ಕನ್ನಡ ಸೇವೆಗೆ ಗೌಡರ ಜೀವನ ಮುಡಿಪು: ಡಾ.ಬಸವಲಿಂಗ ಪಟ್ಟದ್ದೇವರು

KannadaprabhaNewsNetwork | Published : Jun 11, 2024 1:32 AM

ಸಾರಾಂಶ

ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯಿಂದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರ 58ನೇ ಜನ್ಮದಿನದ ಪ್ರಯುಕ್ತ ಕೇಕ್ ಕತ್ತರಿಸಿ ಮಠದಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಮಕ್ಕಳಿಗೆ ನೋಟ್ ಬುಕ್ ವಿತರಿಸಿ ನಾಡೋಜ ಬಸವಲಿಂಗ ಪಟ್ಟದ್ದೇವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರು ಕನ್ನಡ ಸೇವೆಗೆ ಜೀವನ ಮುಡಿಪಾಗಿಟ್ಟಿದ್ದಾರೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಇಲ್ಲಿಯ ಹಿರೇಮಠ ಸಂಸ್ಥಾನದಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯಿಂದ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರ 58ನೇ ಜನ್ಮದಿನದ ಪ್ರಯುಕ್ತ ಕೇಕ್ ಕತ್ತರಿಸಿ ಮಠದಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಮಕ್ಕಳಿಗೆ ನೋಟ್ ಬುಕ್ ವಿತರಿಸಿ ಜನ್ಮದಿನದ ಶುಭಾಶಯ ಕೋರಿ ಅವರು ಮಾತನಾಡಿದರು.

ಕನ್ನಡದ ನೆಲದಲ್ಲಿ ನಿರಂತರವಾಗಿ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತಿದ್ದಾರೆ. 58ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ನಾರಾಯಣ ಗೌಡರು ಜನ್ಮ ಷಟ್ಪದಿ, ಅಮೃತ ಮಹೋತ್ಸವ, ಶತಮಾನೋತ್ಸವ ಆಚರಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.

ನೇತೃತ್ವ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ರಾಜ್ಯದ ಜನರ ಹಿತ ಮತ್ತು ನಾಡಿನ ಹಿತಕ್ಕಾಗಿ ನಾರಾಯಣ ಗೌಡರು ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ವಿಶ್ವಗುರು ಬಸವಣ್ಣನರು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭ ಕೋರಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ಕನ್ನಡ ನಾಡು, ನುಡಿ, ಜಲ ರಕ್ಷಣೆಗಾಗಿ ನಾರಾಯಣ ಗೌಡರು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಸಂಘಟನೆಗಳು ಸಮಾಜದ ಒಳಿತಿಗೆ ಶ್ರಮಿಸಲಿ ಎಂದು ಆಶಿಸಿದರು.

ತಾಲೂಕು ಕರವೇ ಅಧ್ಯಕ್ಷ ಗಣೇಶ ಪಾಟೀಲ್ ಮಾತನಾಡಿ, ನಾರಾಯಣ ಗೌಡರದ್ದು, ಹೋರಾಟವೆ ಜೀವನವಾಗಿದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಕನ್ನಡ ನೆಲದ ರಕ್ಷಣೆಗೆ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ದೇವರು ದೀರ್ಘ ವರ್ಷ ಆಯುಷ್ಯ, ಆರೋಗ್ಯ ಕಲ್ಪಿಸಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರವೇ ಯುವ ಘಟಕದ ಅಧ್ಯಕ್ಷ ಸುದೀಪ ತೂಗಾವೇ, ವಲಯ ಅಧ್ಯಕ್ಷ ಬಸವರಾಜ ಕಾರಬಾರಿ, ಸಂಘಟನಾ ಕಾರ್ಯದರ್ಶಿ ವೀರೇಶ ಬಿರಾದಾರ್, ಎಪಿಎಂಸಿ ಮಾಜಿ ಅಧ್ಯಕ್ಷ ದಶರಥ ಡೊಳ್ಳೆ, ನಾಗನ್ನಾಥ ಮರ್ಜಾಪೂರೆ ಸೇರಿದಂತೆ ಹಲವರು ಇದ್ದರು.

Share this article