ಕನ್ನಡಪ್ರಭ ವಾರ್ತೆ ಮೈಸೂರುಮಾನಸಿಕ ಒತ್ತಡ ಕಡಿಮೆ ಮಾಡಲು ಸಂಗೀತ ಸಹಕಾರಿ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯ ಡಾ.ಕೆ.ಆರ್. ಮಂಜುನಾಥ್ ಹೇಳಿದರು.ನಕ್ಷತ್ರ ಅಕಾಡೆಮಿ ಆಫ್ ಆರ್ಟ್ಸ್ ಮಲ್ಟಿ ಟ್ಯಾಲೆಂಟ್ ಕ್ರಿಯೇಟರ್ಸ್ ವತಿಯಿಂದ ಕುವೆಂಪುನಗರದ ಸರಸ್ವತಿ ರಸ್ತೆಯ ನಕ್ಷತ್ರ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸುಗಮ ಸಂಗೀತ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಕಲಾವಿದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸದ ಒತ್ತಡ. ಆರೋಗ್ಯದ ದೃಷ್ಟಿಯಿಂದ ಇದನ್ನು ಕಡಿಮೆ ಮಾಡಿಕೊಳ್ಳಬೇಕು. ಸಂಗೀತ ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು. ಇದಲ್ಲದೇ ಸಮಾಜದಲ್ಲಿ ಇತರರೊಂದಿಗೆ ಬೆರೆಯಲು ಅವಕಾಶ ಸಿಗುತ್ತದೆ. ಹೀಗಾಗಿ ಇಲ್ಲಿ ಗುಣಮಟ್ಟದ ತರಬೇತಿ ನೀಡಿ ಎಂದು ಅವರು ಸಲಹೆ ನೀಡಿದರು.ಮತ್ತೊರ್ವ ಮುಖ್ಯ ಅತಿಥಿ ಕರ್ನಾಟಕ ಪೊಲೀಸ್ ಅಕಾಡೆಮಿಯ ಡಿವೈಎಸ್ಪಿ ಕುಮಾರ್ ಮಾತನಾಡಿ, ಅಕಾಡೆಮಿಯಲ್ಲೂ ಪೊಲೀಸರಿಗೆ ಒತ್ತಡ, ವೈಯಕ್ತಿಕ ಹಾಗೂ ಆರ್ಥಿಕ ನಿರ್ವಹಣೆ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.ಪ್ರತಿಯೊಂದು ಕೆಲಸದಲ್ಲೂ ಒತ್ತಡ ಸಹಜ. ಸಂಗೀತ, ಪ್ರಕೃತಿ ವೀಕ್ಷಣೆ, ಪ್ರವಾಸ ಸೇರಿದಂತೆ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಒತ್ತಡದಿಂದ ಹೊರಬರಲು ಸಾಧ್ಯ ಎಂದು ಅವರು ಹೇಳಿದರು.ಸಂಗೀತ ತರಬೇತಿಯಲ್ಲಿ ಅಸಭ್ಯ ಗೀತೆಗಳನ್ನು ಕಲಿಸಬೇಡಿ. ಬದಲಿಗೆ ರೌದ್ರ, ಶೋಕ, ಶೃಂಗಾರ ಸೇರಿದಂತೆ ಎಲ್ಲಾ ರೀತಿಯ ರಸಗಳಲ್ಲಿ ಹಾಡುವುದನ್ನು ಕಲಿಸಿ ಎಂದು ಅವರು ಸಲಹೆ ಮಾಡಿದರು.ಮುಖ್ಯ ಅತಿಥಿಯಾಗಿದ್ದ ಕೆಎಂಪಿಕೆ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಉತ್ತಮ ಗಾಯಕ- ಗಾಯಕಿಯರನ್ನು ತಯಾರು ಮಾಡಿ ಎಂದರು.ವಿಶೇಷ ಆಹ್ವಾನಿತರಾಗಿದ್ದ ಮನೋಶಾಸ್ತ್ರಜ್ಞೆ ಡಾ. ರೇಖಾ ಮನಶಾಂತಿ ಮಾತನಾಡಿ, ಸಂಗೀತ ಥೆರಪಿ ಮೂಲಕ ಆರೋಗ್ಯ ಸುಧಾರಿಸುತ್ತಿದೆ ಎಂಬುದು ವೈದ್ಯಕೀಯ ಕ್ಷೇತ್ರದಲ್ಲಿ ಸಾಬೀತಾಗಿದೆ. ಹೀಗಾಗಿ ನಾನು ಯಾವುದೇ ಕಾರ್ಯಕ್ರಮಗಳಲ್ಲಿ ಆದರೂ ಕೂಡ ಮನಸ್ಸಿಗೆ ಶಾಂತಿ ನೀಡುವ ವಿಷಯಗಳ ಬಗ್ಗೆ ಸಲಹೆ ಮಾಡುತ್ತೇನೆ ಎಂದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ಎಲ್ಲಾ ರೀತಿಯ ಸಂಗೀತ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಗುತ್ತಿದೆ. ಇವತ್ತು ಗಾಯಕರಿಗೆ ಹತ್ತಾರು ವೇದಿಕೆಗಳಲ್ಲಿ ಅವಕಾಶ ಸಿಗುತ್ತಿದೆ. ಟಿವಿಯ ರಿಯಾಲಿಟಿ ಶೋಗಳಲ್ಲೂ ಕೂಡ ಹೆಸರು ಮಾಡಬಹುದು ಎಂದರು.ತರಬೇತಿ ಸಂಯೋಜಕರಾದ ಖ್ಯಾತ ಗಾಯಕ ಅಮ್ಮ ರಾಮಚಂದ್ರ ಮಾತನಾಡಿ, ಸೋಲೇ ಕೊನೆಯಲ್ಲ. ಸೋಲಿನ ಮೂಲಕವೇ ಗೆಲುವಿನ ದಾರಿ ಹಿಡಿಯಬೇಕು. ಆದ್ದರಿಂದ ಪ್ರತಿಯೊಬ್ಬರೂ ಸಿಗುವ ಅವಕಾಶಗಳನ್ನು ಬಳಸಿಕೊಂಡು ಮುಂದೆ ಬರಬೇಕು ಎಂದರು.ಈ ತರಬೇತಿಯಲ್ಲಿ ಮೂಲಧಾಟಿಯ ಜನಪದದಿಂದ ಹಿಡಿದು ಚಲನಚಿತ್ರ ಗೀತೆಗಳವರೆಗೆ, ಬಸವಣ್ಣನವರ ವಚನದಿಂದ ಹಿಡಿದು, ಕುವೆಂಪು, ಬುದ್ಧ, ಅಂಬೇಡ್ಕರ್ ಅವರ ಗೀತೆಗಳವರೆಗೆ ಎಲ್ಲವನ್ನು ಕಲಿಸಲಾಗುತ್ತದೆ ಎಂದರು.ಸ್ತ್ರೀರೋಗ ತಜ್ಞೆ ಡಾ.ರೇಖಾ ಅರುಣ್ ಅಧ್ಯಕ್ಷತೆ ವಹಿಸಿದ್ದರು. ಎಂಎಂಕೆಆರ್ಎಸ್ಬಿ ಅಧ್ಯಕ್ಷೆ ಮೋಹನ ಮಾಧುರ್ಯ ಸ್ವಾಗತಿಸಿದರು. ಅಪೂರ್ವ ಪ್ರಾರ್ಥಿಸಿದರು. ಶೋಭಾರಾಣಿ ಮೊದಲಾದವರು ಇದ್ದರು.
ಇದೇ ಸಂದರ್ಭದಲ್ಲಿ ಗಾಯಕರಾದ ಆಶಾ ಮಹದೇವ್, ಪ್ರೇಮಲತಾ, ಭಾರ್ಗವಿ, ಪ್ರಿಯಾ, ಡಾ. ಸೌಮ್ಯಾ, ಗೌರಿ ಒಸ್ಲಾಲ್, ಅಪೂರ್ವಾ, ಗುರುರಾಜ್, ಕುಮಾರಸ್ವಾಮಿ, ಆರ್. ಲಕ್ಷ್ಮಣ್, ಆದಿಲ್ ಪಾಷ, ನಾರಾಯಣಸ್ವಾಮಿ, ಪ್ರೇಮ್ ಅವರನ್ನು ಸನ್ಮಾನಿಸಲಾಯಿತು.