ನಗರದ ಕುವೆಂಪು ಕಲಾ ಮಂದಿರದಲ್ಲಿ ನಡೆದ ಬ್ರಹ್ಮ ಶ್ರೀ ನಾರಾಯಣಗುರು ಜಯಂತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂದು ಮನುಕುಲ ಕುಟುಂಬಕ್ಕೆ ಸಾರಿದವರು ಬ್ರಹ್ಮ ಶ್ರೀ ನಾರಾಯಣ ಗುರು ಎಂದು ಸಾಹಿತಿ ಬಿ. ತಿಪ್ಪೇರುದ್ರಪ್ಪ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮ ಶ್ರೀ ನಾರಾಯಣಗುರು ಜಯಂತಿಯಲ್ಲಿ ಉಪನ್ಯಾಸ ನೀಡಿದರು. ವಿಶ್ವಮಾನವ ಸಂದೇಶವನ್ನು ಕೇರಳದಿಂದ ಪ್ರಾರಂಭ ಮಾಡಿ ದೇಶದೆಲ್ಲೆಡೆ ಹಬ್ಬಿಸಿದವರು. ಯೂರೋಪಿಯನ್ನರು ವಸಾಹತು ಸ್ಥಾಪಿಸಿ ನಮ್ಮನ್ನು ಗುಲಾಮರನ್ನಾಗಿ ಮಾಡಿದ್ದು, ರಾಜಕೀಯ ರಂಗದ ಗೋಳು, ಇದೇ ಕಾಲದಲ್ಲಿ ಸಾಮಾಜಿಕ ಸ್ಥಿತಿ ಇನ್ನೂ ನೋವಿನ ಸಂಗತಿಯಾಗಿತ್ತು. ಆ ಕಾಲದಲ್ಲಿ ಜಾತಿಯಲ್ಲಿ ಹಿಂದುಳಿದವರನ್ನು ಶೋಷಣೆ ಮಾಡಲಾಗುತ್ತಿತ್ತು, ಕೇರಳದ ಬಹುಸಂಖ್ಯಾತ ಈಳವ ಜನಾಂಗ ಕೂಡ ಅಸ್ಪೃಶ್ಯ ವರ್ಗಕ್ಕೆ ಸೇರಿದ್ದರು. ದೇವಾಲಯಕ್ಕೆ ಪ್ರವೇಶವಿರಲಿಲ್ಲ. ಮೇಲು ಜಾತಿಯವರು ನಡೆಯುವ ದಾರಿಯಲ್ಲಿ ನಡೆಯುವಂತಿರಲಿಲ್ಲ. ಮಹಿಳೆ ಯರು ಕುಪ್ಪಸ , ಆಭರಣ, ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ, ಇಂಥ ಸಂದರ್ಭದಲ್ಲಿ ಸಾಮಾಜಿಕ ಸುಧಾರಾಣೆಗೆ ಬಂದ ಗುರುಗಳು ಕಂದಾಚಾರ, ಮೂಡನಂಬಿಕೆ ಗಳನ್ನು ಟೀಕಿಸಿ ಸರಿಪಡಿಸಲು ಶ್ರಮಿಸಿದರು ಎಂದರು.ವಿದ್ಯೆ ಪಡೆದು ಸ್ವತಂತ್ರ, ಶಕ್ತಿವಂತರಾಗಿರಿ ಎಂಬ ಸಂದೇಶ ಸಾರಿ, ಮನುಷ್ಯ ಜಾತಿಯಿಂದ ದೊಡ್ಡವನಾಗುವುದಿಲ್ಲ ಬದುಕಿನ ನೀತಿ, ರೀತಿಯಿಂದ ದೊಡ್ಡವನಾಗುತ್ತಾನೆ ಎಂದು ತೋರಿಸಿಕೊಟ್ಟವರು ಎಂದರು.ನಾರಾಯಣ ಗುರುಗಳು ಇಡೀ ಮಾನವ ಜನಾಂಗದ ಗುರು, ಸಾಮಾಜಿಕ ಕ್ರಾಂತಿ ಹರಿಕಾರ. ತಮ್ಮ ಆಧ್ಯಾತ್ಮಿಕ ಚಿಂತನೆ ಮೂಲಕ ಮತಾಂತರ ತಪ್ಪಿಸಿದರು. ಸಮಾನತೆ ತರುವ ನಿಟ್ಟಿನಲ್ಲಿ ಕ್ರಾಂತಿಕಾರ ಹೋರಾಟ ಮಾಡಿದರು ಎಂದು ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಕಂದಾಯ ಶಾಖೆ ಶಿರಸ್ತೆದಾರ್ ಎಂ.ಸಿ. ಹೇಮಂತ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಮೇಶ್ ಇದ್ದರು.
20 ಕೆಸಿಕೆಎಂ 6ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬ್ರಹ್ಮ ಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು
ಜಿಲ್ಲಾಧಿಕಾರಿಗಳ ಕಚೇರಿ ಕಂದಾಯ ಶಾಖೆ ಶಿರಸ್ತೆದಾರ್ ಎಂ.ಸಿ. ಹೇಮಂತ್ ಕುಮಾರ್ ಉದ್ಘಾಟಿಸಿದರು. ಬಿ. ತಿಪ್ಪೇರುದ್ರಪ್ಪ, ಡಾ. ರಮೇಶ್ ಇದ್ದರು.