ಚಂದ್ರು ಕೊಂಚಿಗೇರಿ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿಮಳೆ ಇಲ್ಲದೇ ತುಂಗಭದ್ರ ನದಿ ಬತ್ತಿ ಹೋಗಿದೆ. ಇತ್ತ ಕೊಳವೆ ಬಾವಿಗಳಲ್ಲಿಯೂ ನೀರಿಲ್ಲ, ಎಲ್ಲಡೆ ಬರ ಆರಿಸಿಕೊಂಡಿದೆ. ಇದರಿಂದ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರ ಕೈಗೆ ಕೆಲಸವೇ ಇಲ್ಲದಂತಾಗಿತ್ತು. ಇಂತಹ ಸಂದರ್ಭದಲ್ಲಿ ಮಾಗಳ ಗ್ರಾಮದ ಕೂಲಿ ಕಾರ್ಮಿಕರಿಗೆ ನರೇಗಾ ಆಸರೆಯಾಗಿದೆ!
ತಾಲೂಕಿನ ಮಾಗಳ ಗ್ರಾಮ ವಿಜಯನಗರ ಜಿಲ್ಲೆಯಲ್ಲೇ 2ನೇ ಅತಿ ದೊಡ್ಡ ಕಂದಾಯ ಗ್ರಾಮವಾಗಿತ್ತು. 10 ಸಾವಿರಕ್ಕೂ ಹೆಕ್ಟರ್‌ಗೂ ಅಧಿಕ ಕೃಷಿ ಭೂಮಿ ಹೊಂದಿದೆ. ಬ್ರಿಟಿಷರ ಕಾಲದಲ್ಲೇ ಹೆಚ್ಚು ಭೂ ಕಂದಾಯ ಪಾವತಿ ಮಾಡಿರುವ ಪ್ರದೇಶವಾಗಿತ್ತು. ತುಂಗಭದ್ರಾ ನದಿ ಹರಿದಿರುವ ಹಿನ್ನೆಲೆಯಲ್ಲಿ ಹೆಚ್ಚು ನೀರಾವರಿ ಪ್ರದೇಶ ಹೊಂದಿರುವ ಈ ಗ್ರಾಮದಲ್ಲಿ ಕೃಷಿ ಕೂಲಿ ಕಾರ್ಮಿಕರು ಹೆಚ್ಚು ವಾಸವಾಗಿದ್ದಾರೆ. ಬೇರೆಡೆಯಿಂದ ವಲಸೆ ಬಂದಿರುವ ಕಾರ್ಮಿಕರು ಇದ್ದಾರೆ.ನಿಮ್ಮೂರಲ್ಲೇ ಕೆಲಸ ಖಾತ್ರಿ
ಕೂಲಿ ಕಾರ್ಮಿಕರಿಗೆ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಕೆಲಸ ಸಿಗುತ್ತಿದೆ. ಆದರೆ, ಬರಗಾಲ ಬಂದಿರುವ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಕೆಲಸ ಅರಸಿ ಗುಳೆ ಹೋಗಲು ಸಿದ್ದರಾಗಿದ್ದ ಸಂದರ್ಭದಲ್ಲಿ, ನಿಮ್ಮೂರಿನಲ್ಲೇ ಕೆಲಸ ನರೇಗಾ ಖಾತ್ರಿ ಐತಿ, ಮತ್ತ್ಯಾಕ ಕೆಲಸ ಅರಸಿ ಗುಳೆ ಹೋಗುತ್ತೀರಿ, ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ನಿರಂತರವಾಗಿ ಕೆಲಸ ನೀಡಿದ್ದಾರೆ.ಮಾಗಳ ಗ್ರಾಮ ಪಂಚಾಯಿತಿಯಲ್ಲಿ ವರ್ಷಕ್ಕೆ 51325 ಮಾನವ ದಿನಗಳ ಸೃಜನೆ ಗುರಿ ಹೊಂದಲಾಗಿದೆ. ಇದರಲ್ಲಿ ಏಪ್ರಿಲ್-1 ರಿಂದ 30 ವರೆಗೆ 30121 ಮಾನವ ದಿನಗಳ ಸೃಜನೆಯಾಗಿದೆ. ಕುಟುಂಬಕ್ಕೆ ಈಗಾಗಲೇ 100 ಮಾನವ ದಿನಗಳ ಸೃಜನೆಯಾಗಿ ವಿಜಯನಗರ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ.
ನರೇಗಾ ಯೋಜನೆಯಲ್ಲಿ ಜಲ ಸಂರಕ್ಷಣೆ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದರಲ್ಲಿ 19 ಕಡೆಗಳಲ್ಲಿ ನಾಲಾ ಪುನಶ್ಚೇತನ ಕಾಮಗಾರಿಗಳಲ್ಲಿ ನಿತ್ಯ 2 ಸಾವಿರದಿಂದ 30 ಸಾವಿರ ನರೇಗಾ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.ಓಡುವ ನೀರು ನಿಂತಿದೆ
15 ದಿನಗಳ ಹಿಂದೆ ಸುರಿದ ಮಳೆಗೆ ಕಾಮಗಾರಿ ಕೈಗೊಂಡ ನಾಲಾಗಳು ನೀರಿನಿಂದ ತುಂಬಿಕೊಂಡಿದ್ದವು. ಜತೆಗೆ ಮಳೆ ಬಂದಾಗ ಹಳ್ಳದ ಮೂಲಕ ಹರಿದು ಹೋಗುತ್ತಿದ್ದ ಮಳೆ ನೀರನ್ನು ತಡೆಗಟ್ಟಲು ಅನೇಕ ಕಡೆಗಳಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ತುಂಬಿಕೊಂಡಿದ್ದ ಹೂಳು ತೆಗೆದು ಹಾಕಿದ್ದಾರೆ. ಒಟ್ಟಾರೆ ಕ್ಯಾಚ್ ದಿ ರೇನ್ ಕಾಮಗಾರಿಗಳನ್ನು ಕೈಗೆತ್ತುಕೊಂಡಿವೆ.ನರೇಗಾ ಕೂಲಿ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲೇ ಕಾರ್ಮಿಕರಿಗೆ ನೆರಳು ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ, ಜತೆಗೆ ಆರೋಗ್ಯ ಇಲಾಖೆಯಿಂದ ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಇಡಲಾಗಿದೆ. ಇದರಿಂದ ಕೂಲಿ ಕಾರ್ಮಿಕರ ಸುರಕ್ಷತೆ ದೃಷಿಯಿಂದ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.ಹೆಚ್ಚು ಮಾನವ ದಿನಗಳ ಸೃಜನೆ
ಮಾಗಳ ಗ್ರಾಮ ಪಂಚಾಯಿತಿಯು 6 ತಿಂಗಳಲ್ಲಿ ಮಾಡಬೇಕಾದ ನರೇಗಾ ಕಾಮಗಾರಿಯನ್ನು ಜನರಿಗೆ ಕೆಲಸ ನೀಡಿ ಒಂದೇ ತಿಂಗಳಲ್ಲೇ ಅತಿ ಹೆಚ್ಚು ಮಾನವ ದಿನಗಳ ಸೃಜನೆ ಮಾಡಿದ್ದಾರೆ. ಪ್ರತಿ ವರ್ಷವೂ ಗುರಿ ಮೀರಿ ಸಾಧನೆ ಆಗುತ್ತಿರಲಿಲ್ಲ, ಈ ಹಿಂದೆ ವಿವಿಧ ಇಲಾಖೆಗಳ ಮೂಲಕ ನರೇಗಾ ಕಾಮಗಾರಿಗಳನ್ನು ಮಾಡಲಾಗುತ್ತಿತ್ತು. ಈ ಬಾರಿ ಗ್ರಾಪಂನಿಂದಲೇ ಕೆಲಸ ಮಾಡಲಾಗುತ್ತಿದೆ.ವೀರಣ್ಣ ನಾಯ್ಕ, ಸಹಾಯಕ ನಿರ್ದೇಶಕ, ನರೇಗಾ ಯೋಜನೆ, ತಾಪಂ ಹೂವಿನಹಡಗಲಿ.
ನಿರಂತರ ಕೆಲಸಮಾಗಳ ಗ್ರಾಪಂನಲ್ಲಿ ಈ ವರ್ಷ 51325 ಮಾನವ ದಿನಗಳ ಸೃಜನೆ ಗುರಿ ಇತ್ತು. ಇದರಲ್ಲಿ ಒಂದೇ ತಿಂಗಳಲ್ಲಿ 30212 ಮಾನವ ದಿನಗಳ ಸೃಜನೆ ಮಾಡಲಾಗಿದೆ. ಮಳೆಗಾಲದಲ್ಲಿ ರೈತರ ಕೆಲಸಕ್ಕೆ ಅಡ್ಡಿಯಾಗದಂತೆ ಬೇಸಿಗೆಯಲ್ಲೇ ಕೆಲಸ ನೀಡಿದ್ದೇವೆ. ವಿಜಯನಗರ ಜಿಲ್ಲೆಯಲ್ಲೇ 100 ಮಾನವ ದಿನಗಳ ಸೃಜನೆ ಮಾಡಿರುವ ಕುಟುಂಬ ಎಂಬ ಹೆಗ್ಗಳಿಗೆ ಮಾಗಳ ಗ್ರಾಪಂ ಪಾತ್ರವಾಗಿದೆ.ಮಂಜುನಾಥ ರಡ್ಡೇರ್, ಪಿಡಿಒ, ಗ್ರಾಮ ಪಂಚಾಯಿತಿ ಮಾಗಳ.