ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಇಲ್ಲಿನ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ)ಗೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಕಿರಣ್ ಗೌಡ, ನಾಗೇಶ್ ಪೈಪೋಟಿ ನಡುವೆ ಪಕ್ಷೇತರ ಸದಸ್ಯ ಪಿ.ಶಶಿಧರ್ ಆಲಿಯಾಸ್ ದೀಪು ಹೆಸರು ಕೇಳಿ ಬರುತ್ತಿದೆ.!೨೦೧೯ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ೧೩ ಸ್ಥಾನಗಳಲ್ಲಿ ಗೆದ್ದು ಭರ್ಜರಿ ಜಯಭೇರಿ ಭಾರಿಸಿದ್ದು, ಕಾಂಗ್ರೆಸ್ ೮ ಸ್ಥಾನ, ಎಸ್‌ಡಿಪಿಐ ಹಾಗೂ ಪಕ್ಷೇತರರೊಬ್ಬರು ಗೆದ್ದಿದ್ದರು. ಅಲ್ಲದೆ ೩೦ ತಿಂಗಳ ಕಾಲ ಬಿಜೆಪಿ ಅಧಿಕಾರ ಅನುಭವಿಸಿತ್ತು. ಪುರಸಭೆಯಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಅನುಭವಿಸಿದ ಬಿಜೆಪಿಗೆ ಮತ್ತೆ ಅಧಿಕಾರ ಗುದ್ದುಗೆ ಏರಲು ಬಿಜೆಪಿ ಭಾರಿ ತ್ರಾಸ ಪಡೆಬೇಕಾದ ಪರಿಸ್ಥಿತಿಗೆ ಬಂದಿದೆ. ಅದು ಬಿಜೆಪಿಯ ಇಬ್ಬರು ಸದಸ್ಯರಿಂದಲೇ!
ಪುರಸಭೆಯಲ್ಲಿ ಬಿಜೆಪಿ ೧೩ ಮಂದಿ ಗೆದ್ದಿದ್ದರು. ಪಕ್ಷೇತರ ಸದಸ್ಯ ಪಿ.ಶಶಿಧರ್ ಆಲಿಯಾಸ್ ದೀಪು ಸೇರಿ ೧೪ ಮಂದಿಯಲ್ಲಿ ಬಿಜೆಪಿ ಸದಸ್ಯರಾದ ರಮೇಶ್ ಹಾಗೂ ರಾಣಿ ಲಕ್ಷ್ಮೀ ದೇವಿ, ಪಕ್ಷೇತರ ಸದಸ್ಯ ಪಿ.ಶಶಿಧರ್ ಆಲಿಯಾಸ್ ದೀಪು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಪುರಸಭೆಯಲ್ಲಿ ೧೪ ಸದಸ್ಯರ ಬಲ ಹೊಂದಿದ್ದ ಬಿಜೆಪಿಯಲ್ಲೀಗ ೧೧ ಸದಸ್ಯರು ಪಕ್ಕಾ ಉಳಿದಿದ್ದಾರೆ. ಬಿಜೆಪಿ ಗೆಲ್ಲಲು ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಇಬ್ಬರು ಸದಸ್ಯರ ಬೆಂಬಲ ಸಿಕ್ಕರೆ ಮಾತ್ರ ಬಿಜೆಪಿಗೆ ಅಧಿಕಾರ ಪಕ್ಕಾ!ಬಿಜೆಪಿ ಸದಸ್ಯ ರಮೇಶ್‌ಗೆ ಬಿಜೆಪಿ ಪಕ್ಷದ ಒಳ ಒಪ್ಪಂದದಂತೆ ಅಧ್ಯಕ್ಷ ಸ್ಥಾನ ಸಿಗಲಿಲ್ಲ ಎಂದು ಆಕ್ರೋಶಗೊಂಡು ಬಿಜೆಪಿಯಿಂದ ದೂರ ಸರಿದು ರೊಚ್ಚಿಗೆದ್ದಿರುವ ಕಾರಣ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಘೋಷಣೆಯಾಗಿದ್ದರೂ ಬಿಜೆಪಿಯ ವರಿಷ್ಠರು ಯಾರು ಹೋಗಿ ಭೇಟಿ ಮಾಡಿಲ್ಲ. ಬಿಜೆಪಿಯ ಸ್ಥಳೀಯ ಮುಖಂಡರಿಗೆ ಪಾಠ ಕಲಿಸುವ ಸಮಯ ಬಂದಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಬಿಜೆಪಿ ಸದಸ್ಯೆ ರಾಣಿ ಲಕ್ಷ್ಮೀ ದೇವಿ ಪತಿ ಪುರಸಭೆ ಮಾಜಿ ಸದಸ್ಯ ಬಸವರಾಜು ಕೂಡ ಬಿಜೆಪಿಯಿಂದ ದೂರ ಸರಿದಿದ್ದಾರೆ. ಅವರ ಮನವೊಲಿಸುವ ಕೆಲಸ ಬಿಜೆಪಿಯ ಕೆಲ ಮುಖಂಡರು ಕೆಲಸ ಮಾಡಿದ್ದಾರೆ ಎನ್ನಲಾಗಿದ್ದು, ಬಿಜೆಪಿಯಿಂದ ದೂರ ಸರಿದಿದ್ದಾರೆ ಆದರೆ ಕಾಂಗ್ರೆಸ್ ಬೆಂಬಲ ಎಂದು ಬಹಿರಂಗವಾಗಿ ಹೇಳಿಲ್ಲ.
ಪಕ್ಷೇತರ ಸದಸ್ಯ ಪಿ.ಶಶಿಧರ್ ಆಲಿಯಾಸ್ ದೀಪು ಹಾಗೂ ಬಿಜೆಪಿ ಸದಸ್ಯೆ ರಾಣಿ ಲಕ್ಷ್ಮೀ ದೇವಿ ಅವರ ನಡೆ ಕಾಂಗ್ರೆಸ್ ಕಡೆಗೋ ಅಥವಾ ಬಿಜೆಪಿ ಕಡೆಗೋ ಎಂದು ಬಾಯಿ ಬಿಟ್ಟಿಲ್ಲ. ಇವರಿಬ್ಬರ ನಡೆ ಮೇಲೆ ಪುರಸಭೆ ಅಧಿಕಾರ ಯಾರ ಕೈಗೆ ಸಿಗಲಿದೆಯೋ ಕಾದು ನೋಡಬೇಕು.ಬಿಸಿಎಂ (ಬಿ) ಅಧ್ಯಕ್ಷ ಸ್ಥಾನ ಇದೇ ಫಸ್ಟ್ ಆ್ಯಂಡ್ ಲಾಸ್ಟ್? ಒಳ ಒಪ್ಪಂದದ ಮೂಲಕ ಅಧಿಕಾರ ಹಿಡಿಯಲು ಕಮಲ, ಕೈ ಪ್ರಯತ್ನ?ಪುರಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ (ಬಿ) ಮೀಸಲು ಬಂದಿದೆ. ಈ ಅವಧಿಯಲ್ಲಿ ಬಿಸಿಎಂ (ಬಿ) ಗೆದ್ದವರು ಅಧ್ಯಕ್ಷರಾಗುವುದು ಫಸ್ಟ್ ಆ್ಯಂಡ್ ಲಾಸ್ಟ್.!ಬಿಸಿಎಂ(ಬಿ) ಅಧ್ಯಕ್ಷ ಸ್ಥಾನಕ್ಕೆ ಮೀಸಲು ಬಂದು ೨೬ ವರ್ಷಗಳ ನಂತರ ಬಂದಿದ್ದು, ಈ ಅವಧಿಯಲ್ಲಿ ಅಧ್ಯಕ್ಷರಾಗಲು ಬಿಜೆಪಿಯಲ್ಲಿ ಇಬ್ಬರು, ಕಾಂಗ್ರೆಸ್‌ನಲ್ಲಿ ಒಬ್ಬರು, ಪಕ್ಷೇತರ ಸದಸ್ಯರಿಗೆ ಅವಕಾಶ ಸಿಕ್ಕಿದೆ. ಬಿಸಿಎಂ (ಬಿ)ನಲ್ಲಿ ಗೆದ್ದರೂ ಮುಂದೆ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಾದರೂ ಅಧ್ಯಕ್ಷರಾಗುವ ಅವಕಾಶ ಇಲ್ಲವೇ ಇಲ್ಲ ಎಂಬ ಆತಂಕ ಬಿಸಿಎಂ (ಬಿ)ನಲ್ಲಿ ಗೆದ್ದವರಿಗಂತೂ ಇದೆ.!
ಮುಂದೇನಾದರೂ ಬಿಸಿಎಂ(ಬಿ) ಬರೋದು ಸದ್ಯಕ್ಕೆ ಡೌಟು, ಬಂದರೂ ಬಿಸಿಎಂ(ಬಿ) ಮಹಿಳಾ ಬಂದರೂ ಪುರುಷರಿಗೆ ಮೀಸಲು ಬಂದಷ್ಟು ಖದರ್ ಇರುವುದಿಲ್ಲ ಎಂಬ ಮಾತಿದೆ. ಹಾಗಾಗಿ ಪುರಸಭೆ ಅಧ್ಯಕ್ಷರಾಗಲು ನಾಲ್ಕು ಮಂದಿ ಇದ್ದು, ಒಳ ಒಪ್ಪಂದದ ಪ್ರಕಾರ ಅಧ್ಯಕ್ಷರಾಗಲು ಬಿಜೆಪಿ ಹಾಗೂ ಕಾಂಗ್ರೆಸ್ ಮುಂದಾಗಿವೆ ಎನ್ನಲಾಗಿದೆ. ಇದೆಲ್ಲದಕ್ಕು ಉತ್ತರ ಸಿಗೋದು ಸೆ.೪ಕ್ಕೆ.