ಶಿರಸಿ: ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರ ಜಮೀನುಗಳು ವಕ್ಫ್ ಮಂಡಳಿಯ ಹೆಸರಿಗೆ ಆಗಿವೆ. ಈಗ ಬಿಜೆಪಿಯವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಬಿಜೆಪಿ ವಿರುದ್ಧ ಕಿಡಿಕಾರಿದರು.
ಮಂಗಳವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ನಿಜವಾಗಿ ಯಾವುದು ವಕ್ಫ್ ಆಸ್ತಿ ಇದೆಯೋ, ಅದಕ್ಕೆ ಸಿಗಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ರೈತರ ಜಮೀನು ವಕ್ಫ್ ಬೋರ್ಡ್ ಹೆಸರಿನಲ್ಲಿ ಆಗಿದ್ದನ್ನು ಪರಿಶೀಲನೆ ಮಾಡಲಾಗುತ್ತಿದೆ. ನಿಜವಾಗಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದ ಅವರು, ವಕ್ಫ್ ಬೋರ್ಡ್ ವಿಷಯ ಎತ್ತಿದ್ದು ಬಿಜೆಪಿಯವರು. ಮುಡಾ ಹಾಗೂ ವಾಲ್ಮೀಕಿ ಪ್ರಕರಣ ನ್ಯಾಯಾಲಯದಲ್ಲಿದೆ. ಅದರ ಕುರಿತು ಹೆಚ್ಚು ಮಾತನಾಡುವುದು ಸೂಕ್ತವಲ್ಲ. ಈಗಾಗಲೇ ಮುಖ್ಯಮಂತ್ರಿ ಹಾಗೂ ಅವರ ಪತ್ನಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ವಾಲ್ಮೀಕಿ ಪ್ರಕರಣದ ತನಿಖೆಯೂ ಪ್ರಗತಿಯಲ್ಲಿದೆ ಎಂದರು.ರಸ್ತೆಗಳ ದುಸ್ಥಿತಿ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಗ್ಯಾರಂಟಿಗೆ ಸಾವಿರ ಕೋಟಿ ಬೇಕಾಗುತ್ತದೆ. ಹೀಗಾಗಿ ಅಭಿವೃದ್ಧಿಗೆ ಕಾಮಗಾರಿಗೆ ಸಂಪನ್ಮೂಲ ಕ್ರೋಡೀಕರಣ ನಡೆಯುತ್ತಿದೆ. ಇನ್ನು ೧೫ ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ. ಮಳೆಗಾಲದಲ್ಲಿ ರೈತರ ಬೆಳೆಹಾನಿಯಾದ ಬಗ್ಗೆ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲನೆಯ ನಂತರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಶಿರಸಿ ಜಿಲ್ಲೆ ಆಗುವುದಾದರೆ ಆಗಲಿ. ನನ್ನದು ಎಂದಿಗೂ ವಿರೋಧವಿಲ್ಲ. ಜನರಿಗೆ, ಆಡಳಿತಕ್ಕೆ ಅನುಕೂಲ ಆಗುವುದಾದರೆ ನಿಶ್ಚಿತವಾಗಿ ಆಗಲಿ. ಒಬ್ಬೊಬ್ಬರು ಒಂದೊಂದು ಕಡೆ ಜಿಲ್ಲೆಯಾಗಲಿ ಎನ್ನುತ್ತಿದ್ದಾರೆ, ನಾನು ಯಾವತ್ತೂ ಹಳಿಯಾಳ ಜಿಲ್ಲೆಯಾಗಲಿ ಎಂದಿಲ್ಲ. ಈ ಬಗ್ಗೆ ಜನಾಭಿಪ್ರಾಯ ಮೂಡಬೇಕು. ಆಡಳಿತಾತ್ಮಕವಾಗಿ ಜನರಿಗೆ ಅನುಕೂಲವಾಗುವಂತಹ ಜಾಗದಲ್ಲಿ ಜಿಲ್ಲೆಯಾಗಬೇಕು. ಎಲ್ಲವನ್ನೂ ಮನಗಂಡು ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು. ಶಿರಸಿ ಜಿಲ್ಲೆಯಾಗಲು ಹೊಸದಾಗಿ ಮೂಲ ಸೌಕರ್ಯ ಬೇಕಾಗುತ್ತದೆ. ಎಲ್ಲವೂ ಸರ್ಕಾರಕ್ಕೆ ವೆಚ್ಚದಾಯಕವಾಗುತ್ತದೆ. ನೂರಾರು ಕೋಟಿ ರು. ಖರ್ಚು ಆಗುತ್ತದೆ. ಒಮ್ಮತದ ಜನಾಭಿಪ್ರಾಯ ಮೂಡಿದರೆ ಜಿಲ್ಲೆ ಮಾಡಬಹುದು ಎಂದು ಸ್ಪಷ್ಟಪಡಿಸಿದರು.ಈ ವೇಳೆ ರಮೇಶ ದುಭಾಶಿ, ಕಾಂಗ್ರೆಸ್ ಹಿರಿಯ ಮುಖಂಡ ನಾಗರಾಜ ನಾರ್ವೇಕರ, ಯುವ ಮುಖಂಡ ವಿಶ್ವಾಸ ನಾಯ್ಕ ಮತ್ತಿತರರು ಇದ್ದರು.23ರಂದು ಗ್ರಾಪಂ ಸ್ಥಾನಗಳಿಗೆ ಉಪಚುನಾವಣೆ
ಕಾರವಾರ: ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ,ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕುಗಳ 15 ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸದಸ್ಯ ಸ್ಥಾನ ತುಂಬಲು ನ. 23ರಂದು ಉಪ ಚುನಾವಣೆ ನಡೆಯಲಿದೆ.ನ. 6ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು, ನ. 12 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ನ. 13ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನ. 15 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದೆ. ಮತದಾನದ ಅವಶ್ಯವಿದ್ದಲ್ಲಿ ನ. 23ರಂದು ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯವಿದ್ದಲ್ಲಿ ನ. 25ರಂದು ನಡೆಸಲಾಗುವುದು. ನ. 26ರಂದು ಬೆಳಗ್ಗೆ 8 ಗಂಟೆಗೆ ಮತಗಳ ಎಣಿಕೆಯು ಆಯಾ ತಾಲೂಕಿನ ಕೇಂದ್ರ ಸ್ಥಳದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.