾಸ್ತಿ ಮೊಗೇರ, ಭರತ್ ರಾಮಚಂದ್ರ ಮೊಗೇರ, ಸತೀಶ ಕರಿಯಪ್ಪ ನಾಯ್ಕ ಹಾಗೂ ಮತ್ತೋರ್ವರಿಗೆ ದಾಳಿ ಮಾಡಿ ಕಚ್ಚಿದೆ.ತಕ್ಷಣ ಎಲ್ಲರನ್ನೂ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇವರಲ್ಲಿ ತೀವ್ರ ಅಸ್ವಸ್ಥಗೊಂಡ ಮಂಜುನಾಥ ಮೊಗೇರ, ಭರತ ಮೊಗೇರ ಹಾಗೂ ಮತ್ತೋರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Share this article