ಪ್ರೌಢಶಾಲೆಗೆ ಜಾಗ ನೀಡಿದ ದಾನಿಗಳ ಹೆಸರಿಡಿ

KannadaprabhaNewsNetwork | Published : Aug 4, 2024 1:16 AM

ಸಾರಾಂಶ

1992ರಲ್ಲಿ ದೇವಪ್ಪ ಬನಪ್ಪ ಕುಂಬಾರ ಗ್ರಾಮದ ಮಕ್ಕಳ ಶಿಕ್ಷಣದ ಉದ್ದೇಶಕ್ಕಾಗಿ ಗ್ರಾಮದ ಪಕ್ಕದಲ್ಲೇ ಇರುವ ಒಂದು ಎಕರೆ ಜಮೀನನ್ನು ದಾನವಾಗಿ ನೀಡಿದ್ದರು. ಅದಕ್ಕೆ ಕುಟುಂಬದ ಹಿರಿಯರಾದ ಬನಪ್ಪ ದೇವಪ್ಪ ಕುಂಬಾರ ಎಂಬುವವರ ಹೆಸರು ನಾಮಕರಣ ಮಾಡಬೇಕೆಂದು ಕುಟುಂಬಸ್ಥರು ಪಟ್ಟು ಹಿಡಿದ್ದಾರೆ.

ಕುಂದಗೋಳ:

ತಾಲೂಕಿನ ಹಿರೇನರ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಜಾಗವನ್ನು ದಾನವಾಗಿ ನೀಡಿದ ಬನಪ್ಪ ದೇವಪ್ಪ ಕುಂಬಾರ ಅವರ ಹೆಸರು ನಾಮಕಾರಣ ಮಾಡಬೇಕು. ಇಲ್ಲದೇ ಇದ್ದರೆ ಶಾಸಕರ ಹೆಸರಿನಲ್ಲಿ ಪತ್ರ ಬರೆದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗುಳಪ್ಪ ದೇವಪ್ಪ ಕುಂಬಾರ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆ ಸಿಎಸ್‌ಆರ್ ಯೋಜನೆಯಡಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾದ ನೂತನ ಕಟ್ಟಡಕ್ಕೆ 1992ರಲ್ಲಿ ನಮ್ಮ ತಂದೆ ದೇವಪ್ಪ ಬನಪ್ಪ ಕುಂಬಾರ ಗ್ರಾಮದ ಮಕ್ಕಳ ಶಿಕ್ಷಣದ ಉದ್ದೇಶಕ್ಕಾಗಿ ಗ್ರಾಮದ ಪಕ್ಕದಲ್ಲೇ ಇರುವ ಒಂದು ಎಕರೆ ಜಮೀನನ್ನು ದಾನವಾಗಿ ನೀಡಿದ್ದರು. ಅದಕ್ಕೆ ನಮ್ಮ ಕುಟುಂಬದ ಹಿರಿಯರಾದ ಬನಪ್ಪ ದೇವಪ್ಪ ಕುಂಬಾರ ಎಂಬುವವರ ಹೆಸರು ನಾಮಕರಣ ಮಾಡಬೇಕು ಎಂದು ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರಿಗೆ ಕುಟುಂಬದ ಸದಸ್ಯರೆಲ್ಲರೂ ಮನವಿ ನೀಡಿದ್ದೇವೆ. ಹೀಗಿದ್ದರೂ ನಮ್ಮ ಮನವಿಗೆ ಸ್ಪಂದಿಸದೆ ನಾನು ಗ್ರಾಮದಲ್ಲಿ ಇರದೇ ಇರುವ ವೇಳೆ ರಾತ್ರೋ ರಾತ್ರಿ ನೂತನ ಕಟ್ಟಡಕ್ಕೆ ಸರ್ಕಾರಿ ಪ್ರೌಢಶಾಲೆ ಎಂದು ಹೆಸರು ಬರೆಸಲಾಗಿದೆ. ಈ ವಿಷಯ ನಮ್ಮ ಗಮನಕ್ಕೆ ಬಂಡ ಕೂಡಲೇ ಉದ್ಘಾಟನೆ ನಿಲ್ಲಿಸಿ ಕೋರ್ಟ್ ಮೊರೆ ಹೋಗಿದ್ದೇವೆ ಎಂದರು.

ಈ ಪ್ರಕರಣ ಇಂದಿಗೂ ಇತ್ಯರ್ಥವಾಗದೇ ಇದ್ದರೂ ಸಹ ನಮ್ಮ ಹಾಗೂ ಕುಟುಂಬದವರ ಗಮನಕ್ಕೆ ತರದೇ ಆ. 5ರಂದು ಈ ಪ್ರೌಢಶಾಲೆ ಉದ್ಘಾಟನೆಗೆ ಇಲಾಖೆ ಮುಂದಾಗಿದೆ. ಸೌಜನ್ಯಕ್ಕೂ ನಮ್ಮನ್ನು ಕರೆಯದಿರುವುದು ನಮಗೆ ತೀವ್ರ ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಕುಟುಂಬದಿಂದ ಶಾಲಾ ತರಗತಿ ನಡೆಸಲು ಆಕ್ಷೇಪವಿಲ್ಲ, ಇದಕ್ಕೆ ಸಂಬಂಧಿಸಿದ ವಿಷಯ ಕೋರ್ಟಿನಲ್ಲಿ ಬಾಕಿ ಇರುವುದರಿಂದ ಹಾಗೂ ತರಗತಿ ನಡೆಸಬೇಕಾದರೆ ಸಂಬಂಧಿಸಿದ ಇಲಾಖೆ ನಮ್ಮ ಕುಟುಂಬಕ್ಕೆ ನಮ್ಮ ಹಿರಿಯರ ಹೆಸರು ನಾಮಕರಣ ಮಾಡುತ್ತೇವೆಂದು ಲಿಖಿತ ರೂಪದಲ್ಲಿ ನೀಡಿದಲ್ಲಿ ನಮ್ಮ ಸಮ್ಮತಿ ಇದೆ. ಇದರಲ್ಲಿ ಗ್ರಾಪಂ ಅಧ್ಯಕ್ಷರು, ಸ್ಥಳೀಯ ಬಿಜೆಪಿ ಕಾರ್ಯಕರ್ತರ ಕೈವಾಡವಿರುವುದಾಗಿ ಗಂಭೀರ ಆರೋಪ ಮಾಡಿದರು. ಮಕ್ಕಳ ಕಲಿಕೆಗೆ ಅನಕೂಲವಾಗಲಿ ಎಂದು ಸ್ಥಳೀಯರು ಸೇರಿ ಸಾಂಕೇತಿಕವಾಗಿ ಶಾಲೆಯ ಉದ್ಘಾಟನೆ ಮಾಡುತ್ತಿದ್ದಾರೆ. ಪ್ರೌಢಶಾಲೆಗೆ ದಾನಿಗಳ ಹೆಸರಿಡುವ ಕುರಿತು ಕೆಲ ಗೊಂದಲಗಳಿವೆ. ಮನವಿ ಸಲ್ಲಿಸಿದರೆ ಕ್ರಮಕೈಗೊಳ್ಳಲು ಹಿರಿಯ ಅಧಿಕಾರಿಗಳ ಬಳಿ ಚರ್ಚಿಸಲಾಗುವುದು ಎಂದು ಬಿಇಒ ಮಹಾದೇವಿ ಮಾಡಲಗೇರಿ ತಿಳಿಸಿದ್ದಾರೆ.

Share this article