ಹಾವೇರಿ: ಹುಕ್ಕೇರಿಮಠದ ಲಿಂ.ಶಿವಬಸವ ಮಹಾಶಿವಯೋಗಿಗಳವರ 79ನೇ ಹಾಗೂ ಲಿಂ. ಶಿವಲಿಂಗ ಮಹಾಶಿವಯೋಗಿಗಳವರ 16ನೇ ಪುಣ್ಯಸ್ಮರಣೋತ್ಸವ ಪ್ರಯುಕ್ತ ಜ. 5ರಿಂದ ಜ.10ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಹುಕ್ಕೇರಿಮಠ ನಮ್ಮೂರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಲಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ನಗರದ ಹುಕ್ಕೇರಿಮಠದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ಐತಿಹಾಸಿಕ ಹಾಗೂ ಚಾರಿತ್ರಿಕ ಹಿನ್ನೆಲೆಯುಳ್ಳ ಹಾವೇರಿ ಹುಕ್ಕೇರಿಮಠ ಘನತೆ ಗೌರವವನ್ನು ಹೊಂದಿದೆ. ಮಹಾತಪಸ್ವಿಗಳಾದ ಶಿವಬಸವ ಸ್ವಾಮೀಜಿ, ನಡೆದಾಡುವ ದೇವರು ಆದ ಶಿವಲಿಂಗ ಸ್ವಾಮೀಜಿ ಸಾಮಾಜಿಕ, ಶೈಕ್ಷಣಿಕ, ದಾಸೋಹಕ್ಕೆ ಹೆಸರಾದವರು. ಅಂತಹ ಉಭಯ ಶ್ರೀಗಳವರ ಪುಣ್ಯಸ್ಮರಣೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಜ.5ರಂದು ಬೆಳಗ್ಗೆ 8.30ಕ್ಕೆ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಶ್ರೀ ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಹಾಗೂ ಸದಾಶಿವ ಮಹಾಸ್ವಾಮಿಗಳ ನೇತೃತ್ವದಲ್ಲಿ ಷಟಸ್ಥಲ ಧ್ವಜಾರೋಹಣ ನಡೆಯಲಿದೆ. ಅಂದು ಸಂಜೆ 6.30ಕ್ಕೆ ಶಿವಲಿಂಗೇಶ್ವರ ಮಹಿಳಾ ಕಾಲೇಜು ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಶಿರಸಿ ಬಣ್ಣದಮಠದ ಅಟವಿ ಶಿವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಎರೇಹೊಸಳ್ಳಿ ವೇಮನ ಗುರುಪೀಠದ ವೇಮನಾನಂದ ಸ್ವಾಮೀಜಿ ಸಮ್ಮುಖ ವಹಿಸಲಿದ್ದು, ಕೂಡಲ ಗುರುನಂಜೇಶ್ವರಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಚಿಕ್ಕತೊಟ್ಟಿಲಕೆರೆ ಅಟವಿ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಗುಬ್ಬಿ ತೊರೆಮಠದ ಚಂದ್ರಶೇಖರ ದೇಶಿಕೇಂದ್ರರಿಗೆ ಗೌರವ ಸಮರ್ಪಣೆ ನಡೆಯಲಿದೆ. ಬೆಳಗಾವಿ ವಿಭಾಗೀಯ ಆಯುಕ್ತ ಎಸ್.ಬಿ. ಶೆಟ್ಟೆಣ್ಣನವರ ಹಾಗೂ ಇತರರಿಗೆ ಸನ್ಮಾನ ನಡೆಯಲಿದೆ ಎಂದರು.ಜ. 6ರಂದು ಬೆಳಗ್ಗೆ 11ಕ್ಕೆ ಶಿವಬಸವ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರು ಜಾತ್ರೆ ನಡೆಯಲಿದೆ. ಸಂಜೆ 6.30ಕ್ಕೆ ಶಿರಹಟ್ಟಿಯ ಫಕ್ಕೀರಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖ ವಹಿಸಲಿದ್ದು, ಎಚ್.ಬಿ. ಚೆನ್ನಪ್ಪ, ತಿಮ್ಮೇಶಕುಮಾರ ಸಂಪಳ್ಳಿ ಅವರಿಗೆ ಸನ್ಮಾನ ನಡೆಯಲಿದೆ. ನಾಟಿವೈದ್ಯ ಹನುಮಂತ ಮಳಲಿ ಅವರಿಂದ ಆಹಾರ ಮತ್ತು ಆರೋಗ್ಯ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ.ಜ.7ರಂದು ಸಂಜೆ 6.30ಕ್ಕೆ ಜಡೆ ಸಂಸ್ಥಾನಮಠದ ಡಾ.ಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ವಿಜಯಪುರದ ಬಸವಕುಮಾರ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ. ಮಣಕವಾಡ ಅನ್ನದಾನೀಶ್ವರಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ನೇತೃತ್ವ, ಜಡೆ ಮಠದ ಕುಮಾರಕೆಂಪಿನ ಸಿದ್ದವೃಷಭೇಂದ್ರ ಸ್ವಾಮೀಜಿ ಹಾಗೂ ನಾಗಲಾಪುರದ ನಿರಂಜನಪ್ರಭು ಸ್ವಾಮೀಜಿಗೆ ಗೌರವಾರ್ಪಣೆ, ಹಾವೇರಿ ವಿವಿ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ, ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಂಕಮ್ಮ ಸಂಕಣ್ಣನವರ, ಎಸ್.ಆರ್ ಜೋಳದ ಅವರಿಗೆ ಸನ್ಮಾನ ನಡೆಯಲಿದೆ.ಜ.8ರಂದು ಸಂಜೆ 6.30ಕ್ಕೆ ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ಮಡಿವಾಳ ಗುರುಪೀಠದ ಬಸವಮಾಚಿದೇವ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ. ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ, ರಾವೂರಿನ ಸಿದ್ದಲಿಂಗ ಸ್ವಾಮೀಜಿ, ಶೇಗುಣಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಹೆಡಗಾಪೂರ ಧಾರುಕಲಿಂಗ ಶಿವಾಚಾರ್ಯರಿಗೆ ಗೌರವಾರ್ಪಣೆ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಂಕರ ಬಿದರಿ ಅವರಿಗೆ ಸನ್ಮಾನ ನಡೆಯಲಿದೆ.ಜ.9ರಂದು ಸಂಜೆ 6.30ಕ್ಕೆ ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಮಾದನಹಿಪ್ಪರಗಿ ಅಭಿನವ ಶಿವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿರೂಪಾಕ್ಷಪ್ಪ ಹಾವನೂರ ಅವರಿಗೆ ಸನ್ಮಾನ ನಡೆಯಲಿದೆ ಎಂದರು.ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಶೋಕ ಮಾಗನೂರ, ಮಾಂತಣ್ಣ ಸುರಳಹಳ್ಳಿ, ಅಮೃತಮ್ಮ ಶೀಲವಂತರ, ತಮ್ಮಣ್ಣ ಮುದ್ದಿ, ಗಣೇಶ ಮುಷ್ಠಿ, ಲಲಿತಕ್ಕ ಹೊರಡಿ, ಸಿ.ಜಿ. ತೋಟಣ್ಣವರ, ಶಿವಯೋಗಿ ಬೆನಕೊಪ್ಪ, ಮಾಂತಣ್ಣ ಹಲಗಣ್ಣನವರ, ಗಂಗಣ್ಣ ಮಳಗಿ, ಸೋಮಶೇಖರ ಯಾದವಾಡ, ವೀರಣ್ಣ ಮಹಾರಾಜಪೇಟೆ, ಎಸ್.ಎಸ್. ಮುಷ್ಠಿ, ಜಗದೀಶ ತುಪ್ಪದ, ಆರ್.ಎಸ್. ಮಾಗನೂರ, ಬಿ. ಬಸವರಾಜ, ಶಿವಯೋಗಿ ವಾಲಿಶೆಟ್ಟರ, ರಾಚಪ್ಪ ಲಂಬಿ, ಎಸ್.ಸಿ. ಮರಳಿಹಳ್ಳಿ, ಸುರೇಶ ಮುರಡಣ್ಣನವರ ಇದ್ದರು.ಜ.10ರಂದು ಉಭಯ ಶ್ರೀಗಳ ಭಾವಚಿತ್ರ ಮೆರವಣಿಗೆ: ಪೂಜ್ಯದ್ವಯರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜ. 10ರಂದು ಬೆಳಗ್ಗೆ 8ಕ್ಕೆ ಉಭಯ ಶ್ರೀಗಳವರ ಗದ್ದುಗೆಗೆ ಮಹಾಪೂಜೆ ಹಾಗೂ ಬಿಲ್ವಾರ್ಚನೆ, ಮಧ್ಯಾಹ್ನ 12ಕ್ಕೆ ಮಹಾ ಗಣಾರಾಧನೆ ನಡೆಯಲಿದೆ. ಸಂಜೆ 4ಕ್ಕೆ ಪೂಜ್ಯದ್ವಯರಾದ ಲಿಂ.ಶಿವಬಸವ ಮಹಾಶಿವಯೋಗಿಗಳವರ ಹಾಗೂ ಲಿಂ.ಶಿವಲಿಂಗ ಮಹಾಶಿವಯೋಗಿಗಳವರ ಭಾವಚಿತ್ರ ಮೆರವಣಿಗೆಯು ನಾಡಿನ ಖ್ಯಾತ ಕಲಾ ತಂಡಗಳು ಹಾಗೂ ವಿವಿಧ ವಾದ್ಯ ವೈಭವಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ. ಈ ಉತ್ಸವದಲ್ಲಿ ಸರ್ವ ಭಕ್ತಾದಿಗಳು ಭಾಗವಹಿಸಿ ಶ್ರೀಗಳವರ ದರ್ಶನಾಶೀರ್ವಾದ ಪಡೆದುಕೊಳ್ಳಬೇಕೆಂದು ಸದಾಶಿವ ಸ್ವಾಮೀಜಿ ಹೇಳಿದರು.