ಕೊಪ್ಪಳ : ಅಂಗಡಿ, ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು ಎನ್ನುವ ನಿಯಮ ಮೀರಿ ಆಂಗ್ಲ ಭಾಷೆಯಲ್ಲಿರುವ ನಾಮಫಲಕಗಳಿಗೆ ಮಸಿ ಬಳಿದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ನಾಮಫಲಕಗಳು ಶೇ.60 ರಷ್ಟು ಕನ್ನಡದಲ್ಲಿಯೇ ಇರಬೇಕು ಎನ್ನುವ ನಿಯಮ ಮಾಡಿದ್ದು, ಇದನ್ನು ಅನುಷ್ಠಾನ ಮಾಡುವುದಕ್ಕೆ ನೀಡಿದ್ದ ಗಡುವು ಮುಗಿದರೂ ಕೊಪ್ಪಳ ನಗರದಲ್ಲಿ ಅನುಷ್ಠಾನ ಮಾಡದೆ ಇರುವ ಕುರಿತು ಆಕ್ರೋಶ ವ್ಯಕ್ತಪಡಿಸಲಾಯಿತು.ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ಪ್ರಾರಂಭವಾದ ಪ್ರತಿಭಟನೆ ದಾರಿಯುದ್ದಕ್ಕೂ ಇದ್ದ ಆಂಗ್ಲ ನಾಮಫಲಕಗಳಿಗೆ ಮಸಿ ಬಳಿಯುವ ಮೂಲಕ ಪ್ರತಿಭಟನೆ ಪ್ರಾರಂಭಿಸಲಾಯಿತು. ಪ್ರಾರಂಭದಲ್ಲಿ ಸಾಂಕೇತಿಕವಾಗಿ ಮಸಿ ಬಳಿಯುವ ಮೂಲಕ ಪ್ರತಿಭಟನೆ ಮಾಡಿದ ಕಾರ್ಯಕರ್ತರು ಅಂಗಡಿಗಳಿಗೆ ತೆರಳಿ ಕನ್ನಡದ ಪರವಾಗಿ ನೂತನವಾಗಿ ಜಾರಿ ಮಾಡಿರುವ ಕಾಯ್ದೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಕೇಂದ್ರಿಯ ಬಸ್ ನಿಲ್ದಾಣದ ಮುಂದುಗಡೆ ಇರುವ ಶ್ರೀಕನಕದಾಸ ವೃತ್ತದಿಂದ ಶ್ರೀಬಸವೇಶ್ವರ ವೃತ್ತದವರೆಗೂ ಕೊಪ್ಪಳ ಜಿಲ್ಲಾ ಘಟಕದಿಂದ ಕರ್ನಾಟಕ ಸರ್ಕಾರದ ಆದೇಶದಂತೆ ಕಡ್ಡಾಯ ಕನ್ನಡ ನಾಮಫಲಕವನ್ನು ಜಿಲ್ಲೆಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಬೃಹತ್ ಜನಜಾಗೃತಿ ಆಂದೋಲನ ನಡೆಸಲಾಯಿತು.
ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪೋ.ಪಾಟೀಲ, ಜಿಲ್ಲಾಧ್ಯಕ್ಷ ಬಿ. ಗಿರೀಶಾನಂದ ಜ್ಞಾನಸುಂದರ, ಮಹಿಳಾ ಜಿಲ್ಲಾಧ್ಯಕ್ಷೆ ಭುವನೇಶ್ವರಿ ಮೊಟಗಿ ಸಂಜಯ ಖಟವಟೆ, ಮಂಜುನಾಥಗೌಡ ಆನೆಗುಂದಿ. ಚಂದ್ರಶೇಖರ ಶೆಟ್ಟಿ, ರಮೇಶ ಹಾಲವರ್ತಿ, ಪ್ರಕಾಶ ಕುಷ್ಟಗಿ, ಪ್ರಶಾಂತ ನಾಯಕ, ಶಿವಕುಮಾರ ಗೌಡರ, ವಿಜಯ ಮಾಳಶೆಟ್ಟಿ, ಆನಂದ ಬಂಡಿ ಸೇರಿದಂತೆ ಮೊದಲಾದವರು ಇದ್ದರು.