6 ರಿಂದ ಸುತ್ತೂರು ಜಾತ್ರಾ ಮಹೋತ್ಸವ

KannadaprabhaNewsNetwork | Published : Feb 4, 2024 1:33 AM

ಸಾರಾಂಶ

ಫೆ.6 ರಿಂದ 11 ರವರೆಗೆ 6 ದಿನಗಳ ಹತ್ತಾರು ಕಾರ್ಯಕ್ರಮಗಳು ನಡೆಯಲಿವೆ. ಫೆ.7 ರಂದು ಸಾಮೂಹಿಕ ವಿವಾಹ, ಹಾಲರವಿ ಉತ್ಸವ, 8 ರಂದು ರಥೋತ್ಸವ, 9 ರಂದು ಮಹದೇಶ್ವರ ಕೊಂಡೋತ್ಸವ ಹಾಗೂ ಲಕ್ಷದೀಪೋತ್ಸವ, 10 ರಂದು ತೆಪ್ಪೋತ್ಸವ, 11 ರಂದು ಅನ್ನ ಬ್ರಹ್ಮೋತ್ಸವದ ಜೊತೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆಗಳು ಜರುಗಲಿವೆ

- ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರೆ

- ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಲವು ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲೆಯ ನಂಜನಗೂಡು ತಾಲೂಕು ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವನ್ನು ಫೆ.6 ರಿಂದ 11 ರವರೆಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಪ್ರೊ. ಎಸ್.ಪಿ. ಮಂಜುನಾಥ್ ತಿಳಿಸಿದರು.

ಸುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರಾ ಮಹೋತ್ಸವಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಾತ್ರೆಗೆ ರಾಜ್ಯ, ಹೊರ ರಾಜ್ಯದ ಲಕ್ಷಾಂತರ ಮಂದಿ ಆಗಮಿಸಲಿದ್ದು, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯ ಸಚಿವರು, ಸಂಸದರು, ಶಾಸಕರು, ಗಣ್ಯರು, ವಿವಿಧ ಮಠಗಳ ಮಠಾಧೀಶರು, ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಫೆ.6 ರಿಂದ 11 ರವರೆಗೆ 6 ದಿನಗಳ ಹತ್ತಾರು ಕಾರ್ಯಕ್ರಮಗಳು ನಡೆಯಲಿವೆ. ಫೆ.7 ರಂದು ಸಾಮೂಹಿಕ ವಿವಾಹ, ಹಾಲರವಿ ಉತ್ಸವ, 8 ರಂದು ರಥೋತ್ಸವ, 9 ರಂದು ಮಹದೇಶ್ವರ ಕೊಂಡೋತ್ಸವ ಹಾಗೂ ಲಕ್ಷದೀಪೋತ್ಸವ, 10 ರಂದು ತೆಪ್ಪೋತ್ಸವ, 11 ರಂದು ಅನ್ನ ಬ್ರಹ್ಮೋತ್ಸವದ ಜೊತೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆಗಳು ಜರುಗಲಿವೆ ಎಂದರು.

ಈ ವರ್ಷ 30ನೇ ರಾಜ್ಯಮಟ್ಟದ ಭಜನಾ ಮತ್ತು ಏಕತಾರಿ ಸ್ಪರ್ಧೆ ಏರ್ಪಡಿಸಲಾಗಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು 750 ಹೆಚ್ಚು ಪುರುಷ, ಮಹಿಳಾ, ಮಕ್ಕಳ ತಂಡಗಳು ಭಾಗವಹಿಸಲಿದ್ದು, ಪ್ರತಿ ವಿಭಾಗಕ್ಕೂ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ ಎಂದರು.

ಅತ್ಯಾಕರ್ಷಕ ವಸ್ತುಪ್ರದರ್ಶನ

ಜಾತ್ರೆಯ ಪ್ರಮುಖ ಆಕರ್ಷಣೆಯಾದ ವಸ್ತುಪ್ರದರ್ಶನದಲ್ಲಿ ಕೈಗಾರಿಕೋತ್ಪನ್ನಗಳು, ಕೈಮಗ್ಗ, ಜವಳಿ, ಕರಕುಶಲ ಉತ್ಪನ್ನಗಳು, ಗ್ರಾಮೀಣ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀ ಶಕ್ತಿ ಸಂಘಗಳು ತಯಾರಿಸಿದ ಗೃಹಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಜೆಎಸ್ಎಸ್ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸಿದ್ಧಪಡಿಸಿರುವ 200 ಹೆಚ್ಚು ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳಿರುತ್ತವೆ. ಸರ್ಕಾರದ ಅಭಿವೃದ್ಧಿ ಇಲಾಖೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ವೈದ್ಯಕೀಯ ಹಾಗೂ ತಾಂತ್ರಿಕ ವಸ್ತುಪ್ರದರ್ಶನ ಇರಲಿದೆ ಎಂದು ಅವರು ವಿವರಿಸಿದರು.

ಸಾಮೂಹಿಕ ವಿವಾಹ

ಫೆ.7 ರಂದು ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಜಾತಿ- ಮತ ಭೇದವಿಲ್ಲದೆ ಸರ್ವಧರ್ಮಗಳ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಂತರ್ಜಾತಿ, ವಿಶೇಷಚೇತನರು ಹಾಗೂ ಹೊರ ರಾಜ್ಯಗಳ ವಧು- ವರರು ಸಹ ಪಾಲ್ಗೊಳ್ಳಲಿದ್ದಾರೆ. ವಿವಾಹಗಳ ನೋಂದಣಿಯನ್ನು ಮಾಡಿಸಲಾಗುತ್ತದೆ. ವಧುವಿಗೆ ಸೀರೆ, ಕುಪ್ಪಸ, ಮಾಂಗಲ್ಯ ಹಾಗೂ ಕಾಲುಂಗುರಗಳನ್ನು, ವರನಿಗೆ ಪಂಚೆ, ವಲ್ಲಿ, ಶರ್ಟ್ ಗಳನ್ನು ನೀಡಲಾಗುತ್ತದೆ. ಸಾಮೂಹಿಕ ವಿವಾಹ ವ್ಯವಸ್ಥೆಯಲ್ಲಿ ಈವರೆಗೆ 3000 ಹೆಚ್ಚು ಮಂದಿ ಸತಿಪತಿಗಳಾಗಿದ್ದಾರೆ. ವಧು- ವರರು ವಿವಾಹದ ದೃಢೀಕರಣ ಪತ್ರ ಹಾಗೂ ನೋಂದಣಿ ಪತ್ರಗಳನ್ನು ಸಲ್ಲಿಸಿ. ಸರ್ಕಾರ ನೀಡುವ ಪ್ರೋತ್ಸಾಹಧನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಗಾಳಿಪಟ ಸ್ಪರ್ಧೆ, ಚಿತ್ರಸಂತೆ

1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇರೆ ಬೇರೆ ವಿಭಾಗಗಳಲ್ಲಿ, ಸ್ಥಳದಲ್ಲೇ ವಿವಿಧ ವಿಷಯಗಳ ಕುರಿತು ಚಿತ್ರ ರಚಿಸುವ ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಳಿಪಟ ಸ್ಪರ್ಧೆ ಆಯೋಜಿಸಲಾಗಿದೆ. ರಾಜ್ಯ ಹಾಗೂ ಹೊರ ರಾಜ್ಯ ಕಲಾವಿದರುಗಳ ಕಲಾಕೃತಿಗಳ ಪ್ರದರ್ಶನ, ಮಾರಾಟ ಹಾಗೂ ಸ್ಥಳದಲ್ಲೇ ಸಾರ್ವಜನಿಕರ ಭಾವಚಿತ್ರ ರಚನೆ ಮಾಡಿ ಮಾರಾಟ ಮಾಡುವ ವ್ಯವಸ್ಥೆ ಜಾತ್ರೆಯ ಎಲ್ಲಾ ದಿನಗಳಲ್ಲಿಯೂ ಇರುತ್ತದೆ ಎಂದರು.

ಕುಸ್ತಿ ಪಂದ್ಯಾವಳಿ

ಫೆ.9ರಂದು ರಾಷ್ಟ್ರ ಮಟ್ಟದ ನಾಡ ಕುಸ್ತಿ ಪಂದ್ಯಗಳು ನಡೆಯಲಿವೆ. ಈ ಬಾರಿ ಎರಡು ಮಾರ್ಪಿಟ್ ಕುಸ್ತಿಗಳಿರುತ್ತವೆ. ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಿಗೆ ಸುತ್ತೂರು ಕೇಸರಿ ಪ್ರಶಸ್ತಿ ಹಾಗೂ ಸ್ಥಳೀಯ ಉತ್ತಮ ಕುಸ್ತಿ ಸ್ಪರ್ಧೆ ವಿಜೇತರಿಗೆ ಸುತ್ತೂರು ಕುಮಾರ ಪ್ರಶಸ್ತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಕಟ್ಟಡ ಉದ್ಘಾಟನೆ

ಫೆ.10 ರಂದು ಸುತ್ತೂರಿನ ಮಠದ ಮುಂಭಾಗ ನೂತನವಾಗಿ ನಿರ್ಮಿಸಿರುವ ಪಾರ್ವತಮ್ಮ, ಶಾಮನೂರು ಶಿವಶಂಕರಪ್ಪ ಅತಿಥಿಗೃಹ ಉದ್ಘಾಟನೆಗೊಳ್ಳಲಿದೆ. ಫೆ.6 ರಿಂದ 10 ರವರೆಗೆ 5 ದಿನಗಳ ಕಾಲ ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕ್ಯಾನ್ಸರ್ ತಡೆಗಟ್ಟುವ ಬಗ್ಗೆ ಸಲಹೆ, ಸೂಚನೆ ಹಾಗೂ ವಿವಿಧ ರೀತಿಯ ಕ್ಯಾನ್ಸರ್ ಗಳ ಬಗ್ಗೆ ಪರೀಕ್ಷೆಗಳನ್ನು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಲಾಗಿದೆ ಎಂದರು.

ದೋಣಿ ವಿಹಾರ, ದೇಸಿ ಆಟ

ಸಾರ್ವಜನಿಕರ ಮನೋರಂಜನೆಗಾಗಿ ಜಾತ್ರೆಯ ಎಲ್ಲಾ ದಿನಗಳಲ್ಲಿ ದೋಣಿ ವಿಹಾರ ಏರ್ಪಡಿಸಲಾಗಿದೆ. ಜೊತೆಗೆ ಪುರುಷರಿಗೆ ಫೆ.8 ರಂದು, ಮಹಿಳೆಯರಿಗೆ 9 ರಂದು, ಜೆಎಸ್ಎಸ್ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 7 ರಿಂದ 10 ರವರೆಗೆ ದೇಸಿ ಆಟಗಳಾದ ಕೆಸರುಗದ್ದೆ ಓಟ, ಹಗ್ಗ- ಜಗ್ಗಾಟ, ಕುಂಟೆಬಿಲ್ಲೆ, ಅಳಿಗುಳಿಮನೆ, ಆಣೆಕಲ್ಲು, ಚದುರಂಗ, ಬುಗುರಿ, ಚೌಕಬಾರದ ಜೊತೆಗೆ 50 ಕೆ.ಜಿ ಭಾರದ ಚೀಲ ಹೊತ್ತು ಓಡುವುದು, ಕಲ್ಲುಗುಂಡು ಎತ್ತುವುದು, ತುಂಬಿದ ಬಿಂದಿಗೆಯನ್ನು ತಲೆಯ ಮೇಲೆ ಹೊತ್ತು ಓಡುವ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಾದವರಿಗೆ ನಗದು ಬಹುಮಾನ, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿಪತ್ರ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

53ನೇ ದನಗಳ ಪರಿಷೆ

ಪ್ರತಿ ವರ್ಷದಂತೆ ಈ ವರ್ಷವೂ ದನಗಳ ಜಾತ್ರೆ ಏರ್ಪಡಿಸಲಾಗಿದೆ. ರೈತರು ಎತ್ತು, ಹಸು, ಹೋರಿಗಳನ್ನು ಕೊಂಡುಕೊಳ್ಳಲು ಹಾಗೂ ಮಾರಾಟ ಮಾಡಲು ಅವಕಾಶವಿರುತ್ತದೆ. ಪಶುಪಾಲನಾ ಹಾಗೂ ಪಶುವೈದ್ಯಕೀಯ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಉತ್ತಮ ರಾಸುಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ ಎಂದರು.

ಫೆ.10ರ ತೆಪ್ಪೋತ್ಸವದಂದು ನಂಜನಗೂಡಿನ ಯುವ ಬ್ರಿಗೇಡ್ ಸಹಯೋಗದಲ್ಲಿ ಕಪಿಲಾರತಿ ಏರ್ಪಡಿಸಲಾಗಿದೆ. ಜೆಎಸ್ಎಸ್ ಅಂತರ ಸಂಸ್ಥೆಗಳ ಸಾಂಸ್ಕೃತಿಕ ಮೇಳದಲ್ಲಿ 3500 ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಭರತನಾಟ್ಯ, ಸಾಮೂಹಿಕ ನೃತ್ಯ, ಶಾಸ್ತ್ರೀಯ ಸಂಗೀತ, ವಚನಾಧಾರಿತ ನೃತ್ಯ, ಸಾಮೂಹಿಕ ಗಾಯನ ಸ್ಪರ್ಧೆಗಳ ಮೂಲಕ ಸುಮಾರು 400 ಹೆಚ್ಚು ಕಾರ್ಯಕ್ರಮ ಆಯೋಜಿಸಲಾಗಿದೆ. ಗದ್ದುಗೆಯ ಆವರಣದಲ್ಲಿ ನಗರಪ್ರದೇಶಗಳ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಂದ ಗಾಯನ, ನೃತ್ಯ ಹಾಗೂ ನಾಟಕ ಪ್ರದರ್ಶನವಿರಲಿದೆ. ಜೊತೆಗೆ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳ ಕಲಾತಂಡಗಳು ಕಲಾಪ್ರದರ್ಶನ ನೀಡಲಿವೆ ಎಂದು ಅವರು ವಿವರಿಸಿದರು.

ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್. ಶಿವಕುಮಾರಸ್ವಾಮಿ, ಜಾತ್ರಾ ಸಮಿತಿಯ ಸಂಚಾಲಕರಾದ ಎಸ್.ಪಿ. ಉದಯಶಂಕರ್, ಪ್ರೊ. ಸುಬ್ಬಪ್ಪ ಇದ್ದರು. ಲಕ್ಷಾಂತರ ಜನರಿಗೆ ಪ್ರಸಾದ ವ್ಯವಸ್ಥೆ

ಈ ವರ್ಷದ ಜಾತ್ರಾ ಮಹೋತ್ಸವಕ್ಕೆ ಸುಮಾರು 25 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದ್ದು, ಇದಕ್ಕಾಗಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಸಾದ ಸಮಿತಿಯ ಸಂಚಾಲಕ ಸುಬ್ಬಪ್ಪ ತಿಳಿಸಿದರು.

ಒಟ್ಟು 6 ದಿನಗಳ ಪ್ರಸಾದ ತಯಾರಿಕೆಗೆ 1000 ಕ್ವಿಂಟಲ್ ಅಕ್ಕಿ, 180 ಕ್ವಿಂಟಲ್ ತೊಗರಿಬೇಳೆ, 1500 ಕ್ಯಾನ್ ರಿಫೈನ್ಸ್ ಅಡುಗೆ ಎಣ್ಣೆ, 12 ಟನ್ ಬೆಲ್ಲ, 4000 ಕೆ.ಜಿ. ಖಾರದಪುಡಿ, 250 ಕ್ವಿಂಟಲ್ ಸಕ್ಕರೆ, 500 ಕೆ.ಜಿ. ನಂದಿನಿ ತುಪ್ಪ, 800 ಕೆ.ಜಿ. ದ್ರಾಕ್ಷಿ, ಗೋಡಂಬಿ, 8000 ಲೀ. ಹಾಲು, 28000 ಲೀ. ಮೊಸರು, 25000 ತೆಂಗಿನಕಾಯಿ, 5000 ಕೆ.ಜಿ ಉಪ್ಪಿನಕಾಯಿ ಬಳಸಲಾಗುತ್ತದೆ ಎಂದರು.

ಬೆಳಗಿನ ಪ್ರಸಾದಕ್ಕೆ ವಿವಿಧ ದಿನಗಳಂದು ಬೆಲ್ಲದ ಅನ್ನ, ಅಕ್ಕಿನುಚ್ಚಿನ ಉಪ್ಪಿಟ್ಟು, ಕೇಸರಿಬಾತ್, ಖಾರಾಬಾತ್, ಸಿಹಿ ಪೊಂಗಲ್, ಖಾರಾ ಪೊಂಗಲ್, ಹುಳಿಗೊಜ್ಜು, ಚಿತ್ರಾನ್ನ, ಬೆಲ್ಲದ ಸಜ್ಜಿಗೆ ನೀಡಲಾಗುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ಪಾಯಸ, ಸಿಹಿ ಬೂಂದಿ, ತರಕಾರಿ ಹುಳಿ, ಅನ್ನ, ಸಾಂಬಾರ್, ಮಜ್ಜಿಗೆ ವಿತರಿಸಲಾಗುತ್ತದೆ. ವಿಶೇಷ ದಿನದಂದು ಗೋಧಿ ಪಾಯಸ, ಮೈಸೂರು ಪಾಕ್ ಮತ್ತು ಬಿಸಿಬೇಳೆ ಬಾತ್ ನೀಡಲಾಗುತ್ತದೆ. ಜೊತೆಗೆ ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಅವರು ಹೇಳಿದರು.

-- ಹನಿ ಹನಿಗೂ ಭರಪೂರ ತೆನೆ- ಕೃಷಿ ಮೇಳ--

ಈ ವರ್ಷ ಹನಿ ಹನಿಗೂ ಭರಪೂರ ತೆನೆ ಎಂಬ ಶೀರ್ಷಿಕೆಯಡಿ ಸಾಂಪ್ರದಾಯಿಕ ಹಾಗೂ ಆಧುನಿಕ ತಂತ್ರಜ್ಞಾನಾಧಾರಿತ ಕೃಷಿಮೇಳ ಆಯೋಜಿಸಲಾಗಿದೆ. ಒಂದು ಎಕರೆ ಕೃಷಿ ಬ್ರಹ್ಮಾಂಡ, ನೆರಳುಮನೆಯಲ್ಲಿ ಬೆಳೆದ ಹಲವಾರು ದೇಸಿ ಹಾಗೂ ವಿದೇಶಿ ತರಕಾರಿಗಳು, ಏಕದಳ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ವಾಣಿಜ್ಯ ಬೆಳೆಗಳು, ಮೇವಿನ ಬೆಳೆಗಳು, ವಿವಿಧ ಫಲಪುಷ್ಪಗಳು, ತೋಟಗಾರಿಕೆ ಬೆಳೆಗಳು. ರೇಷ್ಮೆ ಕೃಷಿ ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅನುಸರಿಸಿ ಬೆಳೆದಿರುವ ಸುಮಾರು 300 ಬೆಳೆಗಳು ಹಾಗೂ ವಿವಿಧ ತಳಿಗಳ ಪ್ರಾತ್ಯಕ್ಷಿಕೆಯ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಅಲ್ಲದೆ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ದೇಸಿ ತಳಿಗಳ ಹಸು, ಕುರಿ, ಮೇಕೆ, ಕೋಳಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಫೆ.9 ರಂದು ಕೃಷಿ ಜಮೀನನಲ್ಲಿ ನೀರಿನ ಸದ್ಬಳಕೆ ವಿಚಾರಸಂಕಿರಣ ಏರ್ಪಡಿಸಲಾಗಿದ್ದು, ರೈತರು ಹಾಗೂ ಅವರ ಮಕ್ಕಳಿಗಾಗಿ ಕೃಷಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ.

Share this article