ನರೇಗಲ್ಲ: ಹೋಳಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ನರೇಗಲ್ಲ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಪೋರರ ಹಲಗೆ ಸದ್ದು ರಂಗೇರಿಸಿದ್ದು, ಹೋಳಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಇಂಬು ನೀಡಿದೆ.
ಹೋಳಿ ಹಬ್ಬದ ನೆಪದಲ್ಲಿ ಕಾಮಣ್ಣನ ಪಟ್ಟಿ ವಸೂಲು ಮಾಡಲು ಹುಡುಗರ ದಂಡು ಓಣಿ ಓಣಿಗಳಲ್ಲಿ ಸಂಚರಿಸುತ್ತಿದ್ದು, ತಾಳಬದ್ದವಾಗಿ ಹಲಗೆ ಬಾರಿಸುತ್ತ ಅದಕ್ಕೆ ತಕ್ಕಂತೆ ಕುಣಿಯುತ್ತಾ ಓಡಾಡುವ ದೃಶ್ಯ ಎಲ್ಲ ಕಡೆಗಳಲ್ಲಿಯೂ ಸಾಮಾನ್ಯವಾಗಿದೆ. ಫೈಬರ್, ಪ್ಲಾಸ್ಟಿಕ್ ಹಲಗೆ: ಮೊದಲು ಗಡಗಿ ಕಂಟಕ್ಕೆ, ಕಬ್ಬಿಣದ ಗಾಲಿಗೆ ಸರಿ ಹಚ್ಚಿ, ಅದಕ್ಕೆ ಎರಡರಿಂದ ಮೂರು ಪದರು ಪೇಪರ್ ಸುತ್ತಿ ನಾದಬರುವವರೆಗೆ ಬಿಸಲಿಗೆ ಕಾಯಿಸಿ ನಂತರ ಅದನ್ನು ಬಾರಿಸುವ ಪದ್ಧತಿ ರೂಡಿಯಲ್ಲಿತ್ತು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಮಾನವ ಆಧುನಿಕತೆಯ ಭರಾಟೆಗೆ ಒಳಗಾಗಿ ತ್ವರಿತ ದೊರೆಯುವ ವಸ್ತುಗಳನ್ನು ಕೊಳ್ಳಲು ಮುಂದಾಗುತ್ತಿದ್ದು, ಇದನ್ನರಿತ ಉತ್ಪಾದಕರು ಗ್ರಾಹಕನ ಮನೋಸಾಮರ್ಥ್ಯಕ್ಕೆ ತಕ್ಕಂತೆ ಫೈಬರ್ ಹಾಗೂ ಪ್ಲಾಸ್ಟಿಕ್ ಹಲಗೆಗಳನ್ನು ತಯಾರಿಸಿ ಮಾರುಕಟ್ಟೆಗೆ ಒದಗಿಸುತ್ತಿದ್ದು ಇವುಗಳ ಮಾರಾಟ ಜೋರಾಗಿದೆ, ಚಿಕ್ಕ ಗಾತ್ರದ ಹಲಗೆಯಿಂದ ದೊಡ್ಡ ಗಾತ್ರದ ಹಲಗೆವರೆಗೆ ಮಾರುಕಟ್ಟೆಯಲ್ಲಿ ಹಲಗೆಗಳು 50ರಿಂದ 1500 ರ ವರೆಗೆ ದೊರೆಯುತ್ತಿದ್ದು, ಗ್ರಾಹಕರು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಖರೀದಿಸಿ ಮಕ್ಕಳ ಬಳಕೆಗೆ ನೀಡುತ್ತಿದ್ದಾರೆ.ಚರ್ಮದ ಹಲಗೆ ಅಲಭ್ಯ: ಫೈಬರ್ ಮತ್ತು ಪ್ಲಾಸ್ಟಿಕ್ ಹಲಗೆಗಿಂತ ಮೊದಲು ಚರ್ಮದ ಹಲಗೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತಿದ್ದವು ಆದರೆ ಪ್ಲಾಸ್ಟಿಕ್ ಮತ್ತು ಫೈಬರ್ ಹಲಗೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ಮೇಲೆ ಚರ್ಮದ ಹಲಗೆಗಳು ಮಾರುಕಟ್ಟೆಯಿಂದ ಮಾಯವಾಗಿವೆ. ಇದಕ್ಕೆ ಪ್ರಮುಖ ಕಾರಣ ಚರ್ಮದ ಹಲಗೆ ಉತ್ಪಾದನಾ ವೆಚ್ಚ ಹೆಚ್ಚು ತಗಲುತ್ತಿದ್ದು, ತಯಾರಿಕೆಯೂ ವಿಳಂಬವಾಗುತ್ತದೆ. ಹೀಗಾಗಿ ಚರ್ಮದ ಹಲಗೆ ಕಾಲಕ್ರಮೇಣ ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಿವೆ. ಮಕ್ಕಳು ಹಲಗೆ ಬಾರಿಸುವುದು ತುಂಬಾ ಮುದ ನೀಡುತ್ತದೆ, ಇದನ್ನು ನೋಡಿದರೆ ಹಿಂದೆ ನಾವು ಚಿಕ್ಕವರಿದ್ದಾಗಿನ ದಿನಗಳು ನೆನಪಾಗುತ್ತವೆ. ಸಂಪ್ರದಾಯವನ್ನು ಉಳಿಸುತ್ತಿರುವ ಇಂದಿನ ಮಕ್ಕಳ ಶೈಲಿ ನಿಜಕ್ಕೂ ಖುಷಿ ತಂದಿದೆ ಹಾಲಕೆರೆ ಗ್ರಾಮಸ್ಥ ಉಮೇಶ ನವಲಗುಂದ ಹೇಳಿದರು.ಗಂಡು ಮಕ್ಕಳ ಹಬ್ಬವೆಂದೇ ಗುರುತಿಸುವ ಈ ಹಬ್ಬಕ್ಕೆ ಚಿಕ್ಕ ಚಿಕ್ಕ ಮಕ್ಕಳು ಓಣಿಗಳಲ್ಲಿ ಊಟ, ತಿಂಡಿ ಮರೆತು ಹಲಗೆ ಬಾರಿಸುವುದರಲ್ಲಿ ತಲ್ಲೀನರಾಗಿರುವುದು ಖುಷಿ ತಂದಿದೆ. ಮುಂದಿನ ಪೀಳಿಗೆಗೂ ಇದರ ನೆನಪು ಉಳಿಯುವಂತಾಗಬೇಕಿದೆ ಎಂದು ಉಪನ್ಯಾಸಕ ಬಿ.ಎಸ್. ಕಳಕೊಣ್ಣವರ ಹೇಳಿದರು.