ಬಳ್ಳಾರಿ: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿ ಬಂಧಿಸಬೇಕು ಹಾಗೂ ನಾಸಿರ್ ಹುಸೇನ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಇಲ್ಲಿನ ಬುಡಾ ಕಚೇರಿ ಆವರಣದಲ್ಲಿರುವ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿಯೇ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದರೂ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಅವರು ಅದನ್ನು ಖಂಡಿಸಲಿಲ್ಲ. ಈ ಕುರಿತು ಪ್ರಶ್ನಿಸಿದ ಮಾಧ್ಯಮಗಳ ಪ್ರತಿನಿಧಿಗಳ ಮೇಲೆ ಏಕವಚನದಲ್ಲಿ ಹರಿಹಾಯ್ದಿದ್ದಾರೆ. ಅವರ ದುಂಡಾವರ್ತನೆಯನ್ನು ಇಡೀ ರಾಜ್ಯವೇ ನೋಡಿದೆ. ರಾಜ್ಯ ಸರ್ಕಾರ ಕೂಡಲೇ ಪಾಕಿಸ್ತಾನ ಪರ ಘೋಷಣೆ ಕೂಗಿದ ದುಷ್ಕರ್ಮಿಯನ್ನು ಬಂಧಿಸಬೇಕು. ಕಾಂಗ್ರೆಸ್‌ಗೆ ನಿಜಕ್ಕೂ ನೈತಿಕತೆ ಇದ್ದರೆ ಕೂಡಲೇ ನಾಸಿರ್ ಹುಸೇನ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಕಚೇರಿಗೆ ಮಸಿ ಬಳಿಯಲು ಯತ್ನ: ನಗರದ ಮೋತಿ ವೃತ್ತದಲ್ಲಿ ಕೆಲಹೊತ್ತು ರಸ್ತೆತಡೆ ನಡೆಸಿ ಪ್ರತಿಭಟಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬಳಿಕ ಬಳ್ಳಾರಿ ನಗರಾಭಿವೃದ್ಧಿ ಕಚೇರಿ ಆವರಣದಲ್ಲಿರುವ ರಾಜ್ಯಸಭಾ ಸದಸ್ಯರ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಪ್ರಯತ್ನಿಸಿದರಲ್ಲದೆ, ನಾಸಿರ್ ಹುಸೇನ್ ಅವರ ಹೆಸರಿನ ಕಚೇರಿ ನಾಮಫಲಕಕ್ಕೆ ಮಸಿ ಬಳಿಯಲು ಮುಂದಾದರು.
ಪೊಲೀಸರು ಕಾರ್ಯಕರ್ತರನ್ನು ಅಡ್ಡಗಟ್ಟಿ ತಡೆದರು. ಹೀಗಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ನೂಕಾಟ, ತಳ್ಳಾಟ ಜರುಗಿತು.ಏತನ್ಮಧ್ಯೆ ಪಕ್ಷದ ಕಾರ್ಯಕರ್ತನೊಬ್ಬ ಕೈಯಲ್ಲಿ ಮಸಿಯ ಡಬ್ಬಿ ಹಿಡಿದು ಕಚೇರಿ ಮುಂಭಾಗದ ನಾಮಫಲಕ ಬಳಿ ಧಾವಿಸಲು ಮುಂದಾಗುತ್ತಿದ್ದಂತೆ ಪೊಲೀಸರು ಆತನ ಕೈಯಲ್ಲಿದ್ದ ಮಸಿಯ ಡಬ್ಬಿಯನ್ನು ಕಸಿದುಕೊಂಡರು. ಪೊಲೀಸರ ಕೈಯಲ್ಲಿದ್ದ ಮಸಿಯನ್ನು ಕಾರ್ಯಕರ್ತರು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ವೇಳೇ ಪೊಲೀಸರ ಸಮವಸ್ತ್ರದ ಮೇಲೆ ಮಸಿ ಚೆಲ್ಲಿತು.
ದುಷ್ಕರ್ಮಿಗಳನ್ನು ಬಂಧಿಸಿಲ್ಲ ಯಾಕೆ?: ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಡವಿಸ್ವಾಮಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಭಾರತ ವಿರೋಧಿ ಘೋಷಣೆ ಕೂಗಿದ ದುಷ್ಕರ್ಮಿಗಳನ್ನು ಈವರೆಗೆ ಬಂಧಿಸಲಾಗಿಲ್ಲ. ಪಾಕಿಸ್ತಾನ ಪರ ಮನಸ್ಸುಗಳಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಕ್ಷದ ಮುಖಂಡ ಗಣಪಾಲ್ ಐನಾಥ ರೆಡ್ಡಿ ಮಾತನಾಡಿ, ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು
ಸಮರ್ಥಿಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರ ನಡೆ ಅತ್ಯಂತ ನಾಚಿಕೆಗೇಡು. ಕರ್ತವ್ಯ ನಿರ್ವಹಿಸಲು ಬಂದಿದ್ದ ಮಾಧ್ಯಮಗಳ ಮೇಲೂ ಹರಿಹಾಯ್ದಿರುವ ಸೈಯದ್ ನಾಸಿರ್ ಹುಸೇನ್ ಅವರ ನಡೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕು ಎಂದರು.ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳ್, ವೀರಶೇಖರ ರೆಡ್ಡಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎಸ್. ಸಿದ್ದಪ್ಪ ಮಾತನಾಡಿದರು. ಪಕ್ಷದ ಹಿರಿಯ ಮುಖಂಡರಾದ ಎಸ್. ಗುರುಲಿಂಗನಗೌಡ, ಡಾ. ಮಹಿಪಾಲ್, ಮಾರುತಿ ಪ್ರಸಾದ್, ಕಲ್ಲುಕಂಬ ಜಯಗೋಪಾಲ್, ಓಬಳೇಶ್, ಎಸ್. ರಾಘವೇಂದ್ರ ಛಲವಾದಿ, ಸಿದ್ದೇಶ್, ರಾಘವೇಂದ್ರ ಯಾದವ್, ಮಹಿಳಾ ಮೋರ್ಚಾದ ಸುಗುಣ, ನಾಗವೇಣಿ, ಎಸ್ಟಿ ಮೋರ್ಚಾದ ರಘು, ನಾಗವೇಣಿ, ಮದಿರೆ ಕುಮಾರಸ್ವಾಮಿ, ಕೆ.ಆರ್. ಮಧು, ನಟರಾಜಗೌಡ, ಸುದರ್ಶನ ರೆಡ್ಡಿ, ಸುಮಾರೆಡ್ಡಿ, ಕೆ.ಆರ್. ಮಲ್ಲೇಶ್ ಕುಮಾರ್ ಸೇರಿದಂತೆ ನೂರಾರು ಕಾರ್ಯತಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮುನ್ನೆಚ್ಚರಿಕೆಯಾಗಿ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಅವರ ಕಚೇರಿ ಹಾಗೂ ಮನೆಗೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಯುವಕರು ಮುನ್ನುಗ್ಗಿದ್ದರು... ಹಿರಿಯರು ಸಾಕು ಬನ್ನಿ ಎಂದ್ರು....ಪಾಕಿಸ್ತಾನ ಪರ ಘೋಷಣೆ ಹಿನ್ನಲೆಯಲ್ಲಿ ನಗರದ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಅವರ ಕಚೇರಿ ಮುಂಭಾಗ ಜರುಗಿದ ಪ್ರತಿಭಟನೆ ವೇಳೆ ಯುವ ಮೋರ್ಚಾದ ಯುವಕರು ಪ್ರತಿಭಟನೆಯ ಉತ್ಸಾಹದಲ್ಲಿ, ಭಾರತ ಮಾತಕೀ ಜೈ, ನಾಸಿರ್ ಹುಸೇನ್ ಗೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಲೇ ಕಚೇರಿ ಮುಂಭಾಗದ ನಾಮಫಲಕಕ್ಕೆ ಮಸಿ ಬಳಿಯಲು ಮುಂದಾಗಿದ್ದರು. ಇತ್ತ ಪಕ್ಷದ ಹಿರಿಯ ಮುಖಂಡರು, "ಹೋರಾಟ ಸಾಕು ಬನ್ನಿ. ನಮ್ಮದು ಸಾಂಕೇತಿಕ ಹೋರಾಟವಷ್ಟೇ " ಎಂದು ಹೇಳುತ್ತಿರುವುದು ಕಂಡುಬಂತು.
ಒಂದೆಡೆ ಯುವ ಮೋರ್ಚಾ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸರ ನಡುವೆ ವಾಗ್ವಾದ ನಡೆಸುತ್ತಿದ್ದರೆ, ಇತ್ತ ಪಕ್ಷದ ಕೆಲ ಹಿರಿಯರು ಯುವ ಮೋರ್ಚಾದ ಮುಖಂಡರಿಗೆ ಮೊಬೈಲ್‌ಗೆ ಕರೆ ಮಾಡಿ, "ಸಾಕು ಮಾಡಿ. ಅದು ಸರ್ಕಾರಿ ಕಚೇರಿ. ಏನಾದರೂ ಸಮಸ್ಯೆಯಾದೀತು. ಹೋರಾಟ ಸಾಕು ಮಾಡಿಬಿಡಿ " ಎಂದು ಹೇಳುತ್ತಿರುವುದು ಕಂಡುಬಂತು.