ಕರ್ನಾಟಕ ಏಕೀಕರಣಕ್ಕೆ ನಾರಾಯಣರಾಯರ ಗೀತೆ ನಾಂದಿ

KannadaprabhaNewsNetwork |  
Published : Oct 06, 2024, 01:20 AM IST
ಗದಗ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಕಬ್ಬಿಗರ ನಾಡಗೀತೆಯ ನೂರನೇ ವರ್ಷಾಚರಣೆ, ಹುಯಿಲಗೋಳ ನಾರಾಯಣರಾಯರ 140ನೇ ಜಯಂತಿ ಹಾಗೂ ಕಬ್ಬಿಗರ ಕೂಟದ 49ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಕಥಾವಸ್ತು ಒಳಗೊಂಡ ನಾಟಕ ರಚಿಸಿ, ನಾಟಕಗಳನ್ನು ರಂಗದ ಮೇಲೆ ತಂದು ರಂಗಭೂಮಿಯತ್ತ ಸುಶಿಕ್ಷಿತರನ್ನು ಆಕರ್ಷಿಸಲು ಪ್ರಯತ್ನಿಸಿದರು

ಗದಗ: ಕರ್ನಾಟಕ ಏಕೀಕರಣಕ್ಕೆ1924ರಲ್ಲಿ ಗದುಗಿನ ಹುಯಿಲಗೋಳ ನಾರಾಯಣರಾಯರು ಬರೆದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆ ನಾಂದಿಯಾಯಿತು. ಅದು ತನ್ನ ಶ್ರೇಷ್ಠ ಸಾಹಿತ್ಯಕ ಮೌಲ್ಯ,ನಾಡು ನುಡಿಯ ಬಗ್ಗೆ ಮೂಡಿಸಿದ ಅಭಿಮಾನದಿಂದ ಜನಮನ ಸೂರೆಗೊಂಡು ನಾಡಗೀತೆಯ ಮುದ್ರೆ ಪಡೆಯಿತು ಎಂದು ಧಾರವಾಡ ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಗು.ರು.ಕಲ್ಮಠ ಹೇಳಿದರು.

ಅವರು ಸ್ಥಳೀಯ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಕಬ್ಬಿಗರ ಕೂಟ ಆಯೋಜಿಸಿದ್ದ ನಾಡಗೀತೆಯ ನೂರನೇ ವರ್ಷಾಚರಣೆ, ಹುಯಿಲಗೋಳ ನಾರಾಯಣರಾಯರ 140ನೇ ಜಯಂತಿ ಕಾರ್ಯಕ್ರಮ ಹಾಗೂ ಕಬ್ಬಿಗರ ಕೂಟದ 49ನೇ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಐತಿಹಾಸಿಕ ನಾಡಗೀತೆಯ ಶತಮಾನೋತ್ಸವ ಸ್ಮರಣೆ ನಾಡಿಗೆ ಪರಿಚಯ ಮಾಡಿಕೊಡುವ ಮೂಲಕ ಕಬ್ಬಿಗರಕೂಟ ಈ ಕಾರ್ಯಕ್ರಮದ ಶುಭಾರಂಭ ಮಾಡಿದ ಪ್ರಥಮ ಸಂಘಟನೆಯಾಗಿದೆ ಎಂದರು.

ಹುಯಿಲಗೋಳ ನಾರಾಯಣರಾಯರ ಬದುಕು ಬರಹ ಕುರಿತು ಸಾಹಿತಿ ಡಿ.ವಿ.ಬಡಿಗೇರ ಉಪನ್ಯಾಸ ನೀಡಿ, ನಾರಾಯಣರಾಯರು ನಾಡಗೀತೆಯನ್ನಲ್ಲದೇ ವೀರನಾರಾಯಣನ ಕೀರ್ತನೆ, ನಾಡು, ನುಡಿ, ನಿಸರ್ಗ ಕುರಿತು ಕಾವ್ಯ ರಚಿಸಿದರು. ಅಲ್ಲದೇ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಕಥಾವಸ್ತು ಒಳಗೊಂಡ ನಾಟಕ ರಚಿಸಿ, ನಾಟಕಗಳನ್ನು ರಂಗದ ಮೇಲೆ ತಂದು ರಂಗಭೂಮಿಯತ್ತ ಸುಶಿಕ್ಷಿತರನ್ನು ಆಕರ್ಷಿಸಲು ಪ್ರಯತ್ನಿಸಿದರು. ಇವರ ಬಗ್ಗೆ ಹೆಚ್ಚಿನ ಸಂಶೋಧನೆಗೆ ಅನುಕೂಲವಾಗಲು ಸರ್ಕಾರ ಸಂಶೋಧನಾ ಕೇಂದ್ರ ಗದಗದಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಮಾತನಾಡಿ, ಕಬ್ಬಿಗರ ಕೂಟ ನಡೆದು ಬಂದ ಐದು ದಶಕಗಳ ಕಠಿಣ ಹಾದಿ ಕುರಿತು ವಿವರಿಸಿದರು.

ಈ ವೇಳೆ ಜಾನಪದ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ನಾಗಭೂಷಣ ಹಿರೇಮಠ, ಸಾಹಿತಿ ಬಸವರಾಜ ಗಣಪ್ಪನವರ, ನಿವೃತ್ತ ಶಿಕ್ಷಕ ಎಸ್.ಎಸ್. ಮಲ್ಲಾಪೂರ, ಸುಭದ್ರಾ ಬಡಿಗೇರ, ಎಂ.ಎಫ್. ಡೋಣಿ, ರಾಮಚಂದ್ರ ಗವಳಿ, ಗಂಗಾಧರ ಎಸ್. ಹೊಂಬಳ, ಶರೀಫ ಬಿಳೆಯಲಿ, ಸುನಂದಾ ಹೊಸಮನಿ, ಆನಂದ ಶಿಂಗಾಡಿ ಮುಂತಾದವರು ಇದ್ದರು. ಬಿ.ಎಸ್. ಹಿಂಡಿ ಸ್ವಾಗತಿಸಿದರು. ಬಸವರಾಜ ವಾರಿ ಪರಿಚಯಿಸಿದರು. ನಜೀರ ಸಂಶಿ ವಂದಿಸಿದರು.

ಜಾನಪದ ಸಂಶೋಧನಾ ಕೇಂದ್ರದ ಗಾಯಕಿಯರಾದ ಸುನಂದಾ ಹೊಸಮನಿ, ಆಶಾ ಸೈಯದ, ಕೆ.ಮರುನ್ನೀಸಾ, ಗಿರಿಜಾ ಶೆಕ್ಕಿ ಹಾಗೂ ನಾಗಭೂಷಣ ಹಿರೇಮಠ ಮುಂತಾದವರು ಸುಶ್ರಾವ್ಯವಾಗಿ ನಾಡಗೀತೆ ಸಾದರ ಪಡಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಸುಭದ್ರಾ ಬಡಿಗೇರ, ರೇಣುಕಾ ಹೂಗಾರ, ಬಸವರಾಜ ವಾರಿ, ಬಿ.ಎಸ್. ಹಿಂಡಿ, ಆರ್.ಡಿ. ಕಪ್ಪಲಿ, ಆರ್.ಡಿ.ನಾಡಿಗೇರ, ನಜೀರ ಸಂಶಿ, ಶಿವಾನಂದ ಎಫ್. ಭಜಂತ್ರಿ, ಅನಸೂಯಾ ಮಿಟ್ಟಿ, ವಿ.ಎಂ. ಪವಾಡಿಗೌಡ್ರ ಮುಂತಾದವರು ಕವನ ವಾಚಿಸಿದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''