- ಎಸ್. ತನ್ಮಯಿಗೆ ಪ್ರಧಾನಿ ನರೇಂದ್ರಮೋದಿಯಿಂದ ಬಹುಮಾನ ಮೈಸೂರು ಮುಡಿಗೆ ಮತ್ತೊಂದು ಹೆಮ್ಮೆಯ ಗರಿ---
ಕನ್ನಡಪ್ರಭ ವಾರ್ತೆ ಮೈಸೂರುರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ಶುಕ್ರವಾರ ನಡೆದ 75ನೇ ಗಣರಾಜ್ಯೋತ್ಸವದ ಪಥಸಂಚಲದಲ್ಲಿ ಮೈಸೂರಿನ ತಾಂಡವಪುರದ ಮಹಾರಾಜ ಎಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಎಸ್. ತನ್ಮಯಿ 13 ಕರ್ನಾಟಕ ಬೇಟಾಲಿಯನ್ ಎನ್ ಸಿ ಸಿ ತಂಡವನ್ನು ಪ್ರತಿನಿಧಿಸಿದ್ದರು.
ರಿಪಬ್ಲಿಕ್ ಡೇ ಕ್ಯಾಂಪ್ (ಆರ್.ಡಿ.ಸಿ) ಶಿಬಿರಗಳಲ್ಲಿ ಸುಮಾರು 3000 ಕ್ಕೂ ಹೆಚ್ಚು ಎನ್.ಸಿ.ಸಿ ಕೆಡೆಟ್ ಗಳು ಪಾಲ್ಗೊಂಡು ಅದರಲ್ಲಿ ಕೇವಲ 119 ಕೆಡೆಟ್ ಗಳಿಗೆ ಮಾತ್ರ ಪಥಸಂಚಲನ, ಭರತನಾಟ್ಯ, ಗಾಯನ, ಬ್ಯಾಂಡ್, ಯಕ್ಷಗಾನ, ಹುಲಿವೇಷ, ಫ್ಲಾಗ್ ಪೋಸ್ಟ್, ಮುಂತಾದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಾಗೂ ಗಣ್ಯಾತಿಗಣ್ಯರನ್ನು ಭೇಟಿ ಮಾಡುವ ಮತ್ತು ಅವರೊಂದಿಗೆ ಸಂವಾದ, ಭೋಜನಕೂಟ ಮತ್ತು ಫೋಟೋ ಸೆಷನ್ಸ್ ನಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಲಿದೆ.ದೇಶದ ಒಟ್ಟು 17 ಎನ್.ಸಿ.ಸಿ ತುಕಡಿಗಳು ಭಾಗವಹಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಕರ್ನಾಟಕ ತಂಡವು, ಮಹಾರಾಷ್ಟ್ರ ನಂತರ ಒಟ್ಟಾರೆಯಾಗಿ 2ನೇ ಅತ್ತ್ಯುತ್ತಮ ತಂಡವಾಗಿ ಹೊರಹೊಮ್ಮಿತು. ತಂಡದ ಸದಸ್ಯೆ ಮೈಸೂರಿನ ಎಸ್. ತನ್ಮಯಿ. ಪ್ರಧಾನಿ ನರೇಂದ್ರಮೋದಿ ಅವರಿಂದ ಬಹುಮಾನ ಪಡೆದರು.
ತನ್ಮಯಿ ಮೈಸೂರಿನ ಶ್ರೀರಾಂಪುರ 2ನೇ ಹಂತ, ಬೆಮಲ್ ಬಡಾವಣೆಯಲ್ಲಿ ವಾಸವಾಗಿರುವ ರಾಜರಾಜೇಶ್ವರಿ ಹಾಗೂ ಪ್ರಮತಿ ಎಜುಕೇಷನಲ್ ಇನ್ಸ್ಟಿಟ್ಯೂಷನ್ ನ ಪಿಯುಸಿ ವಿಭಾಗದ ಶೈಕ್ಷಣಿಕ ಸಲಹೆಗಾರ ಮತ್ತು ಸಂಯೋಜಕ ಎ.ಜೆ. ಶ್ರೀನಿವಾಸ್ ಅವರ ಪುತ್ರಿ. ತಮ್ಮ ಶಾಲಾ ಶಿಕ್ಷಣವನ್ನು ಬೆಳಗಾವಿ ಜೆಲ್ಲೆ ಬೈಲಹೊಂಗಲ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಮಾಡಿರುತ್ತಾರೆ.2019ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಪ್ರಶಂಸಾ ಪತ್ರ ಹಾಗೂ ಚಿನ್ನದ ಪಾರಿತೋಷಕವನ್ನು ಪಡೆದು ಮೈಸೂರಿಗೆ ಕೀರ್ತಿ ತಂದಿದ್ದಾರೆ ಎಂದು ತಮ್ಮ ಮಗಳ ಸಾಧನೆಯ ಬಗ್ಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವದ ಪಥಸಂಚಲದ ಇತಿಹಾಸದಲ್ಲಿಯೇ ಈ ಬಾರಿ ಮಹಿಳೆಯರ ಪಾಲ್ಗೊಳ್ಳುವಿಕೆ ಗರಿಷ್ಠವಾಗಿತ್ತು. ನಮ್ಮ ವಿದ್ಯಾರ್ಥಿನಿ ಸಾಧನೆ ನಮಗೆಲ್ಲ ಹೆಮ್ಮೆ ತಂದಿದೆ, ದೇಶದೆಲ್ಲೆಡೆ ನಾರಿಶಕ್ತಿ ಆನವರಣಗೊಂಡಿದೆ ಎಂದು ಮಹಾರಾಜ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ರಕ್ಷಿತ್ ಕೃಷ್ಣೆಗೌಡ ತಿಳಿಸಿದರು.