22ರಂದು ನಂಜನಗೂಡು ಶ್ರೀಕಂಠೇಶ್ವರಸ್ವಾಮಿಯ ದೊಡ್ಡ ಜಾತ್ರೆ

KannadaprabhaNewsNetwork | Updated : Mar 06 2024, 02:22 AM IST

ಸಾರಾಂಶ

ಮಾ. 22 ರಂದು ಶ್ರೀಕಂಠೇಶ್ವರಸ್ವಾಮಿ ಅವರ ಗೌಥಮಪಂಚ ಮಹಾರಥೋತ್ಸ ಜರುಗಲಿದ್ದು, ರಾಜ್ಯದಲ್ಲಿ ಒಂದೇ ದಿನ 5 ರಥಗಳು ಸಂಚರಿಸುವುದು ಅಪರೂಪ ಇಂತಹ ಜಾತ್ರೆಯನ್ನು ನೋಡಲು ರಾಜ್ಯದ ವಿವಿಧ ಮೂಲೆಗಳಿಂದ ಜನರು ಆಗಮಿಸಲಿದ್ದಾರೆ. ಅವರಿಗೆ ತಾತ್ಕಾಲಿಕ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಅನುಕೂಲ ಮಾಡಿಕೊಡಬೇಕು, ಅಲ್ಲದೆ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು.

ಕನ್ನಡಪ್ರಭ ವಾರ್ತೆ ನಂಜನಗೂಡು ಮಾ. 22 ರಂದು ಜರುಗುವ ಶ್ರೀಕಂಠೇಶ್ವರಸ್ವಾಮಿಯವರ ದೊಡ್ಡ ಜಾತ್ರೆ ಅಂಗವಾಗಿ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಲಿದ್ದು, ಭಕ್ತರ ಅನುಕೂಲಕ್ಕೆ ತಕ್ಕಂತೆ ದೇವಾಲಯದ ಆವರಣದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಕ್ರಮವಹಿಸಿ ಜಾತ್ರೆ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ದೇವಾಲಯದ ದಾಸೋಹ ಭವನದಲ್ಲಿ ನಡೆದ ಜಾತ್ರೆ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮಾ. 22 ರಂದು ಶ್ರೀ ಅವರ ಗೌಥಮಪಂಚ ಮಹಾರಥೋತ್ಸ ಜರುಗಲಿದ್ದು, ರಾಜ್ಯದಲ್ಲಿ ಒಂದೇ ದಿನ 5 ರಥಗಳು ಸಂಚರಿಸುವುದು ಅಪರೂಪ ಇಂತಹ ಜಾತ್ರೆಯನ್ನು ನೋಡಲು ರಾಜ್ಯದ ವಿವಿಧ ಮೂಲೆಗಳಿಂದ ಜನರು ಆಗಮಿಸಲಿದ್ದಾರೆ. ಅವರಿಗೆ ತಾತ್ಕಾಲಿಕ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಅನುಕೂಲ ಮಾಡಿಕೊಡಬೇಕು, ಅಲ್ಲದೆ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು, ಪ್ರಸಾದ ವಿನಿಯೋಗ ಮಾಡಲು ಸೇವಾರ್ಥದಾರರು ಮೊದಲೇ ಪರವಾನಗಿ ಪಡೆಯಬೇಕು ಅಲ್ಲದೆ ಪ್ರಸಾದ ವಿತರಣೆ ಸಂಧರ್ಭದಲ್ಲಿ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು ಜೊತೆಗೆ ಶುಚಿತ್ವವನ್ನು ಕಾಪಾಡಿಕೊಲ್ಳಬೇಕು, ಅಲ್ಲದೆ ಕಪಿಲಾ ನದಿಯ ಆಸು ಪಾಸಿನಲ್ಲಿ ನೈರ್ಮಲ್ಯ ಕಾಪಾಡಬೇಕು ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆಯವರು 5 ರಥಗಳನ್ನು ತಾಂತ್ರಿಕ ಪರೀಕ್ಷೆಗೆ ಒಳಪಡಿಸಿ ವರದಿ ನೀಡಬೇಕು, ರಥವು ಯೋಗ್ಯ ರೀತಿಯಲ್ಲಿ ಸುಸ್ಥಿತಿಯಲ್ಲಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಪ್ರಮಾಣ ಪತ್ರವಿತರಣೆಗೆ ಮುಂದಾಗಬೇಕು ಎಂದು ತಾಕೀತು ಮಾಡಿದರಲ್ಲದೆ, ಜಾತ್ರೆ ಹಾಗೂ ತೆಪ್ಪೋತ್ಸವ ದಿನದಂದು ಕಪಿಲಾ ನದಿಗೆ ನೀರುಹರಿಸಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ವಿದ್ಯುತ್ ಇಲಾಖೆಯಿಂದ ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸರ್ಕಾರಿ ಕಟ್ಟಡ ದೇವಾಲಯದ ಆಸುಪಾಸಿನಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವಂತೆ ಸಲಹೆ ನೀಡಿದರಲ್ಲದೆ ನಗರಸಭಾಧಿಕಾರಿಗಳು ಪಟ್ಟಣದ ಎಲ್ಲೆಡೆ ಶುಚಿತ್ವವನ್ನು ಕಾಪಾಡಿಕೊಳ್ಳಲು ಕ್ರಮವಹಿಸಬೇಕೆಂದು ಸೂಚನೆ ನೀಡಿದರು.

ಸುರಕ್ಷತೆಗೆ ಆದ್ಯತೆ ನೀಡಿ:

ಸುರಕ್ಷತೆ ದೃಷ್ಟಿಯಿಂದ ಬಸ್ ನಿಲ್ದಾಣ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ತಾತ್ಕಾಲಿಕವಾದ ಸಿಸಿ ಟಿವಿ, ಮತ್ತು ವಾಚ್ ಟವರ್ಗಳನ್ನು ನಿರ್ಮಿಸಲು ಕ್ರಮವಹಿಸಬೇಕು ಅಲ್ಲದೆ ಜನಜಂಗುಳಿಯನ್ನು ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ಹೆಚ್ಚಿನ ಬಂದೋಬಸ್ತ್ ನಿಯೋಜಿಸಿಕೊಳ್ಳಲು ಮುಂದಾಗಬೇಕು, ರಥ ಎಳೆಯುವವರಿಗೆ ದೇವಾಲಯದ ವತಿಯಿಂದ ಸಮವಸ್ತ್ರ ನೀಡಲಾಗುವುದು ಸಮವಸ್ತ್ರ ಗುರುತಿನ ಚೀಟಿ, ಸಮವಸ್ತ್ರ ಇಲ್ಲದ ವ್ಯಕ್ತಿಗಳನ್ನು ನಿಯಂತ್ರಿಸಬೇಕು ಎಂದು ತಾಕೀತು ಮಾಡಿದರು.

ಹೆಚ್ಚಿನ ಬಸ್, ರೈಲು ವ್ಯವಸ್ಥೆ ಕಲ್ಪಿಸಿ:

ಜಾತ್ರೆ ದಿನದಂದು ರಾಜ್ಯದ ವಿವಿಧ ಮೂಲೆಗಳಿಂದ ಭಕ್ತಾಧಿಗಳು ಆಗಮಿಸುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯವರು ಮಾ. 22 ರಿಂದ 24 ರವರೆವಿಗೆ ಹೆಚ್ಚಿನ ಬಸ್ ಸೌಲಭ್ಯ ಮತ್ತು ಹೆಚ್ಚುವರಿ ರೈಲು ಓಡಿಸಲು ಕ್ರಮವಹಿಸಬೇಕು ಎಂದರು.

ಶಾಸಕ ದರ್ಶನ್ ಧ್ರುವನಾರಾಯಣ್, ಜಿಪಂ ಕಾರ್ಯದರ್ಶಿ ಕೃಷ್ಣಂರಾಜು, ದೇವಾಲಯದ ಇಓ ಜಗದೀಶ್, ಆರೋಗ್ಯಾಧಿಕಾರಿ ಈಶ್ವರ್ ಕಾರ್ನಟ್ಕೆ, ಉಪ ಪೊಲೀಸ್ ವರಿಷ್ಠಾಧಿಕಾರಿ ಬಾಬು, ದೇವಾಲಯದ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್, ನೀಲಕಂಠ ದೀಕ್ಷಿತ್ ಇದ್ದರು.

Share this article